ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಮುಡಿಪು: ಇಂದಿನ ಯುವ ಜನಾಂಗ ಕೆಟ್ಟು ಹೋಗುತ್ತಿದೆ ಎಂಬ ಆರೋಪ ವ್ಯಾಪಕವಾಗಿದ್ದು, ಇದಕ್ಕೆ ಮನೆಯಲ್ಲಿ ಹೆತ್ತವರು ಸಂಸ್ಕಾರ ನೀಡದಿರುವುದೂ ಕಾರಣ. ಸಮಾಜದ ಸಮಸ್ಯೆ ಮನೆಯಿಂದಲೇ ಆರಂಭವಾಗುತ್ತಿದ್ದು, ಮನೆಯ ಮಕ್ಕಳ ಮನದಲ್ಲಿ ಮತ್ತೆ ದೇಶಭಕ್ತಿ ಮೂಡಿಸುವ ಕಾರ್ಯ ಆಗಬೇಕು ಎಂದು ಕಾರ್ಕಳ ಅಕ್ಷರ ಬಳಗ ಕಾರ್ಯದರ್ಶಿ ಅಕ್ಷಯ ಗೋಖಲೆ ಹೇಳಿದ್ದಾರೆ.
ಮುಡಿಪು ಧರ್ಮ ಜಾಗೃತಿ ವೇದಿಕೆ ವತಿಯಂದ ಭಾನುವಾರ ಮುಡಿಪು ಶ್ರೀ ಮುಡಿಪಿನ್ನಾರ್ ದೈವಸ್ಥಾನ ವಠಾರದಲ್ಲಿ ನಡೆದ ಸಾಮೂಹಿಕ ಕುಂಕುಮಾರ್ಚನೆ, ಸಾಮೂಹಿಕ ವಿವಾಹ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಧರ್ಮ ಸಭೆಯಲ್ಲಿ ಅವರು ಉಪನ್ಯಾಸ ನೀಡಿದರು.
ಯುವಜನತೆ ವಿಕೃತವಾದ ಉಡುಪು ತೊಟ್ಟು, ವಿಕೃತ ಅಲಂಕಾರ ಮಾಡಲು ಹೆತ್ತವರು ದುಡ್ಡು ಕೊಡುವುದೂ ಕೂಡಾ ಕಾರಣವಲ್ಲವೇ ಎಂದು ಪ್ರಶ್ನಿಸಿದ ಅವರು, ವಿದ್ಯಾರ್ಥಿ ದೆಸೆಯಲ್ಲೇ ಹದಿಹರೆಯದ ಮಕ್ಕಳಿಗೆ ದುಬಾರಿ ಮೊಬೈಲ್ ತೆಗೆಸಿಕೊಟ್ಟರೆ ಸಾಲದು, ಅವರ ಚಟುವಟಿಕೆಗಳ ಬಗ್ಗೆ ನಿಗಾ ಬೇಕು ಎಂದು ಕಿವಿ ಮಾತು ಹೇಳಿದರು.
ಮೊಬೈಲ್ ರಿಚಾರ್ಜ್ ಅಂಗಡಿಯಿಂದ ಬರುವ ರಾಂಗ್ ನಂಬರ್ ಮೆಸೇಜ್ಗೆ ಹಾಕುವ ಉತ್ತರ ಲವ್ ಜಿಹಾದ್ ತನಕ ತಲುಪುತ್ತಿರುವುದು ಆತಂಕಕಾರಿ ಎಂದ ಅವರು, ಯುವಜನತೆ ಈ ಹಂತದಲ್ಲೇ ದಾರಿ ತಪ್ಪಿದರೆ ರಾಷ್ಟ್ರ ನಾಯಕರೋ, ಉನ್ನತ ಅಧಿಕಾರಿಗಳೋ ಆಗುವುದ ಹೇಗೆ? ದಾರಿಹೋಕರು, ಭಿಕ್ಷುಕರೂ ಅನ್ನ ನೀಡುವ ಉದಾತ್ತ ಸಂಸ್ಕøತಿ ಹೊಂದಿದ್ದ ಭಾರತೀಯ ಸಂಸ್ಕøತಿಯವರಾದ ನಾವು ಇಂದು, ಸಂಜೆ ಹೊತ್ತಿನ ಧಾರಾವಾಹಿ ವೀಕ್ಷಣೆಗೆ ನೆಂಟರು ಅಡ್ಡಿಯಾಗುತ್ತಾರೆ ಎಂಬಲ್ಲಿಗೆ ತಲುಪಿರುವುದರ ಗಮನ ಸೆಳೆದರು.
