ಉಳ್ಳಾಲ: ಬಡವರ ಅಂಗಡಿಗಳನ್ನೇ ಗುರಿಯಾಗಿಸಿ ನಡೆಸುತ್ತಿರುವ ಕಿಡಿಗೇಡಿಗಳು ಕೃತ್ಯ ಖಂಡನೀಯ. ಉಳ್ಳಾಲ ನಗರಸಭೆ ಮತ್ತು ಟೈಲರ್ಸ್ ಅಸೋಸಿಯೇಷನ್ ಆಶ್ರಯದಲ್ಲಿ ಮತ್ತೆ ಅಂಗಡಿಯಲ್ಲಿ ವ್ಯಾಪಾರ ನಡೆಸುವಂತೆ ಎಲ್ಲಾ ರೀತಿಯಲ್ಲಿ ಸಹಕರಿಸಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಅವರು ತೊಕ್ಕೊಟ್ಟು ಕಿಡಿಗೇಡಿಗಳು ಬೆಂಕಿ ಹಾಕಿರುವ ಟಿ.ಸಿ.ರೋಡ್ ನಲ್ಲಿರುವ ವಾಸುದೇವ ಪೂಜಾರಿ ಎಂಬವರಿಗೆ ಸೇರಿದ ನಿತ್ಯಾನಂದ ಟೈರ್ಸ್ ಅಂಗಡಿಗೆ ಭೇಟಿ ನೀಡಿ ಹೇಳಿದರು.
ತೊಕ್ಕೊಟ್ಟು ಒಳಪೇಟೆಯಲ್ಲಿರುವ ಎರಡು ಸಿಸಿಟಿವಿ ಕೆಮರಾ ಮೂಲಕ ಆರೋಪಿಗಳನ್ನು ಪತ್ತೆಹಚ್ಚುವ ಕಾರ್ಯ ಪೊಲೀಸರು ಶೀಘ್ರವೇ ನಡೆಸುತ್ತಾರೆ. ಶೇ.೫ ರಷ್ಟಿರುವ ಕಿಡಿಗೇಡಿಗಳು ಇಂತಹ ಕೃತ್ಯದಲ್ಲಿ ಭಾಗಿಯಾಗುತ್ತಿದ್ದಾರೆ. ಇದನ್ನು ಧರ್ಮ ಆಧಾರಿತವಾಗಿ ತೆಗೆದುಕೊಳ್ಳದೆ, ಸಮಾಜದ್ರೋಹಿಗಳ ಮತ್ತು ಬಡವರ ನಡುವಿನ ಹೋರಾಟ ಎಂದು ಪರಿಗಣಿಸಿ ಆರೋಪಿಗಳ ಪತ್ತೆಗೆ ಎಲ್ಲರೂ ಸಹಕರಿಸಬೇಕು ಎಂದರು. ಈ ಸಂದರ್ಭ ಉಳ್ಳಾಲ ನಗರಸಭೆ ಅಧ್ಯಕ್ಷೆ ಗಿರಿಜಾ ಬಾ, ಉಪಾಧ್ಯಕ್ಷೆ ರಝಿಯಾ ಇಬ್ರಾಹಿಂ, ಟೈಲರ್ಸ್ ಅಸೋಸಿಯೇಷನ್ ಮಾಜಿ ಜಿಲ್ಲಾಧ್ಯಕ್ಷ ರಮೇಶ್ ಮಾಡೂರು, ಉಳ್ಳಾಲ ಎಸ್.ಐ.ಗಳಾದ ಭಾರತಿ, ರಾಜೇಂದ್ರ, ಟೈಲರ್ಸ್ ಅಸೋಸಿಯೇಷನ್ನಿನ ಗಿರೀಶ್, ಜಯಲಾಕ್ಷ ಕೋಟ್ಯಾನ್, ನಗರಸಭೆ ಸದಸ್ಯರಾದ ಚಿತ್ರಕಲಾ ಚಂದ್ರಕಾಂತ್, ಫಾರುಕ್ ಉಳ್ಳಾಲ್, ಮಹಮ್ಮದ್ ಮುಕ್ಕಚ್ಚೇರಿ, ಸುಕುಮಾರ್, ಮಂಗಳೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ನ ಹಿಂದುಳಿದ ವರ್ಗಗಳ ಅಧ್ಯಕ್ಷ ದಿನೇಶ್ ಕುಂಪಲ ಮೊದಲಾದವರು ಇದ್ದರು.