UN NETWORKS
ಉಳ್ಳಾಲ: ಶಿಕ್ಷಕ ವೃತ್ತಿಯೆಂಬುದು ಶ್ರೇಷ್ಠವಾದದು, ಒಂದು ಮಗುವಿನಲ್ಲಿ ಹುದುಗಿರುವ ಪ್ರತಿಭೆಯನ್ನು ಗುರುತಿಸಿ, ಸರಿಯಾದ ತರಬೇತಿಯನ್ನು ನೀಡುವುದರೊಂದಿಗೆ ಉತ್ತಮ ಪ್ರಜೆಯನ್ನಾಗಿ ಮಾಡುವಲ್ಲಿ ಅವರ ಪಾತ್ರ ಹಿರಿದು ಎಂದು ಮಾಜಿ ಶಾಸಕ ಜಯರಾಮ ಶೆಟ್ಟಿ ಅಭಿಪ್ರಾಯಪಟ್ಟರು.
ಉಳ್ಳಾಲ ವಲಯದ ದೈಹಿಕ ಶಿಕ್ಷಣ ಶಿಕ್ಷಕ ವೃಂದದವರ ವತಿಯಿಂದ ಇತ್ತೀಚೆಗೆ ತೊಕ್ಕೊಟ್ಟು ಅಂಬಿಕಾರೋಡ್ನಲ್ಲಿರುವ ಗಟ್ಟಿ ಸಮಾಜ ಭವನದಲ್ಲಿ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಲೋಕನಾಥ ರೈ ಅವರಿಗೆ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ನೆರವೇರಿಸಿ ಮಾತನಾಡಿದರು.
ದೈಹಿಕ ಶಿಕ್ಷಣವೆಂಬುದು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾದದ್ದು. ಹಾಗಾಗಿ ಇಂತಹ ವೃತ್ತಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗುತ್ತಿರುವವರನ್ನು ಗುರುತಿಸಿ, ಗೌರವಿಸುವುದು ಅತ್ಯುತ್ತಮ ಕಾರ್ಯವೆಂದರು.
ಮುಖ್ಯ ಅತಿಥಿಯಾಗಿ ಹಝರತ್ ಸೈಯದ್ ಮದನಿ ದರ್ಗಾ ಉಳ್ಳಾಲ ಇದರ ಅಧ್ಯಕ್ಷ ಅಬ್ದುಲ್ ರಶೀದ್, ಉಳ್ಳಾಲ ಪುರಸಭೆ ಅಧ್ಯಕ್ಷ ಕುಂಞಮೋನು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ದೈಹಿಕ ಶಿಕ್ಷಣ ಪರೀವೀಕ್ಷಣಾಧಿಕಾರಿ ಗುರುನಾಥ್ ಬಾಗೇವಾಡಿ, ವಿದ್ಯಾರತ್ನ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಉಳ್ಳಾಲ ಮೊಗವೀರ ಸಂಘದ ಅಧ್ಯಕ್ಷ ಸದಾನಂದ ಬಂಗೇರ, ಜಿಲ್ಲಾ ಪಂಚಾಯತ್ ಸದಸ್ಯೆ ಧನಲಕ್ಷ್ಮಿಗಟ್ಟಿ, ನಿವೃತ್ತ ದೈಹಿಕ ಶಿಕ್ಷಕರಾದ ತಾರಾನಾಥ ರೈ, ತುಕರಾಮ ಉಳ್ಳಾಲ್, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಗಂಗಾಧರ್ ರೈ, ಸನ್ಮಾನಿತರಾದ ಲೋಕನಾಥ ರೈ ಅವರ ಪತ್ನಿ ಚಿತ್ರಲೇಖ ಉಪಸ್ಥಿತರಿದ್ದರು. ಸನ್ಮಾನ ಪತ್ರವನ್ನು ದೈಹಿಕ ಶಿಕ್ಷಣ ಶಿಕ್ಷಕರಾದ ರಾಧಕೃಷ್ಣ ರೈಯವರು ವಾಚಿಸಿದವರು. ದೈಹಿಕ ಶಿಕ್ಷಣ ಶಿಕ್ಷಕರಾದ ಮೋಹನ್ ಶಿರ್ಲಾಲ್ ಸ್ವಾಗತಿಸಿದರು.
ಅಭಿನಂದನಾ ಭಾಷಣವನ್ನು ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ತ್ಯಾಗಂ ಹರೇಕಳ ನೆರವೇರಿಸಿದರು. ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಕಾರ್ಯದರ್ಶಿ ರಾಜೀವ್ ನಾಯಕ್ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕÀ ವಿಷ್ಣು ಹೆಬ್ಬಾರ್ ವಂದಿಸಿದರು.