
ಉಳ್ಳಾಲ: ಯಾವುದೇ ಪ್ರದೇಶದ ಅಭಿವೃದ್ಧಿ ಆಗಬೇಕಾದರೆ ಆ ಭಾಗದ ಜನತೆ ಹಾಗೂ ಜವಾಬ್ದಾರಿಯುತ ಸಂಘ ಸಂಸ್ಥೆಗಳು ಸಂಘಟನೆಗಳ ಪಾತ್ರ ಬಹು ಮುಖ್ಯ. ಆ ನಿಟ್ಟಿನಲ್ಲಿ ನರಿಂಗಾನ ಗ್ರಾಮದ ಸೌರ್ಕುಡೇಲಿನಲ್ಲಿ ನೂತನ ಕಿರು ಸೇತುವೆ ನಿರ್ಮಾಣಕ್ಕಾಗಿ ಸಂಘ ಸಂಸ್ಥೆಗಳು ಹಾಗೂ ಇಲ್ಲಿನ ಜನರು ವಿವಿಧ ರೀತಿಯಲ್ಲಿ ಶ್ರಮಿಸಿದ್ದಾರೆ. ನೂತನ ಸೇತುವೆ ನಿರ್ಮಾಣದ ಮೂಲಕ ಅವರೆಲ್ಲರ ನಿರೀಕ್ಷೆ ಶೀಘ್ರದಲ್ಲಿ ಈಡೇರಲಿದ್ದು, ಈ ಯೋಜನೆಗೆ ಸಹಕರಿಸಿದ ಎಲ್ಲರೂ ಅಭಿನಂದನಾರ್ಹರು ಎಂದು ರಾಜ್ಯಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಆಭಿಪ್ರಾಯಪಟ್ಟರು.
ನರಿಂಗಾನ ಗ್ರಾಮದ ತೌಡುಗೋಳಿ ಕ್ರಾಸ್‍ನಿಂದ ತೌಡುಗೋಳಿ ಸಂಪರ್ಕ ರಸ್ತೆಯ ಸರ್ಕುಡೇಲಿನಲ್ಲಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ನೂತನ ಕಿರು ಸೇತುವೆಗೆ ಭಾನುವಾರ ಶಿಲಾನ್ಯಾಸಗೈದು ಅವರು ಮಾತನಾಡಿದರು.
ನರಿಂಗಾನ ಭಾಗದ ಅತಿಮುಖ್ಯ ಸೇತುವೆ ಸರ್ಕುಡೇಲು ಸೇತುವೆ ಕೇರಳ ಹಾಗೂ ಕರ್ನಾಟಕ ಗಡಿಭಾಗದಲ್ಲಿ ಪ್ರಮುಖ ಕೊಂಡಿಯೇ ಆಗಿದೆ. ಸೇತುವೆ ನಿರ್ಮಾಣ ಕಾಲದಲ್ಲಿ ಇಲ್ಲಿನ ಭೂಮಾಲೀಕರು ಪರೋಪಕಾರಿ ಭಾವನೆ ತೋರಿದ ಹಿನ್ನೆಲೆಯಲ್ಲಿ ಸುಮಾರು ಐದು ದಶಕಗಳ ಹಿಂದೆಯೇ ಈ ವ್ಯಾಪ್ತಿಯಲ್ಲಿ ಮೊತ್ತಮೊದಲ ಸದೃಢ ಸೇತುವೆ ನಿರ್ಮಾಣವಾಗಲು ಸಾಧ್ಯವಾಗಿತ್ತು. ಕಾಲಕ್ರಮೇಣ ಸೇತುವೆ ಶಿಥಿಲಗೊಂಡಿದ್ದು ನೂತನ ಸೇತುವೆ ನಿರ್ಮಾಣ ಕಾರ್ಯ ಶೀಘ್ರದಲ್ಲಿ ಪೂರ್ಣಗೊಳ್ಳುವ ವಿಶ್ವಾಸವಿದ್ದು ಕಾಮಗಾರಿ ಸಂದರ್ಭ ಸ್ಥಳೀಯರ ಸಹಕಾರ ಅತ್ಯಗತ್ಯ ಎಂದು ನುಡಿದರು.
