ಉಳ್ಳಾಲ್ ನ್ಯೂಸ್ ನೆಟ್ ವರ್ಕ್


ತೊಕ್ಕೊಟ್ಟು: ಅವರು ಉಳಿಸಿದ ಜೀವಗಳು ನೂರಕ್ಕೂ ಅಧಿಕ. ಸದಾ ಸಾಹಸದಲ್ಲೇ ಜೀವನ ಸಾಗಿಸುತ್ತಿರುವ ವ್ಯಕ್ತಿ ಇದೀಗ ಸಮುದ್ರ ತೀರದ ಗುಜರಾತಿನಿಂದ ಕನ್ಯಾಕುಮಾರಿಗೆ ಪಾದಯಾತ್ರೆ ಹೊರಟು 57 ದಿನಗಳಲ್ಲಿ ನಡೆಯುತ್ತಾ ಭಾನುವಾರ ತಮ್ಮ ಹುಟ್ಟೂರು ತೊಕ್ಕೊಟ್ಟುವಿಗೆ ಬಂದು ತಲುಪಿದ್ದಾರೆ.



ಉಳ್ಳಾಲ ಮೊಗವೀರಪಟ್ನ ನಿವಾಸಿ ನವೀನ್.ಯಸ್.ಕರ್ಕೇರ (48) ವೃತ್ತಿಯಲ್ಲಿ ಮೀನುಗಾರರು. ಉಳ್ಳಾಲ ಮೊಗವೀರಪಟ್ನದಲ್ಲಿರುವ ಜೀವರಕ್ಷಕದಳದ ಸಕ್ರಿಯ ಕಾರ್ಯಕರ್ತ. ಸಮುದ್ರದಲ್ಲಿ ಈಜಲೆಂದು ಬಂದು ಅಲೆಗಳಲ್ಲಿ ಸಿಲುಕಿ ಅಪಾಯದ ಸ್ಥಿತಿಯಲ್ಲಿದ್ದ ಹಲವು ಮಂದಿಯ ಜೀವರಕ್ಷಿಸಿದವರು. 30 ವರ್ಷಗಳಿಂದ ಇಂತಹ ಸಾಹಸದಲ್ಲಿ ತೊಡಗಿಕೊಂಡಿರುವ ನವೀನ್ ಅವರು ಸಮುದ್ರದ ದಡದುದ್ದಕ್ಕೂ ನಡೆದುಕೊಂಡೇ ದೇವಸ್ಥಾನಗಳನ್ನು ಸಂದರ್ಶಿಸಬೇಕು ಎನ್ನುವ ಉದ್ದೇಶವನ್ನು ಹಲವು ವರ್ಷಗಳ ಹಿಂದೆ ಸಂಕಲ್ಪಿಸಿದ್ದರು. ಆ ಸಂಕಲ್ಪ ಪ್ರಸಕ್ತ 2015ರಲ್ಲಿ ಈಡೇರಿತು. ಜನವರಿ ತಿಂಗಳಿನಲ್ಲಿ ಸಚಿವ ಯು.ಟಿ.ಖಾದರ್ ಅವರ ಆಪ್ತಸಹಾಯಕ ಪ್ರವೀಣ್ ಅವರಲ್ಲಿ ಪಾದಯಾತ್ರೆ ಕೈಗೊಳ್ಳುವ ಬಗ್ಗೆ ಹೇಳಿ, ನೆರವನ್ನು ಕೇಳಿದ್ದರು.
