ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಮುಡಿಪು: ಮಂಗಳೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸರ್ವ ಧರ್ಮ ಕ್ಷೇತ್ರಗಳ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಸುಮಾರು 7 ಕೋಟಿಗಳಿಗೂ ಮಿಕ್ಕಿ ಅನುದಾನವನ್ನು ಬಿಡುಗಡೆ ಮಾಡಿದ್ದು, ಬಾಕಿ ಉಳಿದಿರುವ ಅನುದಾನಗಳ ಬಿಡುಗಡೆಗೆ ಸರಕಾರಕ್ಕೆ ಮನವಿ ಮಾಡಿದ್ದು ಶೀಘ್ರದಲ್ಲಿ ಬಿಡುಗಡೆಯಾಗಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ತಿಳಿಸಿದರು.

ಅವರು ಮುಡಿಪು ಸಂತ ಜೋಸೆಫ್ ವಾಝರ ಪುಣ್ಯ ಕ್ಷೇತ್ರದಲ್ಲಿ ಪ್ರವಾಸೋಧ್ಯಮ ಇಲಾಖೆಯಡಿ ನಿರ್ಮಾಣಗೊಳ್ಳಲಿರುವ ಯಾತ್ರಿ ನಿವಾಸದ ಪ್ರಥಮ ಹಂತದ ಸುಮಾರು 50 ಲಕ್ಷ ರೂ. ಅನುದಾನದ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಚುನಾವಣೆ ಸಂದರ್ಭದಲ್ಲಿ ಮುಡಿಪು ಕ್ಷೇತ್ರದ ಅಭಿವೃದ್ಧಿಗೆ ಮಾಡಿರುವ ವಾಗ್ದಾನದಂತೆ ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯ ಅಭಿವೃದ್ಧಿಗೆ 1.15 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಉಳ್ಳಾಲ ದರ್ಗಾ ಉರೂಸ್ ಸಂದರ್ಭದಲ್ಲಿ ಮೂಲಭೂತ ಸೌಕರ್ಯ ಆಭಿವೃದ್ಧಿಗೆ 2 ಕೋಟಿ ರೂ. ಬಿಡುಗಡೆಯಾಗಿದೆ.
ಪಾವೂರು ದೇವಂದಬೆಟ್ಟದಲ್ಲಿ ಶ್ರೀ ಸೋಮನಾಥ ದೇವಸ್ಥಾನ ಮೂಲಭೂತ ಸೌಕರ್ಯ ಆಭಿವೃದ್ಧಿಗೆ 1. 10ಕೋಟಿ ರೂ. ಅನುದಾನ ಪ್ರವಾಸೋಧ್ಯಮ ಮತ್ತು ಇತರ ಇಲಾಖೆಗಳ ಸಹಯೋಗದಿಂದ ಬಿಡುಗಡೆಯಾಗಿದ್ದು, ಪ್ರವಾಸೋಧ್ಯಮ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಇಲಾಖೆ, ಎಸ್‍ಸಿಎಸ್‍ಟಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಸಮುದಾಯ ಭವನ ನಿರ್ಮಾಣ, ದೇವಸ್ಥಾನಗಳಿಗೆ, ಚರ್ಚ್, ಮಸೀದಿಗಳ ಮೂಲಭೂತ ಸೌಕರ್ಯ ಅಭಿವೃದ್ಧಿಗೆ 5 ಲಕ್ಷ ದಿಂದ 30 ಲಕ್ಷ ರೂ.ವರೆಗೆ ಅನುದಾನ ನೀಡಿದ್ದು, ಕೆಲವೊಂದು ಕ್ಷೇತ್ರಗಳಿಗೆ ಅನುದಾನ ಬಿಡುಗಡೆಯ ಹಂತದಲ್ಲಿದೆ ಎಂದರು.
ಮಂಗಳೂರು ಧರ್ಮಪ್ರಾಂತ್ಯದ ಮುಖ್ಯ ಧರ್ಮಗುರು ವಂದನೀಯ ಡೆನ್ನಿಸ್ ಮೋರಾಸ್ ಪ್ರಭು ನೂತನ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಮಂಗಳೂರು ದಕ್ಷಿಣ ಪ್ರಾಂತ್ಯದ ಧರ್ಮಗುರು ಹಾಗೂ ತೊಕ್ಕೊಟ್ಟು ಪೆರ್ಮನ್ನೂರು ಚರ್ಚ್‍ನ ಧರ್ಮಗುರುಗಳಾದ ವಂದನೀಯ ಫಾದರ್ ಜೆ.ಪಿ.ಸಲ್ದಾನ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಕೆ.ಆರ್.ಐ.ಡಿ.ಎಲ್‍ನ ಕಾರ್ಯಕಾರಿ ಅಭಿಯಂತರ ಶೇಷಾದ್ರಿ, ಬಾಳೆಪುಣಿ- ಕೈರಂಗಳ ಗ್ರಾಮ ಪಂಚಾಯತ್‍ನ ಅಧ್ಯಕ್ಷೆ ಲೀಲಾವತಿ, ಉಪಾಧ್ಯಕ್ಷೆ ವನಿತ ಬಿ. ರೈ, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಹಾಸ್ ಕರ್ಕೇರ, ಉಪಾಧ್ಯಕ್ಷ ಪ್ರಶಾಂತ್ ಕಾಜವ, ಪ್ರ, ಕಾರ್ಯದರ್ಶಿ ಜಲೀಲ್ ಮೋಂಟುಗೋಳಿ, ಕುರ್ನಾಡು ಗ್ರಾಮ ಪಂಚಾಯತ್ ಮಾಜಿ ಆದ್ಯಕ್ಷ ದೇವದಾಸ್ ಭಂಡಾರಿ, ಪಜೀರು ಗ್ರಾಮ ಪಂಚಾಯತ್ ಅಧ್ಯಕ್ಷ ಸೀತಾರಾಮ ಶೆಟ್ಟಿ, ಸಜಿಪಪಡು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಹೆನ್ರಿ ಡಿ.ಸೋಜ, ಇರಾ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ, ಮುಖಂಡರಾದ ಪದ್ಮನಾಭ ನರಿಂಗಾನ, ನಾಸಿರ್ ನಡುಪದವು, ತಾಲೂಕು ಪಂಚಾಯತ್ ಸದಸ್ಯ ಮಹಮ್ಮದ್ ಮೋನು ಪಾವೂರು, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ರೋಶನ್ ಡಿ.ಸೋಜ ಉಪಸ್ಥಿತರಿದ್ದರು.
ಸಂತ ಜೋಸೆಫ್ ವಾಝ್ ಪುಣ್ಯ ಕ್ಷೇತ್ರದ ಧರ್ಮಗುರು ರೆ. ಫಾ. ಬೆಂಜಮಿನ್ ಪಿಂಟೋ ಸ್ವಾಗತಿಸಿದರು.