ಉಳ್ಳಾಲ್ ನ್ಯೂಸ್ ನೆಟ್ ವರ್ಕ್


ಕೋಟೆಕಾರು : ಕೋಟೆಕಾರು ಪಂಚಾಯಿತಿ ಪಟ್ಟಣ ಪಂಚಾಯಿತಿ ಆಗಿ ಮೇಲ್ದರ್ಜೆಗೆ ಏರಿದ ನಂತರ ಅಧಿಕಾರಿಗಳೇ ಜನರ ಕೈಗೆ ಸಿಗುತ್ತಿಲ್ಲ, ಪಂ.ಸದಸ್ಯರ ಅಧಿಕಾರವನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸಿರುವ ಜಿಲ್ಲಾಡಳಿತ ಕಳೆದ 8 ತಿಂಗಳಿನಿಂದ ಗ್ರಾಮದ ಜನರ ಸಮಸ್ಯೆಗಳಿಗೆ ಸ್ಪಂಧಿಸದೆ ಬೇಜವಾಬ್ದಾರಿ ಪ್ರದರ್ಶಿಸುತ್ತಿದೆ ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುನಿಲ್ ಕುಮಾರ್ ಬಜಾಲ್ ಹೇಳಿದ್ದಾರೆ.



ಅವರು ಸಿಪಿಐಎಂ ಉಳ್ಳಾಲ ಸಮಿತಿ ವತಿಯಿಂದ ಬುಧವಾರ ಜರಗಿದ ಕೋಟೆಕಾರು ಪಂ. ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯಗಳ ಒತ್ತಾಯಕ್ಕೆ ಆಗ್ರಹಿಸಿ ಕೋಟೆಕಾರು ಪಟ್ಟಣ ಪಂಚಾಯತ್ ಚಲೋ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಜಿಲ್ಲೆಯಲ್ಲೇ ಕೋಟೆಕಾರು ಪಂಚಾಯಿತಿ ಶ್ರೀಮಂತ ಪಂ. ಅನಿಸಿಕೊಂಡಿದೆ. ಕೋಟಿ ರೂ. ಹಣ ಸಂಗ್ರಹ ಆಗುತ್ತಿದ್ದರೂ ಗ್ರಾಮದ ಅಭಿವೃದ್ಧಿಗೆ ವಿನಿಯೋಗ ಆಗುತ್ತಿಲ್ಲ. ಸರಿಯಾದ ಡಾಮರೀಕರಣಗೊಳ್ಳದ ರಸ್ತೆಗಳು ಇಲ್ಲಿದ್ದರೂ, ಜನರಿಗೆ ಮಾತ್ರ ನಾಲ್ಕು ಪಟ್ಟು ತೆರಿಗೆ ಜಾಸ್ತಿಯಾಗಿದೆ. ಸ್ವಯಂ ಘೋಷಿತ ಆಸ್ತಿ ತೆರಿಗೆಯಂತಹ ಕಾನೂನಿನ ಮೂಲಕ ಜನರನ್ನು ಕೊಳ್ಳೆ ಹೊಡೆಯಲಾಗುತ್ತಿದೆ. ಹಿಂದೆ ಗ್ರಾಮದ ಜನರಿಗೆ ಸ್ಪಂಧಿಸಲು 35 ಸದಸ್ಯರುಗಳಿದ್ದರು. ಆದರೆ ಚುನಾವಣೆ ಬಳಿಕ ಕೇವಲ 17 ಮಂದಿ ಕೌನ್ಸಿಲರುಗಳು ದೊಡ್ಡ ಗ್ರಾಮದ ಜನರ ಸಮಸ್ಯೆಗಳನ್ನು ಹೇಗೆ ಪಾಲಿಸುತ್ತಾರೆ ಅನ್ನುವುದನ್ನು ಚಿಂತಿಸಬೇಕಿದೆ.
ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಎಲ್ಲಾ ಅಭಿವೃದ್ಧಿ ಕಾಮಗಾರಿಗಳಿಗೆ ತಡೆ ಹಾಕಿದ್ದಾರೆ. ಇದು ಗ್ರಾಮದ ಅಭಿವೃದ್ಧಿ ಜತೆಗೆ ಜನರ ಮೂಲಭೂತ ಸಮಸ್ಯೆಗಳ ಈಡೇರಿಕೆಗೆ ತೊಂದರೆಯುಂಟಾಗಿದೆ. ಗ್ರಾಮದಲ್ಲಿರುವ ನಿವೇಶನ ರಹಿತರಿಗೆ ನಿವೇಶನ ನೀಡಬೇಕೆಂಬ ಒತ್ತಾಯಗಳು ಇದ್ದರೂ, ಅದಕ್ಕಾಗಿ ಯಾವುದೇ ಜಾಗವನ್ನು ಮೀಸಲಿಡಲಾಗಿಲ್ಲ. ಬದಲಾಗಿ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸುಮಾರು 35 ಮನೆಗಳ ಮೂಲಭೂತ ಸೌಕರ್ಯಗಳನ್ನು ಕಸಿದು, ಅವರನ್ನು ಗ್ರಾಮದಿಂದ ಓಡಿಸುವ ಪ್ರಯತ್ನದಲ್ಲಿ ಜಿಲ್ಲಾಡಳಿತ ಇದೆ.ದಲಿತ ಸಮುದಾಯಕ್ಕೆ ಮೀಸಲಿಟ್ಟ ಹಣದ ದುರುಪಯೋಗ ಆಗುತ್ತಿದೆ. ಕೂಡಲೇ ಅದನ್ನು ನಿಲ್ಲಿಸಬೇಕಿದೆ ಎಂದರು.
ಸಿಪಿಐಎಂ ಉಳ್ಳಾಲ ವಲಯ ಕಾರ್ಯದರ್ಶಿ ಕೃಷ್ಣಪ್ಪ ಸಾಲ್ಯಾನ್, ಜಿಲ್ಲಾ ಸಮಿತಿ ಸದಸ್ಯ ಜಯಂತ್ ನಾಯ್ಕ್, ಪಂ. ಸದಸ್ಯರಾದ ನಾಗೇಶ್ ಪೂಜಾರಿ, ಸುಮತಿ ಕೊಂಡಾಣ, ಉಳ್ಳಾಲ ವಲಯದ ದಲಿತ ಸಮಿತಿ ಅಧ್ಯಕ್ಷ ನಾರಾಯಣ ತಲಪಾಡಿ, ಜಿಲ್ಲಾ ದಲಿತ ಸಮಿತಿ ಕಾರ್ಯದರ್ಶಿ ಲಿಂಗಪ್ಪ ನಂತೂರು, , ಬಿ.ನಾರಾಯಣ ಉಳ್ಳಾಲಬೈಲು, ಮಹಾಬಲ್.ಟಿ.ದೆಪ್ಪೆಲಿಮಾರ್, ವಿಶ್ವನಾಥ್ ಕುತ್ತಾರು ಮೊದಲಾದವರು ಉಪಸ್ಥಿತರಿದ್ದರು.