ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕುತ್ತಾರು: ಕಳವು ನಡೆಸಿ ಕಳವುಗೈದ ಮಾಲನ್ನೇ ಬಿಟ್ಟು ಕಳ್ಳರು ಪರಾರಿಯಾದ ಘಟನೆ ಕೊಣಾಜೆಯಲ್ಲಿ ನಡೆದಿದ್ದರೆ, ಇಲ್ಲೊಂದು ಕಳ್ಳರ ತಂಡ ಒಂದು ಲಕ್ಷ ಬೆಲೆಬಾಳುವ ಬೈಕನ್ನು ಕಳವಿಗೆ ಯತ್ನಿಸಿ ಕೇವಲ ಅದರ ಟಯರನ್ನೇ ಕಳವು ನಡೆಸಿ ಪರಾರಿಯಾಗಿರುವ ಪ್ರಸಂಗ ಕುತ್ತಾರು ಸಮೀಪದ ಮುಂಡೋಳಿ ಎಂಬಲ್ಲಿ ನಡೆದಿದೆ.
ಮೂಲತ: ಕೇರಳ ನಿವಾಸಿ ಝಿರಾರ್ ಎಂಬವರ ಪಲ್ಸಾರ್ ಬೈಕಿನ ಹಿಂಬದಿ ಟಯರನ್ನು ಕಳಚಿ ಬೈಕನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಮುಂಡೋಳಿ ಸಮೀಪ ಬಾಡಿಗೆ ಮನೆಯಲ್ಲಿರುವ ಝಿರಾರ್ ಅವರು ಮನೆ ಕಂಪೌಂಡಿನ ಒಳಗೆ ಬೈಕ್ ನಿಲ್ಲಿಸಿದ್ದರು. ಮಂಗಳವಾರ ತಡರಾತ್ರಿ ಬೈಕನ್ನು ಕಳವುಗೈದ ಕಳ್ಳರು ಮನೆಯಿಂದ ಅರ್ಧ ಕಿ.ಮೀ ದೂರದವೆರೆಗೆ ಬೈಕನ್ನು ಕೊಂಡೊಯ್ದು , ಅಲ್ಲಿಯೇ ಬೈಕಿನ ಹಿಂಬದಿ ಟಯರನ್ನು ಟೂಲ್ಸ್ ಮುಖೇನ ಕಳಚಿ ಬೈಕನ್ನು ಬಿಟ್ಟು ಪರಾರಿಯಾಗಿದ್ದಾರೆ. ಝಿರಾರ್ ಬೆಳಿಗ್ಗೆ ತಮ್ಮ ಮಳಿಗೆಗೆ ಹೋಗಲು ಬಾಗಿಲು ತೆಗೆಯುತ್ತಿದ್ದಂತೆ ಬೈಕ್ ನಾಪತ್ತೆಯಾಗಿತ್ತು. ಬೈಕ್ ಕಳವಾಗಿದೆ ಎಂದು ಭಾವಿಸಿದ ಅವರು ಉಳ್ಳಾಲ ಪೊಲೀಸರಿಗೆ ದೂರವಾಣಿ ಮುಖೇನ ತಿಳಿಸಿದ್ದರು. ನಂತರ ಠಾಣೆಗೆ ತೆರಳಿ ಲಿಖಿತ ದೂರು ನೀಡಲು ಗೆಳೆಯನ ಬೈಕಿನಲ್ಲಿ ಹೋಗುವ ಸಂದರ್ಭ ದಾರಿಮಧ್ಯೆ ಬೈಕ್ ಟಯರ್ ಕಳಚಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಯರನ್ನೇ ದೋಚುವ ತಂಡ
ಮುಂಡೋಳಿ ಸಮೀಪ ಇಂತಹ ಟಯರ್ ಕಳವು ನಡೆಸುವ ಪ್ರಕರಣ ಇದು ಮೊದಲೇನಲ್ಲ. ಹಿಂದೆಯೂ ಬಾಡಿಗೆ ಮನೆಯಲ್ಲಿ ವೈದ್ಯಕೀಯ ವಿದ್ಯಾರ್ಥಿಗೆ ಸೇರಿದ ಕಾರಿನ ನಾಲ್ಕೂ ಟಯರುಗಳನ್ನು ಕಳಚಿ ಕಲ್ಲಿನ ಆಧಾರದಲ್ಲಿ ಅದನ್ನು ನಿಲ್ಲಿಸಿ ಪರಾರಿಯಾಗಿದ್ದರು. ಅಲ್ಲದೆ ಬೈಕೊಂದರ ಎರಡು ಟಯರುಗಳನ್ನು ಕಳವುಗೈದಿರುವ ಘಟನೆಯೂ ಇಲ್ಲಿ ನಡೆದಿರುವ ವಿಚಾರ ಸ್ಥಳೀಯರಿಂದ ಕೇಳಿಬಂದಿದೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ದೂರುಗಳು ದಾಖಲಾದರೂ ಪೊಲೀಸರು ಮಾತ್ರ ಟಯರ್ ಕಳ್ಳರನ್ನು ಪತ್ತೆಹಚ್ಚುವಲ್ಲಿ ವಿಫಲರಾಗಿದ್ದಾರೆ ಅನ್ನುವ ಮಾತುಗಳು ಕೇಳಿಬಂದಿದೆ.