ನೆರವಾದ ಮುಸ್ಲಿಂ ಸಹೋದರರು: ಪ್ರವೀಣ್ ಅವರು ತಮ್ಮ ಆಪ್ತ ಗುಜರಾತಿನಲ್ಲಿರುವ ಬೈಲ್ ಖಾದರ್ ಅವರನ್ನು ಸಂಪರ್ಕಿಸಿ ಪಾದಯಾತ್ರೆ ಕೈಗೊಂಡಿರುವ ಅಯ್ಯಪ್ಪ ವೃತಧಾರಿ ನವೀನ್ ಅವರಿಗೆ ಸಹಕರಿಸುವಂತೆ ಹೇಳಿದ್ದರು. ಅದರಂತೆ ಗುಜರಾತಿಗೆ ರೈಲಿನ ಮುಖಾಂತರ ತೆರಳಿದ್ದ ನವೀನ್ ಅವರನ್ನು ಅಲ್ಲಿನ ಹಿಂದು ಮತ್ತು ಮುಸ್ಲಿಂ ಬಾಂಧವರು ಸಹಕರಿಸಿ, ದ್ವಾರಕಾದಿಂದ ಕನ್ಯಾಕುಮಾರಿಯ ಪಾದಯಾತ್ರೆಗೆ ಸಹಕರಿಸಿದ್ದರು. ದಾರಿಯುದ್ದಕ್ಕೂ ಸಿಗುವ ದೇವಸ್ಥಾನ, ಮಂದಿರಗಳಲ್ಲಿ ಪಾನೀಯ, ಆಹಾರವನ್ನು ಸೇವಿಸಿ ದಿನಪೂರ್ತಿ ಪಾದಯಾತ್ರೆಯನ್ನು ನಡೆಸಿ 57 ದಿನಗಳಲ್ಲಿ ಗುಜರಾತ್, ಮಹಾರಾಷ್ಟ್ರ, ಗೋವಾ ಸಮುದ್ರ ತೀರದ ಪ್ರದೇಶಗಳಾದ ಸುಮಾರು 1900 ಕಿ.ಮೀ ಕ್ರಮಿಸಿ ಭಾನುವಾರದಂದು ತೊಕ್ಕೊಟ್ಟು ತಲುಪಿದ್ದಾರೆ.
ನಂಬಿ ಬಂದ ದೇವರು, ದಾರಿಯುದ್ದಕ್ಕೂ ಸಿಕ್ಕ ಎಲ್ಲಾ ಜನರ ಸಹಕಾರದಿಂದ ಯಾವುದೇ ತೊಂದರೆಯಿಲ್ಲದೆ ಈವರೆಗೆ ಸಮುದ್ರತೀರದ ಸುಡುಬಿಸಿಲಿನಲ್ಲಿ ಪಾದಯಾತ್ರೆ ನಡೆಸಿದ್ದೇನೆ. ಮುಂದೆ ಎಲ್ಲರ ಆಶೀರ್ವಾದದೊಂದಿಗೆ ಶೀಘ್ರವೇ ಕನ್ಯಾಕುಮಾರಿ ತಲುಪುತ್ತೇನೆ. ಆನಂತರ ಶಬರಿಮಲೆಗೆ ತೆರಳಲಿದ್ದೇನೆ ಎಂದು ನವೀನ್ ತಿಳಿಸಿದ್ದಾರೆ.
ತೊಕ್ಕೊಟ್ಟು ತಲುಪಿದ ನವೀನ್.ಯಸ್.ಕರ್ಕೇರ ಅವರನ್ನು ತೊಕ್ಕೊಟ್ಟು ಓವರ್ ಬ್ರಿಡ್ಜ್‍ನ ಸ್ವಾಮಿ ಕೊರಗಜ್ಜ ಸೇವಾ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭ ಸ್ವಾಮಿ ಕೊರಗಜ್ಜ ಸೇವಾ ಸಮಿತಿ ಅಧ್ಯಕ್ಷ ವಿವೇಕ್. ಕೆ.ಹೆಚ್, ನವೀನ್ ಭಟ್ನಗರ, ಮಹೇಶ್ ಭಟ್ನಗರ, ರಾಜೇಶ್ ಕುಮಾರ್ ಕಾಪಿಕಾಡು, ಪ್ರಕಾಶ್ ಜೆ.ಪಿ, ಪ್ರವೀಣ್ ಜೆ.ಪಿ, ಸುನಿಲ್ ಧರ್ಮನಗರ, ಗಣೇಶ್ ಬಿ.ಜಿ, ಅರ್ಚಕ ಆನಂದ ಕೋಟ್ಯಾನ್ ಕೊಲ್ಯ, ರವಿಚಂದ್ರ ಗಟ್ಟಿ ತೊಕ್ಕೊಟ್ಟು, ತೇಜಸ್ ಓವರ್ ಬ್ರಿಸ್ಜ, ರೋಹಿತ್ ಟೈಲರ್ ಮೊದಲಾದವರು ಉಪಸ್ಥಿತರಿದ್ದರು.