ಉಳ್ಳಾಲ ನ್ಯೂಸ್ ಡೆಸ್ಕ್
ಮುಡಿಪು: ಇಲ್ಲಿನ ಸೂರಜ್ ಎಜ್ಯುಕೇಷನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುವ ಜ್ಞಾನದೀಪ ಹೈಸ್ಕೂಲ್ ಮತ್ತು ಪಿ.ಯು ಕಾಲೇಜಿನ ಆಡಳಿತ ಮಂಡಳಿ ಹೆಚ್ಚುವರಿ ಶುಲ್ಕ ಪಡೆದುಕೊಳ್ಳುತ್ತಿದ್ದಾರೆಂದು ಆರೋಪಿಸಿ ಹೆತ್ತವರು ಶಾಲೆಗೆ ಮುತ್ತಿಗೆ ಹಾಕಿರುವ ಘಟನೆ ಮುಡಿಪುವಿನಲ್ಲಿ ನಡೆದಿದೆ.
ಹಿಂದಿನ ವರ್ಷಕ್ಕಿಂತ ರೂ. ೫೦೦೦ ಹೆಚ್ಚುವರಿ ಶುಲ್ಕ ಪಾವತಿಸುವಂತೆ ಶಾಲಾ ಆಡಳಿತ ಮ ಂಡಳಿ ಹೆತ್ತವರಿಗೆ ಸೂಚಿಸಿತ್ತು. ಆದರೆ ಏಕಾಏಕಿ ಶುಲ್ಕ ಏರಿಕೆಯನ್ನು ಖಂಡಿಸಿದ ವಿದ್ಯಾರ್ಥಿಗಳ ಹೆತ್ತವರು ಸುಮಾರು ೧೦೦ ರಷ್ಟು ಜನ ಮುಡಿಪುವಿನ ಶಾಲೆ ಮುಂದೆ ಜಮಾಯಿಸಿ ಶುಲ್ಕ ಏರಿಕೆಯನ್ನು ವಿರೋಧಿಸಿದರು. ಅಲ್ಲದೆ ಶಾಲಾ ಆಡಳಿತ ಮಂಡಳಿ ವಿರುದ್ಧ ಧಿಕ್ಕಾರ ಕೂಗಿದರು. ಈ ವೇಳೆ ಶಾಲಾ ಚೇರ್ಮೆನ್ ಮಂಜುನಾಥ್ ರೇವಣಕರ್ ಹೆತ್ತವರನ್ನು ಸಮಾಧಾನಿಸಿ ಶುಲ್ಕ ಏರಿಕೆಯನ್ನು ಸಮರ್ಥಿಸಿಕೊಂಡರು. ಆದರೆ ಹೆತ್ತವರು ಮಕ್ಕಳಿಗೆ ಟಿ.ಸಿ ಕೊಟ್ಟಲ್ಲಿ ಅವರನ್ನು ಶಾಲೆ ಬಿಡಿಸಿ ಬೇರೆ ಶಾಲೆಗೆ ಸೇರಿಸುವುದಾಗಿಯೂ ಹೇಳಿದರು. ಅಲ್ಲದೆ ಇತ್ತೀಚೆಗೆ ಪಿ.ಯು. ಕಾಲೇಜು ಆರಂಭವಾಗಿದ್ದು, ಅದರ ಹಣ ಭರಿಸಲು ಹೆಚ್ಚುವರಿ ಶುಲ್ಕ ಹೆತ್ತವರಿಂದ ಪಡೆದುಕೊಳ್ಳುತ್ತಿದ್ದಾರೆಂಬ ಆರೋಪವೂ ಕೇಳಿಬಂತು.