ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಮುಡಿಪು: ಕೊಣಾಜೆ ಮಂಗಳೂರು ವಿಶ್ವವಿದ್ಯಾನಿಲಯಗಳಲ್ಲಿ ಮೂಲಭೂತ ಸೌಕರ್ಯಗಳು ಇದ್ದರೂ, ಸಂಬಂಧಪಟ್ಟವರು ಯಾವುದೇ ಕ್ರಮಕೈಗೊಳ್ಳದೇ ಇರುವುದು ಖಂಡನೀಯ ಎಂದು ಮಂಗಳೂರು ವಿಶ್ವವಿದ್ಯಾನಿಲಯ ಶಿಕ್ಷಕೇತರ ಉದ್ಯೋಗಿಗಳ ಸಂಘದ ಅಧ್ಯಕ್ಷ ಗೋವಿಂದ ಮಟ್ಟಿ ಹೇಳಿದ್ದಾರೆ.

ಅವರು ಭಾರತ್ ಬಂದ್ ಪ್ರಯುಕ್ತ ಮಂಗಳೂರು ವಿಶ್ವವಿದ್ಯಾನಿಲಯ ಶಿಕ್ಷಕೇತರ ಉದ್ಯೋಗಿಗಳ ಸಂಘದ ವತಿಯಿಂದ ಬುಧವಾರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮತ್ತು ಕೊಣಾಜೆ ಮಂಗಳೂರು ವಿ.ವಿ ಕ್ಯಾಂಪಸ್ಸಿನಲ್ಲಿರುವ ಅವ್ಯವಸ್ಥೆಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ಕೊಣಾಜೆ ಮಂಗಳೂರು ವಿಶ್ವವಿದ್ಯಾನಿಲಯದ ಆಡಳಿತ ಕಚೇರಿ ಮುಂದೆ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಎಲ್ಲಾ ಶಿಕ್ಷಕೇತರ ಸಿಬ್ಬಂದಿಗೆ ಯುಜಿಸಿ ವೇತನ ನೀಡದೆ ಸತಾಯಿಸಲಾಗುತ್ತಿದೆ. ಕ್ವಾಟ್ರಸ್ ವಿಚಾರದಲ್ಲಿಯೂ ಶಿಕ್ಷಕೇತರ ಸಿಬ್ಬಂದಿ ಅನ್ಯಾಯಕ್ಕೊಳಗಾಗಿದ್ದಾರೆ. ಹೊರಗುತ್ತಿಗೆಯಾಧಾರದಡಿ ದುಡಿಸುವ ಸಿಬ್ಬಂದಿಯನ್ನು ಕಡಿಮೆ ವೇತನದಡಿ ದುಡಿಸಲಾಗುತ್ತಿದೆ. ಇವರನ್ನು ಖಾಯಂಗೊಳಿಸುವ ನಿರ್ಧಾರಕ್ಕೆ ಸರಕಾರ ಮುಂದಾಗಬೇಕಿದೆ. ಶಿಕ್ಷಕೇತರ ಸಿಬ್ಬಂದಿಗೆ ದೊರೆಯಬೇಕಾದ ಸೌಲಭ್ಯಗಳಿಗೆ ಯಾವುದೇ ಅಡಚಣೆಯಿಲ್ಲದಂತೆ ಮೇಲಾಧಿಕಾರಿಗಳು ನೋಡಿಕೊಳ್ಳಬೇಕು ಎಂದರು.
