nwsdsk ull
ಸೊಮೇಶ್ವರ: ಮನುಷ್ಯ ಸ್ವಾರ್ಥಿ ಎಂದು ಜನರು ಆಡಿಕೊಳ್ಳುವುದು ಸುಳ್ಳು. ರಕ್ತದಾನ ಶಿಬಿರಗಳಲ್ಲಿ ಅದೆಷ್ಟೋ ಗುರುತು ಪರಿಚಯವಿಲ್ಲದವರ ಜೀವ ಉಳಿಸುವ ಕಾರ್ಯ ನಡೆಯುತ್ತದೆ. ದಾನಿಗಳಿಗೆ ಆ ತೃಪ್ತಿ ಸಿಗುತ್ತದೆ. ನಮ್ಮ ವೈಯಕ್ತಿಕ ಬದುಕನ್ನು ಬೆಳಗಿಸುವ ಚಿಂತನೆ ನಮ್ಮಲ್ಲಿದ್ದು ಅದರಷ್ಟೆ ಯೋಚನೆ ಇತರರ ಜೀವ ಉಳಿಸುವಲ್ಲೂ ಇರಬೇಕು. ನಾವು ಸನ್ಮಾರ್ಗ, ಸತ್ಚಿಂತನೆ, ಉತ್ತಮ ಆದರ್ಶ, ಧ್ಯೇಯಗಳೊಂದಿಗೆ ಸಮಾಜ ಸೇವೆ ಮಾಡುತ್ತಾ ಬದುಕಿದಾಗ ಅದನ್ನು ಇತರರು ಮಾದರಿಯಾಗಿ ಸ್ವೀಕರಿಸುತ್ತಾರೆ.
ಅವರು ಭಾನುವಾರ ಕೋಟೆಕಾರು ಬೀರಿಯ ಸಾರ್ವಜನಿಕ ಶ್ರೀ ಗಣೇಶ ಸೇವಾ ಸಮಿತಿಯ ನೇತೃತ್ವದಲ್ಲಿ ಮಂಗಳೂರಿನ ಕಸ್ತೂರ್ಬಾ ಮೆಡಿಕಲ್ ಆಸ್ಪತ್ರೆಯ ಸಹಯೋಗದೊಂದಿಗೆ ಜೆ.ಎಸ್.ಆಸ್ಪತ್ರೆ ಕೋಟೆಕಾರು, ಓಂ ಶಕ್ತಿ ಫ್ರೆಂಡ್ಸ್ ಸಂಕೊಳಿಗೆ, ನವಚೇತನ ಫ್ರೆಂಡ್ಸ್ ಸಂಕೊಳಿಗೆ ಹಾಗೂ ಸ್ನೇಹ ಸಂಗಮ ಉಚ್ಚಿಲ ತಂಡಗಳ ಸಂಯುಕ್ತ ಆಶ್ರಯದಲ್ಲಿ ಕೋಟೆಕಾರಿನ ಸ್ಟೆಲ್ಲಾ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ನಡೆದ ರಕ್ತದಾನ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜೆ.ಎಸ್.ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ವಿಜಯ್ ಕುಮಾರ್ ಶಿಬಿರ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಕೊಣಾಜೆ ಕ್ಷೇತ್ರ ತಾಲೂಕು ಪಂಚಾಯಿತಿ ಸದಸ್ಯ ಸುರೇಶ್ ಚೌಟ, ಉದ್ಯಮಿ ಅಬ್ದುಲ್ ರಹಿಮಾನ್ ಬೀರಿ, ಕೋಟೆಕಾರು ಜೇಡರಹಿತ್ಲು ರಂಜನ್ ಶೆಟ್ಟಿ, ಸ್ಟೆಲ್ಲಾ ಮೇರಿಸ್ ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಮರಿಯಾ ಕಾರ್ಮೇಲ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ 25ನೇ ಬಾರಿಗೆ ರಕ್ತದಾನ ಮಾಡುತ್ತಿರುವ ಸಂಪತ್ ಉಚ್ಚಿಲ್ ಅವರನ್ನು ಸನ್ಮಾನಿಸಲಾಯಿತು.
ಶ್ರೀ ಗಣೇಶ ಸೇವಾ ಸಮಿತಿಯ ಅಧ್ಯಕ್ಷ ಶಿವಾನಂದ ಕಾಚಾರು ಸ್ವಾಗತಿಸಿದರು. ಯಶವಂತ ಕುಮಾರ್ ಬೀರಿ ಕಾರ್ಯಕ್ರಮ ನಿರೂಪಿಸಿದರು. ಲತೀಶ್ ಪೂಜಾರಿ ಸಂಕೊಳಿಗೆ ವಂದಿಸಿದರು.