ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಮಾಡೂರು: ನಗರದ ಸಬ್ ಜೈಲಿನಲ್ಲಿ ಖೈದಿಗಳಿಂದ ಹತ್ಯೆಗೀಡಾದ ಹಲವು ಪ್ರಕರಣಗಳ ಆರೋಪಿ ಮಾಡೂರು ಇಸುಬು ಅಂತಿಮ ಸಂಸ್ಕಾರ ಮಾಡೂರಿನ ಮಸೀದಿಯಲ್ಲಿ ನಡೆಯಿತು. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ತೊಕ್ಕೊಟ್ಟು, ಬೀರಿ, ಕೋಟೆಕಾರು, ಮಾಡೂರು ಬಳಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿ ಬಿಗಿಬಂದೋಬಸ್ತನ್ನು ಏರ್ಪಡಿಸಲಾಗಿತ್ತು.



ಮಾಡೂರು ನಿವಾಸಿ ಯೂಸುಫ್ ಯಾನೆ ಇಸುಬು (42) ಕುರಿತು ಉಳ್ಳಾಲ ಠಾಣೆಯಲ್ಲಿ ಹಲವು ಪ್ರಕರಣಗಳಿದ್ದು, ಕೆಲವು ವಿಚಾರಣೆ ಹಂತದಲ್ಲಿದ್ದರೆ ಕೆಲವು ಬಿದ್ದು ಹೋಗಿದೆ. ಕಿನ್ಯಾ ನಿವಾಸಿ ಸಹೋದರರಿಬ್ಬರ ಡಬಲ್ ಮರ್ಡರ್ ಪ್ರಕರಣದಲ್ಲಿ ಆರೋಪಿಯಾಗಿದ್ದ ಮಾಡೂರು ಯೂಸುಫ್ ಬಳಿಕ ಮತೀಯ ಸಂಘರ್ಷದಲ್ಲಿ ಗುರುತಿಸಿಕೊಂಡಿದ್ದ. ಬಿಜೆಪಿ ಮುಖಂಡ ರೋರ್ವರ ಕೊಲೆ ಯತ್ನ ಪ್ರಕರಣ, ವಿವಾಹಿತೆ ಮುಸ್ಲಿಂ ಮಹಿಳೆಯ ಕೊಲೆ ಪ್ರಕರಣ ಮತ್ತು ಹಫ್ತಾ ಬೆದರಿಕೆ ಕುರಿತು ಹಲವು ಪ್ರಕರಣಗಳು ಈತನ ಮೇಲಿದೆ.
ಕೆಲ ಪ್ರಕರಣಗಳಲ್ಲಿ ಈತನೇ ಭಾಗಿಯಾಗಿದ್ದರೆ, ಇನ್ನು ಹಲವು ಪ್ರಕರಣಗಳಲ್ಲಿ ವಿದೇಶದಲ್ಲಿದ್ದುಕೊಂಡು ಬೆಂಬಲ ನೀಡಿದ ಆರೋಪದಲ್ಲಿ ಪ್ರಕರಣ ದಾಖಲಾಗಿತ್ತು. ಮತೀಯ ಗಲಭೆಗೆ ಸಂಬಂಧಿಸಿದಂತೆ ಪ್ರತೀಕಾರಕ್ಕಾಗಿ ಹಿಂದು ಯುವಕರ ಕೊಲೆಯಲ್ಲಿ ಭಾಗಿಯಾಗಿದ್ದ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ. ಈ ನಿಟ್ಟಿನಲ್ಲಿ ಶವಯಾತ್ರೆ ಸಂದರ್ಭ ಗಲಾಟೆಗಳು ನಡೆಯದಂತೆ ಹೆಚ್ಚುವರಿ ಪೊಲೀಸರು, ಕೆಎಸ್ ಆರ್ ಪಿ ತುಕಡಿಗಳನ್ನು ನಿಯೋಜಿಸಲಾಗಿತ್ತು. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಬೀಡುಬಿಟ್ಟಿದ್ದರು.