ಉಳ್ಳಾಲ : ಮುಂದಿನ ಡಿಸೆಂಬರ್ ತಿಂಗಳೊಳಗಡೆ 24 ಗಂಟೆ ಕುಡಿಯುವ ನೀರನ್ನು ಉಳ್ಳಾಲ ತಾಲೂಕಿನ ಜನತೆಗೆ ಪುರೈಸಲಾಗುವುದು. ಈಗಾಗಲೇ ಪ್ರತಿ ಮನೆಗಳಿಗೆ ಮೀಟರ್ ಅಳವಡಿಸುವ ಕಾರ್ಯ ಆರಂಭಿಸಲಾಗಿದೆ. ಹಾಗೆಯೇ ಪೈಪ್ ಲೈನ್ ಕಾಮಗಾರಿ ಕೈಗೊಳ್ಳುವಾಗ ಹಣ ಪಡೆದುಕೊಂಡಲ್ಲಿ ನೇರವಾಗಿ ದೂರು ನೀಡಿ ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಹೇಳಿದರು.
ಅವರು ಕೋಟೆಕಾರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಜಲಾಲ್ ಬಾಗ್ ಪಾನೀರು ಸಂಪರ್ಕಿಸುವ ಕಾಂಕ್ರೀಟಿಕೃತ ರಸ್ತೆಯನ್ನು ಉದ್ಘಾಟಿಸಿದರು






ಕೋಟೆಕಾರು ಪ.ಪಂ ವ್ಯಾಪ್ತಿಯ ಜಲಾಲ್ಬಾಗ್ ನಿಂದ ಪನೀರ್ ಸೈಟ್ ಸಂಪರ್ಕಿಸುವ ರಸ್ತೆಗೆ ಬಹಳಷ್ಟು ಬೇಡಿಕೆಯಿತ್ತು. ತೊಕ್ಕೊಟ್ಟು, ದೇರಳಕಟ್ಟೆ, ಮೆಲ್ಕಾರ್, ನಾಟೆಕಲ್ ಸಂಪರ್ಕಿಸುವ ಲಿಂಕ್ ರಸ್ತೆಯೂ ಆಗಿರುವುದರಿಂದ ಹೆಚ್ಚಿನ ಒತ್ತು ನೀಡಿ ಪಟ್ಟಣ ಪಂಚಾಯತ್ ನಲ್ಲಿ ಆಡಳಿತವಿಲ್ಲದ ಸಂದರ್ಭ ತಾನು ವಿಶೇಷ ಅನುದಾನವನ್ನು ಒದಗಿಸಿದ್ದೆನು. ಆದರೆ ಜಾಗದ ತಕರಾರಿನಿಂದ ಕಾಮಗಾರಿ ವಿಳಂಬವಾಯಿತು. ಆದರೆ ಕಣಚೂರು ಮೋನು ಹಾಗೂ ಲವೀನಾ ಕುಟುಂಬಸ್ಥರ ಸಹಕಾರದಿಂದಾಗಿ ಸುಸಜ್ಜಿತ ರಸ್ತೆ ನಿರ್ಮಾಣ ಮಾಡಲು ಸಾಧ್ಯವಾಗಿದೆ. ಅಲ್ಲದೆ ಹೆಚ್ಚುವರಿ ರೂ. 3ಲಕ್ಷ ಅನುದಾನವನ್ನು ಪೂರೈಸಲಾಗಿದೆ ಎಂದ ಅವರು ಜಲಾಲ್ ಬಾಗ್ ಪ್ರದೇಶವನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗಿದ್ದು, ಮೊದಲ ಹಂತವಾಗಿ ಮಸೀದಿ ಕ್ರಾಸ್, ದ್ವಿತೀಯ ಹಂತವಾಗಿ ಟರ್ನಿಂಗ್ ನಿಂದ ಆರೀಫ್ ಮನೆವರೆಗೆ ಅಭಿವೃದ್ಧಿ ಕಡೇಯದಾಗಿ ರಸ್ತೆಯ ಕೊನೆಯವರೆಗೂ ಅಭಿವೃದ್ಧಿ ಕಾಮಗಾರಿ ನಡೆಸಲಾಗಿದೆ. ಮುಂದಿನ ದಿನಗಳಲ್ಲಿಯೂ ಜಲಾಲ್ ಬಾಗ್ ಪಾನೀರು ವಾರ್ಡಿಗೆ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲಾಗುವುದು . ಡಿಸೆಂಬರ್ ತಿಂಗಳೊಳಗೆ ಉಳ್ಳಾಲ ತಾಲೂಕಿನ ಉದ್ದಕ್ಕೂ 24ಗಂಟೆ ಕುಡಿಯುವ ನೀರಿನ ಯೋಜನೆ ಆರಂಭವಾಗುವುದು. ಪ್ರತಿಯೊಂದು ಮನೆಗಳಿಗೂ ಮೀಟರ್ ಅಳವಡಿಕೆ ಮಾಡಲಾಗಿದೆ. ಬಡವರಿಗೂ ಅನುಕೂಲಕರವಾಗುವ ಉದ್ದೇಶದಿಂದ ಮೀಟರ್ ಅಳವಡಿಸಲಾಗಿದ್ದು, ಪೈಪ್ ಲೈನ್ ಫಿಟಿಂಗ್ ಕಾಮಗಾರಿ ಸಂಪೂರ್ಣ ಉಚಿತವಾಗಿದೆ. ಕಾಮಗಾರಿ ನಡೆಸುವವರು ಹಣ ಕೇಳುತ್ತಿರುವ ದೂರು ಕೇಳಿಬಂದಿದೆ ಎಂದರು.
ಈ ಸಂದರ್ಭ ಮುಡಾ ಅಧ್ಯಕ್ಷರಾದ ಸದಾಶಿವ ಉಳ್ಳಾಲ್, ಕೋಟೆಕಾರ್ ಪ. ಪಂಚಾಯತ್ ಮಾಜಿ ಕೌನ್ಸಿಲರ್ ಡಿ.ಎಮ್ ಮಹಮ್ಮದ್
ಕೌನ್ಸಿಲರ್ ಆಯಿಶಾ ಡಿ ಅಬ್ಬಾಸ್, ಜಲಾಲ್ ಬಾಗ್ ಅರಫಾ ಮಸೀದಿ ಅಧ್ಯಕ್ಷ ಹೈದರ್ ಪರ್ತಿಪ್ಪಾಡಿ, ಜಲಾಲ್ ಬಾಗ್ ಫ್ರೆಂಡ್ಸ್ ಅಸೋಸಿಯೇಷನ್ ಅಧ್ಯಕ್ಷ ಅಲಿ ಹಸನ್, ಸಫಿಯ ಪನೀರ್, ಹಮೀದ್ ಪಜೀರ್, ಹಮೀದ್ ಜಲಾಲ್ ಬಾಗ್, ಹಾಗೂ ಜಲಾಲ್ ಬಾಗ್ ನಾಗರಿಕರು ಉಪಸ್ಥಿತರಿದ್ದರು.

