ತಲಪಾಡಿ: ಅವರದ್ದು ಈಗಲೂ ಬಿದಿರು ಮತ್ತು ಸಲಾಕೆಗೆ ಹೆಂಚನ್ನು ಹೊದಿಕೆಯಾಗಿಸಿದ ಮನೆ. ಆ ಮನೆಯಲ್ಲಿ ಶಾರೀರಿಕ ದುರ್ಬಲರಾಗಿರುವ ಇಬ್ಬರು ಹೆಣ್ಮಕ್ಕಳು , ಮಾನಸಿಕ ಅಸ್ವಸ್ಥೆಯುಳ್ಳ ಓರ್ವ ಗಂಡು ಮಗು. ಮನೆ ಯಜಮಾನ ವೃದ್ದಾಪ್ಯದಲ್ಲೂ ಕೂಲಿ ಕೆಲಸ ಮಾಡಿ ಜೀವನ ನಿರ್ವಹಿಸುತ್ತಿದ್ದರೆ, ಮನೆಯೊಡತಿ ಮಕ್ಕಳ ತಾಯಿ ಬೀಡಿ ಕಟ್ಟಿ ಪತಿಗೆ ಕುಟುಂಬ ನಿರ್ವಹಣೆಯಲ್ಲಿ ಬೆನ್ನೆಲುಬಾಗಿ ನಿಂತಿದ್ದಾರೆ. ಇವರ ಅವ್ಯವಸ್ಥೆಯಲ್ಲಿರುವ ಮನೆಯ ದುರಸ್ತಿಗೆ ಸರಕಾರ ಮುಂದೆ ಬರಬೇಕು ಎಂದು ಉಳ್ಳಾಲದ ದಲಿತ ಹಕ್ಕುಗಳ ಸಮಿತಿ ಒತ್ತಾಯಿಸಿದೆ.
ತಲಪಾಡಿ ತಚ್ಚಣಿ ಎಂಬಲ್ಲಿ ವಾಸವಾಗಿರುವ ದಲಿತ ಕುಟುಂಬದ ಶ್ರೀನಿವಾಸ ಅವರಿಗೆ ಇರುವ ಇಬ್ಬರು ಹದಿಹರೆಯದ ಹೆಣ್ಮಕ್ಕಳು ಶಾರೀರಿಕವಾಗಿ ದುರ್ಬಲರಾದರೆ, ಓರ್ವ ಪುತ್ರ ಮಾನಸಿಕವಾಗಿ ಅಸ್ವಸ್ಥನಾಗಿದ್ದಾನೆ. ಕಳೆದ 40 ವರ್ಷಗಳಿಂದ ಬಡ ಕುಟುಂಬ ಸರಕಾರ ನೀಡಿದ ದರ್ಖಾಸ್ತು ಭೂಮಿಯಲ್ಲಿ ನಾದುರಸ್ತಿಯಲ್ಲಿರುವ ಮನೆಯಲ್ಲಿ ಬದುಕುತ್ತಿದೆ. ಕಿರಿದಾಗಿರುವ ಮನೆಗೆ ಬಿದಿರು ಮತ್ತು ಸಲಾಕೆಯಿಂದ ನಿರ್ಮಿಸಿದ ಹಂಚಿನ ಹೊದಿಕೆ ಇದೆ. ಬಹುತೇಕ ಮನೆಯ ಹೆಂಚುಗಳು ಹಾರಿ ಹೋಗಿ ಮಾಡು ತುಂಡಾಗಿ ಇಂದೋ ನಾಳೆಯೋ ಧರಾಶಾಹಿಯಾಗುವ ಗಂಭೀರ ಸ್ಥಿತಿಯಲ್ಲಿದೆ. ಕೂಲಿ ಕೆಲಸ ಮಾಡಿ ಬರುವ ಸಂಬಳದಲ್ಲಿ ಇಡೀ ಕುಟುಂಬದ ನಿರ್ವಹಣೆಯನ್ನು ಶ್ರೀನಿವಾಸ ಅವರು ಮಾಡುತ್ತಿದ್ದರೆ, ಪತ್ನಿ ಕಮಲಾ ಅವರೂ ಬೀಡಿ ಕಟ್ಟಿ ಮಕ್ಕಳ ಚಿಕಿತ್ಸೆ ವೆಚ್ಚವನ್ನೆಲ್ಲಾ ನಿಭಾಯಿಸುತ್ತಿದ್ದಾರೆ.
ಇಬ್ಬರಿಗೂ ವಯಸ್ಸಾಗಿರುವುದರಿಂದ ಅವರಿಗೂ ದುಡಿಯಲು ಕಷ್ಟಕರವಾದ ಸ್ಥಿತಿ ಇದೆ. ಅಲ್ಲದೆ ಕಮಲಾ ಅವರ ದೇಹದಲ್ಲಿ ಶಕ್ತಿಯಿಲ್ಲದೇ ಇರುವುದರಿಂದ ಆಗಾಗ ಅಸ್ವಸ್ತ್ಯಕ್ಕೀಡಾಗುತ್ತಿದ್ದಾರೆ, ಇದರಿಂದ ಬರುವ ಆದಾಯವೆಲ್ಲಾ ಕುಟುಂಬ ನಿರ್ವಹಣೆಗೆ ತಗಲುತ್ತಿದ್ದರೆ, ಮನೆ ದುರಸ್ತಿಗೆ ಯಾವುದೇ ಆದಾಯ ಇವರ ಬಳಿ ಉಳಿಯುತ್ತಿಲ್ಲ. ದಲಿತರ ಶೇ.22%, 75ರ ಮೀಸಲಾತಿ ನಿಧಿಯಿಂದ ಇವರ ಮನೆಯನ್ನು ದುರಸ್ತಿಗೊಳಿಸಿ ವಾಸಕ್ಕೆ ಯೋಗ್ಯಗೊಳಿಸಬೇಕು, ಕುಟುಂಬ ಜೀವಿಸಲು ಆರ್ಥಿಕ ಸಹಾಯವನ್ನು ಸರಕಾರ ಮಾಡಬೇಕು ಎಂದು ದಲಿತ ಹಕ್ಕುಗಳ ಹೋರಾಟ ಸಮಿತಿಯ ಉಳ್ಳಾಲ ವಲಯ ಅಧ್ಯಕ್ಷ ನಾರಾಯಣ ತಲಪಾಡಿ ಒತ್ತಾಯಿಸಿದ್ದಾರೆ.
ಬಡ ಕುಟುಂಬದ ಮನೆಗೆ ಸಮಿತಿಯ ಕಾರ್ಯದರ್ಶಿ ರೋಹಿದಾಸ್ ಅಬ್ಬಂಜರ, ರಾಮ ತಚ್ಚಣಿ, ಅನಂತ ನಡುಕುಮೇರು, ಸೀತಾರಾಮ ಕಲ್ಲಾಪುಮ ಪದ್ಮಾವತಿ.ಎಸ್.ಶೆಟ್ಟಿ, ವಿಲಾಸಿನಿ ತೊಕ್ಕೊಟ್ಟು ಮತ್ತು ಬಾಬು ಪಿಲಾರ್ ಅವರು ಭೇಟಿ ನೀಡಿದ್ದಾರೆ.