ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ನಾಟೆಕಲ್: ರಿಕ್ಷಾ ಚಾಲಕ ಉಳ್ಳಾಲ ಅಳೇಕಲ ನಿವಾಸಿ ಹಿದಾಯತ್ (35) ಎಂಬಾತನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಉಳ್ಳಾಲ ಪೊಲೀಸರು ಆತನ ಮೊದಲನೇ ಪತ್ನಿಯನ್ನು ಭಾನುವಾರ ಬಂಧಿಸಿದ್ದಾರೆ.

ಉಳ್ಳಾಲ ಪ್ಯಾರೀಸ್ ಜಂಕ್ಷನ್ನಿನ ಬಳಿಯ ರೆಹಮತ್ತುಲ್ಲಾ ಎಂಬವರ ಪತ್ನಿ ಫಜೀಲಾ(28) ಎಂಬಾಕೆಯನ್ನು ಬಂಧಿಸಲಾಗಿದೆ. ಶನಿವಾರ ಹಿದಾಯತ್ ಶವ ನಾಟೆಕಲ್ ಸಮೀಪದ ಜನವಸತಿಯಿಲ್ಲದ ಪ್ರದೇಶದಲ್ಲಿ ಕಲ್ಲಿನಿಂದ ಮತ್ತು ಮರದ ಸೋಂಟೆಯಿಂದ ಬಡಿದು ಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಎರಡು ದಿನಗಳ ಹಿಂದೆ ಹಿದಾಯತ್‍ಗೆ ಮೊದಲ ಪತ್ನಿಯ ಸಹೋದರ ಫಾರೂಕ್ ಎಂಬಾತ ಜೀವಬೆದರಿಕೆ ಒಡ್ಡಿದ್ದ. ಈ ಕುರಿತು ಉಳ್ಳಾಲ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದರು. ಹಿದಾಯತ್ ಕೊಲೆಯಾದ ನಂತರ ಈತನ ಮೊದಲ ಪತ್ನಿ ಫಜೀಲಾ ಳ ಸಹೋದರರು ನಾಪತ್ತೆಯಾಗಿದ್ದು, ಇದರಿಂದ ಕೊಲೆ ಆರೋಪಿಗಳು ಅವರೇ ಅನ್ನುವುದನ್ನು ಪೊಲೀಸರು ದೃಢೀಕರಿಸಿದ್ದರು. ಅಲ್ಲದೆ ಕೊಲೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಫಜೀಲಾಳನ್ನು ಪೊಲೀಸರು ಬಂಧಿಸಿದ್ದಾರೆ.
ಹಿದಾಯತ್ ಗೆ ಫಜೀಲಾ ಮೊದಲ ಪತ್ನಿಯಾಗಿದ್ದು, ಆಕೆಗೆ ತಲಾಖ್ ನೀಡಿದ ನಂತರ ಮೂಡಬಿದ್ರೆ ಮುಲಾರ ನಿವಾಸಿ ಯುವತಿಯನ್ನು ವರಿಸಿದ್ದನು. ಕೆಲ ದಿನಗಳಲ್ಲೇ ಆಕೆಯೂ ದೂರವಾಗಿ ತಲಾಖ್ ನೀಡಿದ ಬಳಿಕ ಉಳ್ಳಾಲ ನಿವಾಸಿ ಯುವತಿಯನ್ನು ವಿವಾಹವಾಗಿದ್ದ. ಸದ್ಯ ಆಕೆ 10 ತಿಂಗಳ ಗರ್ಭಿಣಿಯಾಗಿದ್ದಾಳೆ. ಆದರೂ ಹಿದಾಯತ್ ಮೊದಲ ಪತ್ನಿಗೆ ಕರೆ, ಸಂದೇಶಗಳನ್ನು ರವಾನಿಸುತ್ತಾ ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ಆಕೆಯ ಸಹೋದರರು ಬೆದರಿಕೆಯೊಡ್ಡಿದ್ದರೆನ್ನಲಾಗಿದೆ. ಅದೇ ಕಾರಣದಲ್ಲಿ ಹತ್ಯೆ ನಡೆದಿರುವ ಶಂಕೆ ಪೊಲೀಸರದ್ದಾಗಿದೆ.