ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕೊಲ್ಯ: ಬಸ್ – ಸ್ಕೂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಕೊಲ್ಯ ನಿವಾಸಿ ಶಿವಪ್ರಸಾದ್ ನಾಯ್ಕ್ (44) ಎಂಬವರು ದಾರುಣವಾಗಿ ಮೃತಪಟ್ಟಿರುವ ಘಟನೆ ಕೊಲ್ಯ ಸಮೀಪ ಭಾನುವಾರ ರಾತ್ರಿ ವೇಳೆ ಸಂಭವಿಸಿದೆ.
ಕೊಲ್ಯದ ತಾಯಿ ಮನೆಯಿಂದ ಮಂಗಳೂರಿನ ಬೆಂದೂರ್ನಲ್ಲಿರುವ ಕ್ವಾಟ್ರರ್ಸ್ಗೆ ತೆರಳುವ ಸಂದರ್ಭ ಮಂಗಳೂರಿನಿಂದ ಕಾಸರಗೋಡಿಗೆ ಹೋಗುತ್ತಿದ್ದ ಕೇರಳ ಸಾರಿಗೆ ಬಸ್ಸು ಡಿಕ್ಕಿ ಹೊಡೆದು ಘಟನೆ ಸಂಭವಿಸಿದೆ. ಮಂಗಳೂರಿನ ಮಹಾನಗರ ಪಾಲಿಕೆಯ ನೀರು ಸರಬರಾಜು ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿವಪ್ರಸಾದ್ ನಾಯ್ಕ್ ಅವರು ಎಂದಿನಂತೆ ತಾಯಿ ಮನೆಗೆ ಬಂದು ಕೈನೆಟಿಕ್ ಹೋಂಡಾ ಸ್ಕೂಟಿರನಲ್ಲಿ ವಾಪಸ್ಸಾಗುತ್ತಿದ್ದರು.
ಅಂದೇ ಸ್ಕೂಟರಿನಲ್ಲಿ ಬಂದಿದ್ದರು : ಪ್ರತಿ ಬಾರಿ ಮನೆಗೆ ಬರುವ ಶಿವಪ್ರಸಾದ್ ಅವರು ತನ್ನಲ್ಲಿದ್ದ ದ್ವಿಚಕ್ರ ವಾಹನವನ್ನು ಮಂಗಳೂರಿನಲ್ಲಿಯೇ ಬಿಟ್ಟು ಬಸ್ಸಿನಲ್ಲಿ ಬಂದು ವಾಪಸ್ಸಾಗುತ್ತಿದ್ದರು. ನಿನ್ನೆ ಭಾನುವಾರ ಆಗಿದ್ದರಿಂದಾಗಿ ಮಂಗಳೂರಿಗೆ ಹೋಗಲು ಬಸ್ಸು ಇರುವುದಿಲ್ಲವೆಂದು ದ್ವಿಚಕ್ರ ವಾಹನದಲ್ಲಿಯೇ ಕೊಲ್ಯಕ್ಕೆ ಬಂದಿದ್ದರು.
ಅರ್ಧ ಗಂಟೆ ಕಾಲ ಕಾರ್ಯಾಚರಣೆ ನಡೆಸಿದರು: ಕೊಲ್ಯ ಶಾರದಾ ಕಟ್ಟೆ ಹಿಂಭಾಗದಲ್ಲಿರುವ ಮನೆಯಿಂದ ರಾಷ್ಟ್ರೀಯ ಹೆದ್ದಾರಿಯನ್ನು ದಾಟಲು ಯತ್ನಿಸುತ್ತಿರುವಾಗ ಕೇರಳ ಸಾರಿಗೆ ಬಸ್ಸು ಅವರ ಮೇಲೆಯೇ ಚಲಿಸಿತ್ತು , ಅರ್ಧ ಕಿ.ಮೀ ದೂರ ಎಳೆದೊಯ್ದಿತ್ತು. ಶಿವಪ್ರಸಾದ್ ಅವರ ದೇಹ ಬಸ್ಸಿನಡಿ ಸಿಲುಕಿರುವುದನ್ನು ತೆಗೆಯಲು ಸ್ಥಳೀಯರು ಅರ್ಧ ಗಂಟೆಯ ಕಾಲ ಕಾರ್ಯಾಚರಿಸಿ ಬಳಿಕ ಹೊರಗೆಳೆಯುವ ಸಂದರ್ಭ ಅವರ ಪ್ರಾಣ ಪಕ್ಷಿ ಹಾರಿಹೋಗಿತ್ತು. ರಾಷ್ಟ್ರೀಯ ಹೆದ್ದಾರಿಯಲ್ಲಿ ಮಿತಿಮೀರಿದ ವೇಗದಲ್ಲಿ ಬಸ್ಸುಗಳು ಹೋಗುವುದನ್ನು ಆಕ್ಷೇಪಿಸಿದ ಸ್ಥಳೀಯರು ಬಸ್ಸಿನ ಗಾಜಿಗೆ ಕಲ್ಲೆಸೆದು ಪುಡಿಗೈದಿದ್ದಾರೆ. ಘಟನೆ ನಡೆದ ಸ್ಥಳದಿಂದ ಬಸ್ ಚಾಲಕ, ನಿರ್ವಾಹಕ ಪ್ರಯಾಣಿಕರು ಓಡಿ ಪರಾರಿಯಾಗಿದ್ದಾರೆ. ಮೃತರು ಪತ್ನಿ ಹಾಗೂ ತಾಯಿಯನ್ನು ಅಗಲಿದ್ದಾರೆ.
ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.