ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ಮನೆಯೊಂದರ ಕಂಪೌಂಡ್ ಹಾರಿ ಸಂಶಯಾಸ್ಪದವಾಗಿ ವರ್ತಿಸುತ್ತಿದ್ದ ವ್ಯಕ್ತಿಗೆ ಸಾರ್ವಜನಿಕರು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ಕೊಲ್ಯ ಸಮೀಪ ನಡೆದಿದ್ದು, ಇತ್ತೀಚೆಗೆ ಇದೇ ಸ್ಥಳದ ಮನೆಯೊಂದರಿಂದ ಲಕ್ಷಾಂತರ ಬೆಲೆಬಾಳುವ ಚಿನ್ನಾಭರಣ ಕಳವು ನಡೆದಿತ್ತು.
ಮಾಸ್ತಿಕಟ್ಟೆ ನಿವಾಸಿ ಸತ್ತಾರ್ (25) ಗೂಸಾ ತಿಂದಾತ. ಈತ ನಿನ್ನೆ ತಡರಾತ್ರಿ ವೇಳೆ ರಾಷ್ಟ್ರೀಯ ಹೆದ್ದಾರಿ ಸಮೀಪ ಇರುವ ಕೊಲ್ಯ ಶ್ರೀ ಮೂಕಾಂಬಿಕಾ ದೇವಸ್ಥಾನದ ಮುಂಭಾಗದಲ್ಲಿರುವ ಮನೆಯೊಂದರ ಕಂಪೌಂಡ್ ಹಾರುವುದನ್ನು ಮನೆಮಂದಿ ಗಮನಿಸಿದ್ದರು. ಕೂಡಲೇ ಆತನನ್ನು ಹಿಡಿಯಲು ಮುಂದಾದಾಗ ಅಲ್ಲಿಂದ ತಪ್ಪಿಸಿದಾತ ದೇವಸ್ಥಾನ ಸಮೀಪವಿರುವ ಖಾಲಿ ಕಂಪೌಂಡಿನೊಳಗೆ ಕುಳಿತು ಅವಿತಿದ್ದ. ಅಲ್ಲಿಗೆ ತೆರಳಿದ ಸಾರ್ವಜನಿಕರು ಹಿಡಿದು ಪ್ರಶ್ನಿಸಲು ಆರಂಭಿಸದಾಗ ಸಂಶಯಾಸ್ಪದವಾಗಿ ವರ್ತಿಸಲು ಆರಂಭಿಸಿದ್ದ. ಮತ್ತೆ ಥಳಿಸಲು ಮುಂದಾದಾಗ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ನೀಡಿರಲಿಲ್ಲ. ಇಡೀ ಅಮಲಿನ ನಶೆಯಲ್ಲಿ ತೇಲುತ್ತಿದ್ದ ಸತ್ತಾರ್ ಗಾಂಜಾ ಸೇವಿಸಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕಾಗಮಿಸಿದ ಉಳ್ಳಾಲ ಪೊಲೀಸರು ವಿಚಾರಿಸಿದಾಗ ಯಾವುದೇ ಪ್ರತಿಕ್ರಿಯೆಯನ್ನು ನೀಡಲಿಲ್ಲ. ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ವಶಕ್ಕೆ ಪಡೆದುಕೊಂಡಿದ್ದಾರೆ.
ವಾರದ ಹಿಂದೆ ಶ್ರೀ ಮೂಕಾಂಬಿಕಾ ದೇವಸ್ಥಾನದ ಹಿಂಭಾಗದಲ್ಲಿರುವ ಪತ್ರಕರ್ತ ಜಯಂತ್ ಉಳ್ಳಾಲ್ ಅವರ ಪತ್ನಿ ತವರು ಮನೆಯಿಂದ ಲಕ್ಷಾಂತರ ಬೆಲೆಬಾಳುವ ಚಿನ್ನಾಭರಣ ಸಹಿತ ನಗದು ಕಳವಾಗಿತ್ತು. ನಿನ್ನೆ ಸತ್ತಾರ್ ಪತ್ತೆಯಾಗಿರುವುದು ಅದೇ ಸ್ಥಳದಲ್ಲಿ. ಅಲ್ಲದೆ ಈತನ ಜತೆಗೆ ಎರಡು ಬೈಕಿನಲ್ಲಿ ಇರುವ ನಾಲ್ಕು ಮಂದಿಯ ತಂಡವನ್ನು ಕಂಡವರು ಇದ್ದಾರೆ. ಮಂಗಳೂರಿನ ಮಿದಾಸ್ ಬಟ್ಟೆ ಅಂಗಡಿಯಲ್ಲಿ ಕೆಲಸಕ್ಕಿರುವ ಸತ್ತಾರ್ ಸಂಜೆಯ ಬಳಿಕ ಮಾರ್ಗ ಬದಿಯಲ್ಲಿ ನಿಂತು ದಾರಿಯಲ್ಲಿ ಹೋಗುವವರಲ್ಲಿ ಹಣ ಕೇಳುತ್ತಿದ್ದ, ಕೊಡದೇ ಇದ್ದಲ್ಲಿ ಕಿಸೆಗೆ ಕೈ ಹಾಕಿ ತೆಗೆದುಕೊಳ್ಳುವ ಕೃತ್ಯವನ್ನು ನಡೆಸುತ್ತಿದ್ದ ಎಂದು ಸ್ಥಳೀಯರೊಬ್ಬರಿಂದ ತಿಳಿದುಬಂದಿದೆ.