ಉಳ್ಳಾಲ: ತಡರಾತ್ರಿ ಮನೆಗೆ ಅಕ್ರಮ ಪ್ರವೇಶಗೈದ ಇಬ್ಬರು ಮಹಿಳೆಯೋರ್ವರಿಗೆ ಅವಾಚ್ಯವಾಗಿ ನಿಂದಿಸಿ ಮಾನಭಂಗಕ್ಕೆ ಯತ್ನಿಸಿರುವ ಘಟನೆ ತಲಪಾಡಿಯ ನಾರ್ಲ ಪಡೀಲ್ ಎಂಬಲ್ಲಿ ನಡೆದಿದೆ.
ತಲಪಾಡಿ ನಿವಾಸಿಗಳಾದ ಪ್ರಶಾಂತ್ ಶೆಟ್ಟಿ ಮತ್ತು ಅರುಣ್ ಎಂಬಾತ ನಾರ್ಲ ಪಡೀಲಿನಲ್ಲಿರುವ ಮಹಿಳೆ ಮನೆಗೆ ಅಕ್ರಮ ಪ್ರವೇಶಗೈದಿದ್ದರು. ಅಲ್ಲಿ `ನಿಮಗೆ ಚಿಕ್ಕಿ ತಯಾರಿಸಲು ಲೈಸೆನ್ಸ್ ಇದೆಯೇ’ ಎಂದು ಕೇಳಿ ಮಹಿಳೆಯನ್ನು ಹೆದರಿಸಿದ್ದಾರೆ. ಅದನ್ನು ಕಂಡು ಮಹಿಳೆಯ ಮೈದುನ ಇಬ್ಬರೊಂದಿಗೆ ಜಗಳಕ್ಕಿಳಿದಿದ್ದರು. ಇದರಿಂದ ಮಾತಿಗೆ ಮಾತು ಬೆಳೆದು ಪ್ರಶಾಂತ್ ಶಟ್ಟಿ ಎಂಬಾತ ಮಹಿಳೆಯ ಮೈದುನನ ಮುಖಕ್ಕೆ ಹಲ್ಲೆ ನಡೆಸಿದ್ದು, ಇದರಿಂದ ಗೋಡೆಗೆ ತಲೆ ಬಡಿದು ಗಾಯವಾಗಿದೆ. ಬಳಿಕ ಇಬ್ಬರು ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ್ದಾರೆ ಎಂದು ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರತಿದೂರು : ಪ್ರಶಾಂತ್ .ಕೆ.ಎನ್ , ಅರುಣ್ ಮತ್ತು ದಿನೇಶ್ ಎಂಬವರು ನಾರ್ಲ ಪಡೀಲಿನಲ್ಲಿರುವ ಶಕ್ತಿ ಎಂಬವರ ಮನೆಗೆ ವ್ಯವಹಾರದ ನಿಮಿತ್ತ ಮಾತನಾಡಲು ತೆರಳಿದ್ದರು. ಅಲ್ಲಿ ಶಕ್ತಿ ತನ್ನ 20 ಮಂದಿ ಜನರ ತಂಡದೊಂದಿಗೆ ಮನೆಗೆ ಬಂದಿದ್ದ ಮೂವರಿಗೆ ಹಲ್ಲೆ ನಡೆಸಿ ಜೀವಬೆದರಿಕೆಯೊಡ್ಡಿದ್ದಾರೆ. ಅಲ್ಲದೆ ಅವರಲ್ಲಿದ್ದ ಬ್ರಾಸ್ ಲೈಟ್, ರೇಡೋ ವಾಚ್, ಚಿನ್ನದ ಚೈನನ್ನು ದರೋಡೆಗೈದಿರುವುದಾಗಿ ದೂರು ನೀಡಿದ್ದಾರೆ.