ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಮುಡಿಪು: ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಶ್ರಮಶಕ್ತಿ ಯೋಜನೆಯಡಿ ಸ್ವ ಉದ್ಯೋಗಕ್ಕಾಗಿ ಸುಮಾರು 70 ಅರ್ಹ ಫಲಾನುಭವಿಗಳಿಗೆ ಸಾಲದ ಚೆಕ್ ವಿತರಣೆ ಕಾರ್ಯಕ್ರಮವು ಸೋಮವಾರ ಪಜೀರು ಗ್ರಾಮ ಪಂಚಾಯಿತಿಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಚೆಕ್ ವಿತರಿಸಿ ಮಾತನಾಡಿದ ಮುಡಿಪು ಬ್ಲಾಕ್ ಕಾಂಗ್ರೆಸ್‍ನ ಅಧ್ಯಕ್ಷರಾದ ಚಂದ್ರಹಾಸ್ ಕರ್ಕೇರ ಅವರು, ಆರ್ಥಿಕವಾಗಿ, ಸಾಮಾಜಿಕವಾಗಿ ಸ್ವಾವಲಂಬೀ ಜೀವನ ನಡೆಸಲು ಇಂದು ಸರಕಾರದಿಂದ ಹಲವಾರು ಯೋಜನೆಗಳಿದ್ದು ಇದನ್ನು ಜನ ಸಾಮಾನ್ಯರಿಗೆ ತಲುಪಿಸುವ ಜವಾಬ್ದಾರಿ ಆಯಾ ವ್ಯಾಪ್ತಿಯ ಜನಪ್ರತಿನಿಧಿಗಳಿರುತ್ತದೆ. ಇಂತಹ ಸೌಲಭ್ಯಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಮುಟ್ಟುವಂತೆ ಮಾಡಬಕಾಗಿದೆ. ಇಂತಹ ಸಾಧನೆಯಿಂದ ಅಭಿವೃದ್ದಿ ಪರ ಸಮಾಜವನ್ನು ನಿರ್ಮಿಸಲು ಸಾಧ್ಯ ಎಂದು ಅವರು ಹೇಳಿದರು.
ಪಜೀರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸೀತಾರಾಂ ಶೆಟ್ಟಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗಪಡಿಸಿ ಉತ್ತಮ ಮೌಲ್ಯಯುತ ಜೀವನವನ್ನು ನಾವು ಸಾಧಿಸಬೇಕು. ಇಂತಹ ಸೌಲಭ್ಯಗಳ ದುರುಪಯೋಗವಾಗದೆ ಅದರ ಸಧ್ವಿನಿಯೋಗ ಆದರೆ ಮಾತ್ರ ಉತ್ತಮ ಫಲವನ್ನು ನಾವು ಪಡೆಯಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತವಿಕವಾಗಿ ಮಾತನಾಡಿದ ಅಬ್ದುಲ್ ಜಲೀಲ್ ಮೋಂಟುಗೋಳಿ ಅವರು ಹಲವಾರು ನಾಯಕರ ಮುತುವರ್ಜಿಯಿಂದ ಇಂತಹ ಯೋಜನೆಯ ಮಾಹಿತಿ ನೀಡಿ ಜನರಿಗೆ ತಲುಪಿಸಿ ಸುಮಾರು 70 ಜನರಿಗೆ ವಿವಿಧ ರೀತಿಯ ಸ್ವ ಉದ್ಯೋಗಕ್ಕಾಗಿ ಸಾಲವನ್ನು ವಿತರಿಸಲಾಗುತ್ತಿದೆ. ಅಲ್ಲದೆ ಮುಂದಿನ ಸೆಪ್ಟಂಬರ್‍ನಲ್ಲಿ ಸುಮಾರು 700 ಜನರಿಗೆ ವಿವಿಧ ಸೌಲಭ್ಯಗಳನ್ನು ವಿತರಿಸುವ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಡಿಪು ಬ್ಲಾಕ್ ಕಾಂಗ್ರೆಸ್‍ನ ಉಪಾಧ್ಯಕ್ಷರಾದ ಪ್ರಶಾಂತ್ ಕಾಜವ, ಎಪಿಎಂಸಿ ಸದಸ್ಯರಾದ ಉಮ್ಮರ್ ಪಜೀರು, ಪಜೀರು ಪಂಚಾಯಿತಿ ಉಪಾಧ್ಯಕ್ಷೆ ಜ್ಯೋತಿ ಪದ್ಮನಾಭ ರೈ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಇಂತಿಯಾಜ್, ಪ್ಲೋರಿನಾ ಡಿಸೋಜಾ, ಅಬೂಬಕರ್ ಸಜಿಪ, ಎಸ್.ಎಚ್.ಮೂಸಕುಂಞ, ಶೈರಿನ್ ಡಿಸೋಜಾ, ಪಂಚಾಯತಿ ಸದಸ್ಯರಾದ ಶೈರಿನ್ ಡಿಸೋಜಾ, ಮಹಮ್ಮದ್ ರಫೀಕ್, ಅಬ್ದುಲ್ ರಫೀಕ್ ದೋಟ, ಅಬ್ದುಲ್ ನಾಸೀರ್ ನಡುಪದವು, ಸಮೀರ್ ಪಜೀರು, ಶೇಖರ ಬೀಜಗುರಿ ಮುಂತಾದವರು ಉಪಸ್ಥಿತರಿದ್ದರು.