ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಮುಡಿಪು: ಯುವಕನೋರ್ವನ ಶವ ಕೊಳೆತ ಸ್ಥಿತಿಯಲ್ಲಿ ಮುಡಿಪು ಜೋಸೆಫ್ ವಾಝ್ ಚರ್ಚಿನ ಎದುರುಗಡೆ ಮರದಡಿಯ ಗುಡ್ಡ ಪ್ರದೇಶದಲ್ಲಿ ಪತ್ತೆಯಾಗಿದ್ದು, ಮೇಲ್ನೋಟಕ್ಕೆ ಇದೊಂದು ಕೊಲೆ ಎಂಬ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದರೂ, ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮುಡಿಪು ಗುಡ್ಡ ಪ್ರದೇಶದಲ್ಲಿರುವ ಮರದ ಅಡಿಯಲ್ಲಿ ಸುಮಾರು 30-35ರ ಹರೆಯದ ಯುವಕನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಶುಕ್ರವಾರದ ಪೂಜೆಗೆಂದು ಬಂದ ಮಹಿಳೆಯೋರ್ವರು ಶವವನ್ನು ಕಂಡು ಸಾರ್ವಜನಿಕರಿಗೆ ಮಾಹಿತಿ ನೀಡಿದ್ದಾರೆ. ಶವದ ಕೊರಳಿನಲ್ಲಿ ಶಾಲು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸಣ್ಣ ಗಾತ್ರ ಹಾಗೂ ಕೊಂಬೆಗಳು ಗಟ್ಟಿಯಿಲ್ಲದ ಮರದಡಿಯಲ್ಲಿ ಶವ ಪತ್ತೆಯಾಗಿರುವುದರಿಂದ , ಮರದಲ್ಲಿ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಲು ಸಾಧ್ಯವಿಲ್ಲ. ಹಾಗಿದ್ದರೂ ಕೊಂಬೆ ತುಂಡಾದ ಸ್ಥಿತಿಯಲ್ಲಿರಬೇಕಿತ್ತು. ಆದರೆ ಶವ ಸಿಕ್ಕ ಸ್ಥಳದಲ್ಲಿ ಅಂತಹ ಯಾವುದೇ ಕುರುಹುಗಳಿಲ್ಲ. ಶವ ಮಾತ್ರ ಕುತ್ತಿಗೆಯಲ್ಲಿ ಶಾಲು ಬಿಗಿದ ಸ್ಥಿತಿಯಲ್ಲಿ ಕೊಳೆತ ಸ್ಥಿತಿಯಲ್ಲಿರುವುದರಿಂದ 3-4 ದಿನಗಳ ಹಿಂದೆ ಯುವಕ ಮರಕ್ಕೆ ನೇಣುಬಿಗಿದಿರಬಹುದು. ಬಳಿಕ ಕೊಳೆತಾಗ ದೇಹದ ತೂಕವೂ ಜಾಸ್ತಿಯಾಗಿದ್ದರಿಂದ ಅದು ಗಟ್ಟಿಯಾಗಿ ಕಟ್ಟದ ಶಾಲು ಜಾರಿ ಕೆಳಬೀಳುವ ಸಾಧ್ಯತೆಗಳಿವೆ. ಆದ್ದರಿಂದ ಇದೊಂದು ಆತ್ಮಹತ್ಯೆ ಎಂದು ತಿಳಿಸಿ, ಅದರಂತೆ ಆತ್ಮಹತ್ಯೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಕಾರ್ಮಿಕನ ಶಂಕೆ:
ಚರ್ಚಿನ ಆಸುಪಾಸಿನಲ್ಲಿ ಕಲ್ಲಿನಕೋರೆ, ಖಾಸಗಿ ಕಂಪೆನಿಗಳ ಕಾಮಗಾರಿ ನಡೆಯುತ್ತಿದೆ. ಅಲ್ಲಿಗೆ ಕೆಲಸ ನಿಮಿತ್ತ ಬಂದಿರುವ ಕಾರ್ಮಿಕನೇ ಆತ್ಮಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದ್ದು, ಸದ್ಯ ಮೃತದೇಹವನ್ನು ವೆನ್ಲಾಕ್ ಆಸ್ಪತ್ರೆಯಲ್ಲಿ ಇರಿಸಲಾಗಿದೆ.