ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಸೋಮೇಶ್ವರ: ಪುರಾಣ ಪ್ರಸಿದ್ಧ ಸೋಮೇಶ್ವರದ ಶ್ರೀ ಸೋಮನಾಥ ಸ್ವಾಮಿ ಕ್ಷೇತ್ರದಲ್ಲಿ ಶ್ರಾವಣ ಅಮವಾಸ್ಯೆಗೆ ನಡೆಯುವ ತೀರ್ಥ ಸ್ನಾನಕ್ಕೆ ಊರು-ಪರವೂರುಗಳಿಂದ ಸಾವಿರಾರು ಭಕ್ತಾಧಿಗಳು ಬಂದು ಬೆಳ್ಳಂಬೆಳಗ್ಗಿನಿಂದಲೇ ಪವಿತ್ರ ಸ್ನಾನಗೈದು ಕೃತಾರ್ಥರಾದರು.

ವೀರರಾಣಿ ಅಬ್ಬಕ್ಕ ತನ್ನ ಅಭೀಷ್ಠ ನೆರವೇರಿದಕ್ಕಾಗಿ ಬೆಳ್ಳಿಯ ಜಲದ್ರೋಣಿಯನ್ನು ಸಮರ್ಪಿಸಿದ ಈ ಪುಣ್ಯ ಕ್ಷೇತ್ರದಲ್ಲಿ ಇಂದಿಗೂ ಸೋಮನಾಥ ಸ್ವಾಮಿ ಲಿಂಗದ ಮೇಲೆ ಪರಿಶುದ್ಧ ಜಲದ ಅಭಿಷೇಕವಾಗುತ್ತದೆ. ಇದೇ ರೀತಿ ಇಲ್ಲಿ ವರ್ಷಕ್ಕೊಮ್ಮೆ ನಡೆಯುವ ತೀರ್ಥಸ್ನಾನವು ಭಕ್ತರನ್ನು ಪುಳಕಿತಗೊಳಿಸುತ್ತದೆ.
ತೀರ್ಥಸ್ನಾನಕ್ಕೆ ತೆರಳುವ ಭಕ್ತರು ಎಲೆ ಅಡಿಕೆಯನ್ನು ಖರೀದಿಸಿ ಕಡಲ ತಡಿಯಲ್ಲಿ ತಲೆಗೆ ಆವಣಿಸಿ ಗಂಗೆಗೆ ಸಮರ್ಪಿಸಿ ಕಡಲ ಸ್ನಾನಗೈಯ್ಯುತ್ತಾರೆ.
ರೋಮಾಂಚನಕಾರಿ ಅನುಭವ ನೀಡುವ ರುದ್ರಪಾದೆಗೆ ಸಮುದ್ರದ ಬೆಳ್ನೊರೆಗಳು ಅಪ್ಪಳಿಸುವ ಜಾಗದಲ್ಲಿ ಭಕ್ತಾಧಿಗಳು ಸಮುದ್ರ ಸ್ನಾನಗೈಯ್ಯುತ್ತಾರೆ. ಎರಡು ವರ್ಷದ ಮಗುವಿನಿಂದ ಹಿಡಿದು 80 ವರ್ಷದ ವೃದ್ಧರವರೆಗೆ ಇಲ್ಲಿ ಪವಿತ್ರ ಸ್ನಾನಗೈಯ್ಯುತ್ತಾರೆ. ಭಕ್ತಾಧಿಗಳ ರಕ್ಷಣೆಗಾಗಿ ಬೆಳ್ಳಂಬೆಳಗ್ಗಿನಿಂದಲೇ ಉಳ್ಳಾಲದ ಜೀವರಕ್ಷಕ ಈಜು ತಂಡ ಕಣ್ಣಿಗೆ ಎಣ್ಣೆ ಹಾಕಿದಂತೆ ಕಾಯುವ ದೃಶ್ಯ ಕಂಡುಬರುತ್ತದೆ. ಕಡಲ ಸ್ನಾನದ ಬಳಿಕ ಭಕ್ತರು ಗದಾತೀರ್ಥದಲ್ಲಿ ಮಿಂದು ಶ್ರೀ ಕ್ಷೇತ್ರಕ್ಕೆ ತೆರಳಿ ಪೂಜೆ ಸಲ್ಲಿಸುತ್ತಾರೆ. ಶ್ರೀ ಕ್ಷೇತ್ರದಲ್ಲಿ ರುದ್ರಾಭಿಷೇಕಕ್ಕೆ ವಿಶೇಷ ಮಹತ್ವ ಇರುವುದರಿಂದ ದೀಪ ಹಚ್ಚಿ ಪೂಜೆ ಸಲ್ಲಿಸಿ ಕೃತಾರ್ಥರಾಗುತ್ತಾರೆ.