ಬಳಿಕ ಸಲ್ಲಿಸಿದ ಮನವಿಯಲ್ಲಿ ಶಿಕ್ಷಕೇತರ ಸಿಬ್ಬಂದಿ ಯುಜಿಸಿ ವೇತನ ಶ್ರೇಣಿ ವಿಸ್ತರಣೆ, ಸಿಂಡಿಕೇಟ್ ಪ್ರಾಧಿಕಾರಗಳಲ್ಲಿ ಶಿಕ್ಷಕೇತರ ಸಿಬ್ಬಂದಿಗೆ ಪ್ರಾತಿನಿಧ್ಯ ಹಾಗೂ ವಿಶ್ವವಿದ್ಯಾನಿಲಯ ವ್ಯಾಪ್ತಿ ಪ್ರದೇಶದವರನ್ನೇ ನಾಮಕರಣ, ಹೊರಗುತ್ತಿಗೆ ಪದ್ದತಿ ನಿಲ್ಲಿಸಬೇಕು, ಹೆಚ್ಚುವರಿ ಕಾಲೇಜು ಮತ್ತು ಕೋರ್ಸುಗಳಿಗೆ ಅನುಗುಣವಾಗಿ ಶಿಕ್ಷೇತರ ಹುದ್ದೆಗಳನ್ನು ಸೃಜಿಸಲು ಕ್ರಮ, ಶೀಘ್ರ ವರ್ಗಾವಣೆ ನೀತಿ ಅಳವಡಿಕೆ, ರಾಜ್ಯದ ಇತರ ವಿ.ವಿಗಳಲ್ಲಿ ಶಿಕ್ಷಕೇತರ ತಾಂತ್ರಿಕ ಸಿಬ್ಬಂದಿ ಭಡ್ತಿಗೆ ಅನುಕೂಲವಾಗುವಂತೆ ಅನುಶಾಸನ ರೂಪಿಸುವುದು, ಬೋಧಕೇತರ ಹುದ್ದೆಗಳ ಸೃಷ್ಟಿ ಹಾಗೂ ಮೈಸೂರು ವಿ.ವಿ. ಪರಿನಿಯಮ ಹಾಗೂ ಸಿಸಿಎಗಳ ಪರಿಷ್ಕರಣೆ, ಸಂಘದ ಕಾರ್ಯಚಟುವಟಿಕೆಗಳಿಗೆ ಸೂಕ್ತ ಕೊಠಡಿ ವ್ಯವಸ್ಥೆ , ವಿ.ವಿ.ಯ ಶಾಸನಬದ್ಧ ಹುದ್ದೆಗಳಿಗೆ ಐಎಎಸ್/ ಕೆಎಎಸ್ ಅಧಿಕಾರಿಗಳ ನೇಮಕ, ವಿ.ವಿ.ಯ `ಡಿ’ ಮತ್ತು `ಇ’ ವಸತಿಗೃಹಗಳನ್ನು ಜೇಷ್ಠತೆ ಆಧಾರದಲ್ಲಿ ವಿತರಿಸಬೇಕು, ಹಾಸ್ಟೆಲಿನ, ಕಚೇರಿಗಳಲ್ಲಿ ಕಾರ್ಯನಿರ್ವಹಿಸುವ ಅಡುಗೆ ಸಿಬ್ಬಂದಿಗೆ ಉದ್ಯೋಗ ಭಡ್ತಿ, ನಿವೃತ್ತ ಉದ್ಯೋಗಿಗಳ ಸ್ಥಾನಕ್ಕೆ ಸಮರ್ಥ ಉದ್ಯೋಗಿ ನೇಮಿಸುವುದು ಮೊದಲಾದ ಬೇಡಿಕೆಗಳನ್ನು ಮುಂದಿಡಲಾಯಿತು.
ಈ ಸಂದರ್ಭ ಸಂಘದ ಉಪಾಧ್ಯಕ್ಷರಾದ ಪ್ರಸನ್ನ ಶೆಟ್ಟಿ, ತಾರನಾಥ್, ವಿಜಯರಾಜ್, ಮೀರಾ ಡಿಸೋಜಾ, ರತ್ನಾ ಕುಮಾರಿ, ದೇವೇಂದ್ರ ಕುಮಾರ್, ನಾಗೇಂದ್ರ ಪ್ರಸಾದ್, ಆನಂದ ಮೊದಲಾದವರು ಉಪಸ್ಥಿತರಿದ್ದರು.