ಮಾಡೂರು: ವ್ಯಾವಹಾರಿಕ ಅಭಿವೃದ್ಧಿ ಜತೆಗೆ ಸಮಾಜವನ್ನು ಬೆಳೆಸುವ ಕಾರ್ಯ ನಡೆಯಬೇಕಿದ್ದು, ಅದಕ್ಕಾಗಿ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ, ತಮ್ಮಲ್ಲಿರುವ ಕೌಶಲ್ಯವನ್ನು ಬೆಳೆಸುವ ತರಬೇತಿ ಅಗತ್ಯ ಬೇಕಿದೆ ಎಂದು ಓಎನ್ ಜಿಸಿ ಮಂಗಳೂರು ಪೆಟ್ರೋಕೆಮಿಕಲ್ಸ್ ನ ನಿರ್ದೇಶಕ ಜೈದೀಪ್ ಘೋಷ್ ಅಭಿಪ್ರಾಯಪಟ್ಟರು.

ಅವರು ಮಂಗಳೂರಿನ ಸಂತ ಅಲೋಷಿಯಸ್ ಕಾಲೇಜು ( ಸ್ವಾಯುತ್ತ), ಸಂತ ಅಲೋಷಿಯಸ್ ನಿರ್ವಹಣೆ ಮತ್ತು ಮಾಹಿತಿ ತಂತ್ರಜ್ಞಾನ, ವ್ಯವಹಾರ ಆಡಳಿತ ಸ್ನಾತಕೋತ್ತರ ವಿಭಾಗದ ಆಶ್ರಯದಲ್ಲಿ ಬೀರಿ ಮಾಡೂರಿನ ಅಲೋಷಿಯಸ್ ಕಾಲೇಜಿನ ಅಲೋಷಿಯಸ್ ಅರ್ತೂರ್ ಶೆಣೈ ಆಡಿಟೋರಿಯಂನಲ್ಲಿ ಬುಧವಾರದಂದು ಆಯೋಜಿಸಲಾದ ಇನ್ಸಿಗ್ನಿಯಾ-2015 ಇನೋವೇಟ್ ಇಂಡಿಯಾ ರಾಷ್ಟ್ರೀಯ ಮಟ್ಟದ ಬಿ- ಸ್ಕೂಲ್ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ವ್ಯಾವಹಾರಿಕ ತರಬೇತಿ ವೇಳೆ ಸಮಗ್ರ ನೋಟವನ್ನು ಗಮನಿಸಿ ಸಮಾಜವನ್ನು ಆರ್ಥಿಕವಾಗಿ ಸುಧಾರಿಸುವ ರೀತಿಯಲ್ಲಿ ಕಾರ್ಯಚಟುವಟಿಕೆ ನಡೆಸಬೇಕಿದೆ. ವಿದ್ಯುತ್, ಇನ್ಫ್ರಾಸ್ಟ್ರಕ್ಚರ್, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳಿದ್ದು, ಅದಕ್ಕಾಗಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಯನಿರ್ವಹಿಸಲು ಸಕಾರತ್ಮಕ ಗುಣಗಳನ್ನು ತಮ್ಮಲ್ಲಿ ವಿದ್ಯಾರ್ಥಿಗಳು ರೂಪಿಸುವ ಅಗತ್ಯ ಇದೆ. ಜಗತ್ತಿನ ಹೂಡಿಕೆದಾರರು ಭಾರತದತ್ತ ಹೆಚ್ಚಿನ ಒಲವು ತೋರಿಸುತ್ತಿದ್ದು, ಇದು ಮುಂದಿನ ಯುವಪೀಳಿಗೆಗೆ ಒಳ್ಳೆಯ ಅವಕಾಶವನ್ನು ಒದಗಿಸಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂತ ಅಲೋಷಿಯಸ್ ಕಾಲೇಜಿನ ಪ್ರಾಂಶುಪಾಲ ಫಾ. ಸ್ವೀಬರ್ಟ್ ಡಿಸಿಲ್ವಾ ಮಾತನಾಡಿ ಕನಸ್ಸುಗಳನ್ನು ಕಾಣಲು ಮುಂದಾಗಬೇಡಿ. ಅಲ್ಪಾವಧಿಯ ಗುರಿಗಳನ್ನು ಹೊಂದುವ ಮೂಲಕ ಜೀವನದಲ್ಲಿ ಯಶಸ್ಸು ಗಳಿಸಬಹುದು. ಬೇರೆಯವರಲ್ಲಿ ಸಂತಸ ಮೂಡಿಸಿದಲ್ಲಿ ತಾವು ಕೂಡಾ ಜೀವನದಲ್ಲಿ ಸಂತಸವನ್ನು ಹೊಂದಬಹುದು ಎಂದರು.
ಈ ಸಂದರ್ಭ ಸಂತ ಅಲೋಷಿಯಸ್ ಸಂಸ್ಥೆಗಳ ನಿರ್ದೇಶಕ ಫಾ.ಡೆನ್ಸಿಲ್ ಲೋಬೊ ಎಸ್.ಜೆ, ಎಂಬಿಎ ಚೇರ್ ಮೆನ್ ಫಾ.ಓಸ್ವಾಲ್ಡ್ ಮಸ್ಕರೇನಸ್ ಎಸ್.ಜೆ ,ಮುಖ್ಯ ಅತಿಥಿಗಳಾಗಿದ್ದರು.
ಮ್ಯಾನೇಜ್ ಮೆಂಟ್ ಕ್ಲಬ್ ಕಾರ್ಯದರ್ಶಿ ರಾಯ್ಸ್ ಬರೆಟ್ಟೋ, ವಿದ್ಯಾರ್ಥಿ ಸಂಘಟಕ ರೋಹನ್ ಮೋನಿಸ್ ಉಪಸ್ಥಿತರಿದ್ದರು.
ಅಕಾಡೆಮಿ ಡೀನ್ ಡಾ.ರೊವೆನಾ ರೈಟ್ ಸ್ವಾಗತಿಸಿದರು. ಪ್ರೀತಾ ಕಾರ್ಯಕ್ರಮ ನಿರ್ವಹಿಸಿದರು. ಸಿಬ್ಬಂದಿ ಸಂಘಟಕ ರಯಾನ್ ಡಿಸೋಜಾ ವಂದಿಸಿದರು.