ಉಳ್ಳಾಲ: ಉಳ್ಳಾಲ ನಗರಸಭೆ ವ್ಯಾಪ್ತಿಯಲ್ಲಿ ರೂ.341 ಕೋಟಿ ರೂ ಅನುದಾನಗಳ ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದ್ದು, ಚುನಾವಣಾ ಪೂರ್ವ ಹೇಳಿದಂತೆ ಕ್ಷೇತ್ರದುದ್ದಕ್ಕೂ ಶಾಸಕ, ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರು ನುಡಿದಂತೆ ನಡೆದುಕೊಂಡಿದ್ದಾರೆ ಎಂದು ಉಳ್ಳಾಲ ನಗರಸಭೆ ಮಾಜಿ ಉಪಾಧ್ಯಕ್ಷ , ಹಾಲಿ ಕೌನ್ಸಿಲರ್ ಅಯೂಬ್ ಮಂಚಿಲ ಹೇಳಿದ್ದಾರೆ.
ತೊಕ್ಕೊಟ್ಟು ಸೇವಾಸೌಧದಲ್ಲಿರುವ ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಕನಸಿನ ಕೂಸು ಬಹುಕೋಟಿ ಯೋಜನೆಯಾದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ. ನೀರನ್ನು ಸಮರ್ಪಕವಾಗಿ ಮನೆಗಳಿಗೆ ತಲುಪಲು ಪೈಪ್ ಲೈನ್ ಕಾಮಗಾರಿಗೆ ರೂ. 74.00 ಕೋಟಿ ಮಂಜೂರಾಗಿ ಕಾಮಗಾರಿ ನಡೆಯುತ್ತಿದೆ. ಮಂಚಿಲ-14ನೇ ವಾರ್ಡಿನ ತೊಕ್ಕೊಟ್ಟು ಒಳಪೇಟೆ, ಮಂಚಿಲ, ಸಹಾರ ರಸ್ತೆ, ಮಾರ್ಗತಲೆ, ಕಟ್ಟತಲೆ, ಪರಪು, ಹೊಯಿಗೆ, ಹಿತ್ಲು ಕಡೆಗಳಲ್ಲಿಯೂ ಕಾಮಗಾರಿ ಆರಂಭಗೊಂಡಿದೆ. ಹೊಯಿಗೆಹಿತ್ಲು ಹಿನ್ನೀರಿನ ಪ್ರದೇಶದಲ್ಲಿ ರೂ.30 ಲಕ್ಷ ವೆಚ್ಛದಲ್ಲಿ ತಡೆಗೋಡೆ ಕಾಮಗಾರಿ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಹಳೇಕೋಟೆ ಸಾರ್ವಜನಿಕ ರಸ್ತೆ ಜರಿದು ತಡೆಗೋಡೆ ನಿರ್ಮಾಣಕ್ಕೆ ರೂ.1 ಕೋಟಿ ರೂ ಅನುದಾನ ಬಿಡುಗಡೆಗೊಳಿಸಿದ್ದಾರೆ, ಕೋಟೆಪುರದಿಂದ ಬೋಳಾರಕ್ಕೆ ಸಮರ್ಪಕ ಸೇತುವೆ ನಿರ್ಮಾಣಕ್ಕೆ 200 ಕೋಟಿ ರೂ.ವನ್ನು ಸರಕಾರದಿಂದ ಮಂಜೂರುಗೊಳಿಸಿದ್ದಾರೆ. ಕೋಡಿ, ಕೋಟೆಪುರದಲ್ಲಿ 5.00 ಕೋಟಿ ವೆಚ್ಚದಲ್ಲಿ ಮೀನುಗಾರಿಕಾ ಜೆಟ್ಟಿ, ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆಯಿಂದ ರೂ.7 ಕೋಟಿ , ತೊಕ್ಕೊಟ್ಟು ಜಂಕ್ಷನ್, ಕೊಣಾಜೆ ರಸ್ತೆ ಅಭಿವೃದ್ಧಿಗೆ ರೂ.25 ಕೋಟಿ ಅನುದಾನ ಬಿಡುಗಡೆಗೊಳಿಸಿ ಕಾಮಗಾರಿ ಪ್ರಗತಿಯಲ್ಲಿದೆ. ಅಮೃತ ನಗರೋತ್ಥಾನ ಯೋಜನೆಯಡಿ ರೂ.30 ಕೋಟಿ ಅನುದಾನದಲ್ಲಿ ನಗರಸಭೆಯ ಎಲ್ಲಾ ವಾರ್ಡುಗಳ ಅಭಿವೃದ್ಧಿಗೆ ಹಂಚಲಾಗಿದೆ ಎಂದರು.
