ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ತಲಪಾಡಿ: ತಲಪಾಡಿ ಬಳಿ ಚೂರಿ ಇರಿತದ ಘಟನೆ ಬುಧವಾರ ರಾತ್ರಿ ನಡೆದಿದ್ದು, ಬೈಕ್ನಲ್ಲಿ ಬಂದಿದ್ದ ಆಗಂತುಕರಿಬ್ಬರು ತಲಪಾಡಿ ತೂಮಿನಾಡು ನಿವಾಸಿ ಪ್ರದೀಪ್ ಎಂಬಾತನಿಗೆ ಚೂರಿ ಇರಿದು ಪರಾರಿಯಾಗಿದ್ದಾರೆ.
ಕಾರ್ಪೋರೇಶನ್ ಬ್ಯಾಂಕ್ನಲ್ಲಿ ಉದ್ಯೋಗಿಯಾಗಿರುವ ಪ್ರದೀಪ್ ಎಂದಿನಂತೆ ಬಸ್ಸಿನಿಂದ ಇಳಿದು ತನ್ನ ಸಹೋದರನಿಗೆ ಬೈಕ್ ತರಲು ಹೇಳಿ ತಲಪಾಡಿ ಜಂಕ್ಷನ್ನಿಂದ ದೇವಿಪುರ ಒಳರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಬೈಕ್ನಲ್ಲಿ ಬಂದ ಆಗಂತುಕರಿಬ್ಬರು ಚೂರಿಯಿಂದ ಬೆನ್ನಿಗೆ ಇರಿದು ಪರಾರಿಯಾಗಿದ್ದಾರೆ. ಇದೇ ಸಂದರ್ಭದಲ್ಲಿ ಘಟನಾ ಸ್ಥಳಕ್ಕೆ ಬಂದ ಪ್ರದೀಪ್ ಸಹೋದರ ಲಕ್ಷ್ಮಿಕಾಂತ್ ಗಾಯಗೊಂಡಿದ್ದ ಪ್ರದೀಪ್ನನ್ನು ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.ಪ್ರದೀಪ್ ಯಾವುದೇ ಸಂಘಟನೆಗಳಲ್ಲಿ ಗುರುತಿಸಿಕೊಳ್ಳದೆ ತನ್ನ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ಎನ್ನಲಾಗುತ್ತಿದೆ.
ಮೂರನೇ ಘಟನೆ :
ತಲಪಾಡಿಯಲ್ಲಿ ಸೋಮವಾರ ಕಾರು ಧ್ವಂಸ ನಡೆದಿದ್ದು, ಇದರಲ್ಲಿ 6 ಮಂದಿ ಗಾಯಗೊಂಡಿದ್ದ ಘಟನೆ ನಡೆದಿತ್ತು. ಇದಾದ ಬಳಿಕ ಮಂಗಳವಾರ ತೊಕ್ಕೊಟ್ಟಿನ ಒಳಪೇಟೆಯಲ್ಲಿ ಗುಂಪೊಂದು ಯುವಕನಿಗೆ ಥಳಿಸಿ ಸುಮಾರು ಒಂದು ಲಕ್ಷ ರೂ ಮೌಲ್ಯದ ಚಿನ್ನದ ಸರವನ್ನು ಎಳೆದು ಪರಾರಿಯಾಗಿತ್ತು. ಬುಧವಾರವೂ ಚೂರಿ ಇರಿತದ ಪ್ರಕರಣ ನಡೆಯುವ ಮೂಲಕ ಈ ವ್ಯಾಪ್ತಿಯಲ್ಲಿ ಶಾಂತಿ ಕದಡುವ ಹುನ್ನಾರ ನಡೆಯುತ್ತಿರುವುದು ಸ್ಪಷ್ಟಗೊಂಡಿದೆ.