ಮಂಗಳೂರು ಕ್ಷೇತ್ರ ವ್ಯಾಪ್ತಿಯಲ್ಲಿ ಕಳೆದ ಸಾಲಿನಲ್ಲಿ ಬಹಳಷ್ಟು ಕಾಮಗಾರಿಗಳನ್ನು ನಡೆಸಲಾಗಿದ್ದು ಮುಖ್ಯವಾಗಿ ಜನರಿಗೆ ಮೂಲ ಸೌಲಭ್ಯ ಒದಗಿಸುವತ್ತ ಆದ್ಯತೆ ನೀಡಲಾಗುತ್ತಿದೆ. ಅದರಂತೆ ರಸ್ತೆ, ಕುಡಿಯುವ ನೀರು, ಚರಂಡಿ ವ್ಯವಸ್ಥೆಯನ್ನು ಎಲ್ಲ ಭಾಗದಲ್ಲಿ ಅಳವಡಿಸುವ ಪ್ರಯತ್ನ ನಡೆದಿದೆ. ಕೆಲವು ಭಾಗದಲ್ಲಿ ತಾಂತ್ರಿಕ ತೊಂದರೆಗಳಿಂದ ಕಾಮಗಾರಿ ವಿಳಂಬವಾಗಿದ್ದರೂ ಕಾಮಗಾರಿ ಪೂರ್ಣಗೊಳಿಸಿದ ತೃಪ್ತಿ ಇದೆ ಎಂದರು.
ಕಾರ್ಯಕ್ರಮದಲ್ಲಿ ಪಂಚಾಯಿತಿ ಅಧ್ಯಕ್ಷೆ ಜಯಂತಿ ಎಸ್. ಉಪಾಧ್ಯಕ್ಷ ಶೇಖಬ್ಬ ನಿಡ್ಮಾಡ್, ಪಂಚಾಯಿತಿ ಸದಸ್ಯರುಗಳಾದ ಅಬೂಬಕ್ಕರ್ ಸಿದ್ದಿಕ್ ಪಾರೆ, ಇಸ್ಮಾಯಿಲ್ ಮೀನಂಕೋಡಿ, ಅಬ್ದುಲ್ಲ ಕೊಡಂಚಿಲ್, ವಲಯ ಕಾಂಗ್ರೆಸ್ ಅಧ್ಯಕ್ಷ ವಲಯ ಕಾಂಗ್ರೆಸ್ ಅಧ್ಯಕ್ಷ ಚಂದ್ರಹಾಸ್ ಶೆಟ್ಟಿ ಮೋರ್ಲಗುತ್ತು, ಮುಡಿಪು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಅಬ್ದುಲ್ ಜಲೀಲ್ ಮೊಂಟುಗೋಳಿ, ಡಾ. ಉದಯಶಂಕರ್ ಭಟ್ ಸೌರ್ಕುಡೇಲು, ನರಿಂಗಾನ ಯುವಕ ಮಂಡಲದ ಅಧ್ಯಕ್ಷ ನವೀನ್ ಶೆಟ್ಟಿ ಮಂಗಲ್ಪಾಡಿ, ಪ್ರಧಾನ ಕಾರ್ಯದರ್ಶಿ ಚಂದ್ರಹಾಸ್ ಎಲ್ ಸರ್ಕುಡೇಲು, ಸ್ಥಳೀಯರಾದ ರಾಮಣ್ಣ ಶೆಟ್ಟಿ ಆಳ್ವರಬೆಟ್ಟು, ಮುರಳೀಧರ ಶೆಟ್ಟಿ ಮೋರ್ಲ, ಚಂದ್ರಹಾಸ್ ಪೂಜಾರಿ ಸರ್ಕುಡೇಲು, ಲಿಂಗಪ್ಪ ಪೂಜಾರಿ ಸರ್ಕುಡೇಲು ಹಾಗೂ ಪುರಂದರ ಸರ್ಕುಡೇಲು ಉಪಸ್ಥಿತರಿದ್ದರು.