ಸುದ್ಧಿಗೋಷ್ಠಿಯಲ್ಲಿ ಉಳ್ಳಾಲ ನಗರಸಭೆ ಅಧ್ಯಕ್ಷೆ ಶಶಿಕಲಾ, ಮಂಚಿಲ ಜುಮಾ ಮಸೀದಿ ಪ್ರ.ಕಾ. ಶರೀಫ್, ಅಲ್ ಫುರ್ಕಾನ್ ಜುಮಾ ಮಸೀದಿ ಅಲೇಕಳ ಅಧ್ಯಕ್ಷ ಬಿ.ಹೆಚ್.ಫಾರುಕ್, ಮಾರ್ಗತಲೆ ಜುಮಾ ಮಸೀದಿ ಉಪಾಧ್ಯಕ್ಷ ಹನೀಫ್ ಮಾರ್ಗತಲೆ, ತೊಕ್ಕೊಟ್ಟು ಪೆರ್ಮನ್ನೂರು ಸಂತ ಸೆಬೆಸ್ತಿಯನ್ನರ ಚರ್ಚಿನ ಉಪಾಧ್ಯಕ್ಷ ಅರುಣ್ ಡಿಸೋಜ, ನಗರಸಭೆ ಸದಸ್ಯ ಅಝೀಝ್ ಕೋಡಿ, ಮೊಹಮ್ಮದ್ ಆಲಿ, ನವಾಝ್ ಮಾರ್ಗತಲೆ, ಸಾಲಿಯಾನ್ ಮೂಲಸ್ಥಾನ ಮಾರ್ಗತಲೆ ಅರ್ಚಕರಾಗಿರುವ ಮನೋಜ್ ಸ್ಟೋರ್ ಹೌಸ್ ಉಪಸ್ಥಿತರಿದ್ದರು.
ತೊಕ್ಕೊಟ್ಟು ಒಳಪೇಟೆ ಅಂಡರ್ಪಾಸ್ಗೆ ರೆಡ್ ಸಿಗ್ನಲ್
ತೊಕ್ಕೊಟ್ಟು ಒಳಪೇಟೆಯಿಂದ ರಾ.ಹೆ.66 ಕ್ಕೆ ಸಂಪರ್ಕಿಸುವ ಕಿರಿದಾದ ಅಂಡರ್ ಪಾಸ್ ಅನ್ನು ರೈಲ್ವೇ ಇಲಾಖೆ ಮುಚ್ಚಿತ್ತು. ಅಲ್ಲದೆ ಒಳಪೇಟೆಗೆ ಹೋಗುವ ದಾರಿಯಲ್ಲಿ ರೈಲ್ವೇ ಇಲಾಖೆ ಬೇಲಿಯನ್ನು ಅಳವಡಿಸಿದೆ. ಈ ಕುರಿತು ಅಂಡರ್ ಪಾಸ್ ಗೆ ಒತ್ತಾಯಿಸಿ ಪ್ರತಿಭಟನೆಗಳು ನಡೆದಿತ್ತು. ಈ ಕುರಿತು ಉಳ್ಳಾಲ ನಗರಸಭೆಯ ಸಭೆಯಲ್ಲಿ ಪ್ರಸ್ತಾಪಿಸಿ ರೈಲ್ವೇ ಇಲಾಖೆಗೆ ಅಂಡರ್ ಪಾಸ್ ತೆರವಿಗೆ ನಿರ್ಣಯ ಕೈಗೊಂಡು ರೈಲ್ವೇ ಇಲಾಖೆಗೆ ಪತ್ರ ಬರೆಯಲಾಗಿತ್ತು. ಇದಕ್ಕೆ ಸಂಬಂಧಿಸಿ ರೈಲ್ವೇ ಇಲಾಖೆಯಿಂದ ಪ್ರತಿಕ್ರಿಯೆ ದೊರೆತಿದ್ದು, ಮುಚ್ಚಿರುವುದನ್ನು ತೆರೆಯುವುದು ಅಸಾಧ್ಯ, ಆದರೆ ನೂತನ ಅಂಡರ್ ಪಾಸ್ ನಗರಸಭೆ ಹಾಗೂ ರೈಲ್ವೇ ಇಲಾಖೆ ಜಂಟಿಯಾಗಿ 60-40 ಮಾದರಿಯಲ್ಲಿ ನಡೆಸಲು ಸೂಚನೆಯನ್ನು ನೀಡುವ ಮೂಲಕ ದಶಕಗಳ ಬೇಡಿಕೆಗೆ ರೆಡ್ ಸಿಗ್ನಲ್ ದೊರೆತಂತಾಗಿದೆ.