ಉಳ್ಳಾಲ್ ನ್ಯೂಸ್ ಡೆಸ್ಕ್
ಹರೇಕಳ: ಮರಳು ಹೊತ್ತು ವಾಪಸ್ಸಾಗುತ್ತಿದ್ದ ದೋಣಿಯೊಂದು ಮಗುಚಿಬಿದ್ದು ಒಂದೇ ಕುಟುಂಬದ ಓರ್ವ ನಾಪತ್ತೆಯಾಗಿ, ನಾಲ್ವರು ರಕ್ಷಣೆಗೊಳಗಾಗಿರುವ ಘಟನೆ ಪಾವೂರು ಕಡವಿನ ಬಳಿಯ ನೇತ್ರಾವತಿ ನದಿಯ ಮಧ್ಯಭಾಗದಲ್ಲಿ ಬುಧವಾರ ಮಧ್ಯಾಹ್ನ ವೇಳೆ ಸಂಭವಿಸಿದೆ.
ಹರೇಕಳ ರಾಜಗುಡ್ಡೆ ನಿವಾಸಿ ಲುಕ್ ಮೋನ್ (೨೧) ನಾಪತ್ತೆಯಾದವರು. ಇವರ ಜತೆಗಿದ್ದ ತಂಝೀಲ್, ಅಝೀಜ್, ಬದ್ರುದ್ದೀನ್ , ಸಲೀಂ ಎಂಬವರನ್ನು ರಕ್ಷಿಸಲಾಗಿದೆ. ಇವರಲ್ಲಿ ತಂಝೀಲ್ ಮತ್ತು ಬದ್ರುದ್ದೀನ್ ಎಂಬವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.


















ಒಂದೇ ಕುಟುಂಬದವರು : ದೋಣಿ ಮೂಲಕ ಮರಳುಗಾರಿಕೆಗೆ ತೆರಳಿದ ಐವರು ಒಂದೇ ಕುಟುಂಬದವರು. ತಂಝೀಲ್, ಅಝೀಜ್, ಬದ್ರುದ್ದೀನ್ ಮೂವರೂ ಸಹೋದರರಾಗಿದ್ದು, ಸಲೀಂ ಅವರ ಭಾವನಾದರೆ, ನಾಪತ್ತೆಯಾಗಿರುವ ಲುಕ್‌ಮೋನು ಅವರ ಸಹೋದರಿ ಪುತ್ರನಾಗಿದ್ದನು. ಕಳೆದ ೭ ವರ್ಷಗಳಿಂದ ಇಡೀ ಕುಟುಂಬ ಮಂಗಳೂರಿನ ಆಸೀಫ್ ಎಂಬವರಿಗೆ ಸೇರಿದ ದೋಣಿಯಲ್ಲಿ ನದಿಯಿಂದ ಮರಳು ತೆಗೆದು ದಡಕ್ಕೆ ಸಾಗಿಸುತ್ತಿರುವ ಕೆಲಸ ನಡೆಸುತ್ತಿದ್ದರು.
ಮುಂದುವರಿದ ಶೋಧ ಕಾರ್‍ಯ: ಘಟನೆ ನಡೆದ ಸ್ಥಳ ಅರ್ಧ ಭಾಗ ಕೊಣಾಜೆ ಹಾಗೂ ಮಂಗಳೂರು ಗ್ರಾಮಾಂತರ ಠಾಣೆಗೆ ಸೇರುವುದರಿಂದ ಎರಡೂ ಠಾಣೆಯ ಪೊಲೀಸರು ಸ್ಥಳದಲ್ಲಿ ಜಮಾಯಿಸಿ ಶೋಧ ಕಾರ್‍ಯ ಮುಂದುವರಿಸಿದ್ದಾರೆ. ದೋಣಿ ಮಗುಚಿದ ಸ್ಥಳ ನದಿಯ ಮಧ್ಯಭಾಗವಾಗಿರುವುದರಿಂದ ನೀರಿನ ಸೆಳೆತವೂ ಜಾಸ್ತಿಯಾಗಿದ್ದು, ಮುಳುಗಡೆಯಾಗಿರುವ ದೋಣಿಯೂ ಸಂಜೆವರೆಗೂ ಪತ್ತೆಯಾಗಿಲ್ಲ. ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಕಾರ್‍ಯಾಚರಣೆ ನಡೆಸುತ್ತಿದ್ದಾರೆ.
ಸ್ಥಳಕ್ಕೆ ತಾಲೂಕು ಪಂಚಾಯಿತಿ ಸದಸ್ಯ ಮಹಮ್ಮದ್ ಮುಸ್ತಾಫ, ಹರೇಕಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನದಾಸ್ ಶೆಟ್ಟಿ, ಡಿವೈಎಫ್ ಐನ ರಫೀಕ್ ಹರೇಕಳ, ಪಂ.ಸದಸ್ಯ ಅಶ್ರಫ್, ಎಸ್ ಡಿಪಿಐ ನ ಬಶೀರ್.ಎಸ್.ಎಂ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