ಪ್ರಾಸ್ತಾವಿಕ ಮಾತನಾಡಿದ ವೇದಿಕೆಯ ಗೌರವ ಸಲಹೆಗಾರ ಟಿ.ಜಿ.ರಾಜಾರಾಮ ಭಟ್, ಸುತ್ತಮುತ್ತಲ 16 ಗ್ರಾಮಸ್ಥರು ಸೇರಿ ರಚಿಸಿದ ರಾಜಕೀಯ ರಹಿತ ಸಂಘಟನೆ ಇದು. ಭಜನೆಗಳ ಮೂಲಕ ಜನ ಸಂಘಟಿಸಲಾಗಿದೆ. ಮುಂದೆ ಸಮಾಜಮುಖಿ ಚಟುವಟಿಕೆಗಳನ್ನು ನಡೆಸಲಾಗುವುದು ಎಂದರು.
ಬಾಳೆಕೋಡಿ ಶ್ರೀ ಕಾಶಿ ಕಾಳಭೈರವೇಶ್ವರ ಕ್ಷೇತ್ರದ ಶ್ರೀ ಶಶಿಕಾಂತ ಮಣಿ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಮುಡಿಪಿನ್ನಾರ್ ದೈವಸ್ಥಾನ ಆಡಳಿತ ಮೊಕ್ತೇಸರ ಕೊಡಕ್ಕಲ್ಲು ಮುರಳಿ ಮೋಹನ ಭಟ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಎ.ರುಕ್ಮಯ ಪೂಜಾರಿ, ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿ ಡೀನ್ ಡಾ.ಸತೀಶ್ ಭಂಡಾರಿ, ಶ್ರೀ.ಕ್ಷೇ.ಧ.ಗ್ರಾ.ಯೋಜನಾಧಿಕಾರಿ ಸುನೀತಾ ನಾಯಕ್, ಮುಡಿಪು ವಿಶ್ವಕರ್ಮ ಸಂಘ ನಿಕಟಪೂರ್ವ ಅಧ್ಯಕ್ಷ ಹರೀಶ್ ಆಚಾರ್ಯ, ತಾಲೂಕು ಗಾಣಿಗರ ಸೇವಾ ಸಂಘ ಅಧ್ಯಕ್ಷ ರಘು ಸಫಲ್ಯ, ಮುಡಿಪು ಹವ್ಯಕ ವಲಯ ಮಾರ್ಗದರ್ಶಕ ಶಂಕರ ಭಟ್ ಕೊಣಾಜೆ ಮತ್ತಿತರರು ಪಾಲ್ಗೊಂಡರು.
ಸುರೇಖಾ ಪ್ರಾರ್ಥಿಸಿದರು. ಚಂದ್ರಶೇಖರ ಕಲ್ಲಾಪು ನಿರೂಪಿಸಿದರು.
ಬೆಳಗ್ಗಿನಿಂದ ಸಾಮೂಹಿಕ ಕುಂಕುಮಾರ್ಚನೆ, ಗಣಪತಿ ಹವನ, ಶ್ರೀ ಸತ್ಯನಾರಾಯಣ ಪೂಜೆ ನೆರವೇರಿತು. ಸಹಸ್ರಾರು ಮಂದಿ ಗ್ರಾಮಸ್ಥರು ಪಾಲ್ಗೊಂಡರು. ನರ್ಸಣ್ಣ ಸಮುದಾಯಕ್ಕೆ ಸೇರಿದ ಬಡ ಕುಟುಂಬದ ಮೂರು ಜೋಡಿಗಳಿಗೆ ಸರಳ ಸಾಮೂಹಿಕ ವಿವಾಹ ನೆರವೇರಿಸಲಾಯಿತು. ರಾತ್ರಿಯಿಡೀ ಹೊಸನಗರ ಮೇಳದವರಂದ ಹಲವು ವಿಶೇಷ ಆಕರ್ಷಣೆಗಳೊಂದಿಗೆ ಶ್ರೀ ದೇವಿ ಮಹಾತ್ಮೆ ಬಯಲಾಟ ಜರುಗಿತು.