ಆರೋಪಿಗಳ ಪತ್ತೆಯಿಲ್ಲ :
ಉಳ್ಳಾಲ ಮತ್ತು ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ನಲ್ಲಿ ಬಂದು ಚೂರಿ ಇರಿತದ ಘಟನೆ ನಡೆದು ವರ್ಷವಾದರೂ ಈವರೆಗೆ ಆರೋಪಿಗಳು ಪತ್ತೆಯಾಗಿಲ್ಲ. ಈ ಹಿಂದೆ ಪಲ್ಸರ್ ಬೈಕ್ನಲ್ಲಿ ಬಂದಿದ್ದ ಆಗಂತುಕರು ಚೂರಿ ಇರಿತ ನಡೆಸಿದರೆ, ಈ ಬಾರಿ ಫ್ಯಾಶನ್ ಬೈಕ್ನಲ್ಲಿ ಬಂದು ಚೂರಿಯಿಂದ ಇರಿದಿದ್ದಾರೆ.
ಕಳೆದೆರಡು ತಿಂಗಳಲ್ಲಿ ಹೆಚ್ಚಿದ ನೈತಿಕ ಪೊಲೀಸ್ ಗಿರಿ :
ಕಳೆದೆರಡು ತಿಂಗಳಲ್ಲಿ ಎರಡು ಚೂರಿ ಇರಿತದ ಘಟನೆ ಮತ್ತು ಮೂರಕ್ಕೂ ಹೆಚ್ಚು ನೈತಿಕ ಪೊಲೀಸ್ ಗಿರಿ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಉಳ್ಳಾಲದ ಸೈಂಟ್ ಸೆಬಾಸ್ಟಿಯನ್ ಬಸ್ ಡ್ರೈವರ್ ಧನಂಜಯ್ನಿಗೆ ನಡೆದ ಹಲ್ಲೆ, ಕೆಎಸ್ಆರ್ಟಿಸಿ ಬಸ್ ಚಾಲಕನಿಗೆ ನಡೆದ ಹಲ್ಲೆ ,ಮೂಕಾಂಬಿಕಾ ಬಸ್ ಚಾಲಕ ಸಾಗರ್ ಎಂಬಾತನಿಗೆ ಮಾಸ್ತಿಕಟ್ಟೆ ಬಳಿ ನಡೆದ ಹಲ್ಲೆಗೆ ಸಂಬಂದಿಸಿದ ಆರೋಪಿಗಳ ಮಾಹಿತಿ ಇದ್ದರೂ ಈವರೆಗೆ ಯಾರ ಮೇಲೂ ಪ್ರಕರಣ ದಾಖಲಿಸಿಲ್ಲ. ಉಳ್ಳಾಲ ಕಾಪಿಕಾಡು ಬಳಿ ತಿಂಗಳ ಹಿಂದೆ ಹರೀಶ್ ಸಾಲ್ಯಾನ್ ಎಂಬಾತನಿಗೆ ನಡೆದ ಚೂರಿ ಇರಿತದ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ವಿಫಲರಾಗಿದ್ದು, ಉಳ್ಳಾಲ, ಕೊಣಾಜೆಯಲ್ಲಿ ನಡೆದ ಚೂರಿ ಇರಿತದ ಸಾಲಿಗೆ ತಲಪಾಡಿಯ ಚೂರಿ ಇರಿತ ಪ್ರಕರಣವೂ ಸೇರ್ಪಡೆಯಾಗಿದ್ದು, ಆರೋಪಿಗಳು ಇಂತಹ ಮಾದರಿಯಲ್ಲಿ ದಾಳಿಗೊಳಗಾಗುವ ಸಾಧ್ಯತೆ ಹೆಚ್ಚಿದೆ.
ಅಮಾಯಕರಿಗೆ ತೊಂದರೆ :
ಹೆಚ್ಚಿನ ಘಟನೆಯಲ್ಲಿ ಯಾವುದೇ ಅಪರಾಧ ಪ್ರಕರಣದಲ್ಲಿ ಇರದ ಅಮಾಯಕರು ದಾಳಿಗೊಳಗಾಗುತ್ತಿದ್ದು, ರಾತ್ರಿ ವೇಳೆ ಸಂಚರಿಸಲು ಹೆದರುವ ಸ್ಥಿತಿ ನಿರ್ಮಾಣವಾಗಿದೆ.
ಘಟನಾ ಸ್ಥಳಕ್ಕೆ ಹಿರಿಯ ಅಧಿಕಾರಿಗಳ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.