ಉಳ್ಳಾಲ್ ನ್ಯೂಸ್ ಡೆಸ್ಕ್
ಮುಡಿಪು: ಗೋಮಾತೆ, ನದಿಗಳು ಎಲ್ಲವೂ ಪರೋಪಕಾರವನ್ನೇ ಮಾಡುತ್ತಿದೆ. ಹಸು ಕರುವಿಗೆ ಉಣಿಸಬೇಕಾದ ಹಾಲನ್ನು ಯಜಮಾನನಿಗೆ ಕೊಡುತ್ತಾ ಅವನ ಸಂಸಾರ ಸಾಗರಕ್ಕೆ ಸುಖ ಕರುಣಿಸುತ್ತದೆ. ಎಲ್ಲೋ ಹುಟ್ಟಿ ಕಡಲು ಸೇರುವ ನದಿ ಆ ನಡುವೆ ಅದೆಷ್ಟೋ ಜನರ ಬದುಕನ್ನು ಹಸನಾಗಿಸುತ್ತದೆ. ಎಲ್ಲದರ ಹಿಂದೆಯೂ ಪರೋಪಕಾರ ಅಡಗಿದೆ. ಹಾಗಾಗಿ ಈ ಜಗತ್ತಿನಲ್ಲಿ ಕೆಲವೇ ದಿನಗಳ ಬದುಕು ನಡೆಸುವ ಅವಕಾಶ ಪಡೆದಿರುವ ನಾವು ಆ ಬದುಕಿಗೆ ಒಂದು ಅರ್ಥ ಬರಬೇಕಾದರೆ ಸಾರ್ಥಕ್ಯ ಸಿಗಬೇಕಾದರೆ ಏನಾದರೂ ಪರೋಪಕಾರ ಮಾಡುತ್ತಿರಬೇಕು ಎಂದು ಕೈರಂಗಳ ಪುಣ್ಯಕೋಟಿ ನಗರದ ಶಾರದಾ ಗಣಪತಿ ವಿದ್ಯಾಕೇಂದ್ರದ ಸಂಚಾಲಕ ಟಿ.ಜಿ.ರಾಜಾರಾಮ್ ಭಟ್ ಹೇಳಿದರು.
ಅವರು ಮೊಂಟೆಪದವು ಶಾಂತನಗರದ ಶ್ರೀ ವೀರಮಾರುತಿ ಮಂದಿರ ಮತ್ತು ವೀರಮಾರುತಿ ವ್ಯಾಯಾಮ ಶಾಲೆಯ ಒಂಬತ್ತನೆಯ ವಾರ್ಷಿಕೋತ್ಸವ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಉಪನ್ಯಾಸ ನೀಡಿದರು.
ಪ್ರಕೃತಿ ಮಾತೆಯ ಸೃಷ್ಟಿಯನ್ನು ಅಧ್ಯಯನ ಮಾಡುತ್ತಾ ಸಾಗಿದರೆ ಎಷ್ಟೊಂದು ಅದ್ಭುತವಾದ, ವೈeನಿಕ ಸತ್ಯ ಅಡಗಿದೆಯೆಂದರೆ ಹುಲಿಯ ಕರುಳು ೧೫ಮೀ. ಉದ್ದವಿರುವುದರಿಂದ ಅದು ಮಾಂಸಾಹಾರಕ್ಕೂ ಮನುಷ್ಯನ ಕರುಳು ಕೇವಲ ೫ಮೀ. ಉದ್ದವಿರುವುದರಿಂದ ಅದು ಸಸ್ಯಾಹಾರಕ್ಕೂ ಪ್ರಕೃತಿ ನಮಗೆ ದಯಪಾಲಿಸಿದೆ. ಅದು ಪಾಲನೆಯಾಗುತ್ತಿಲ್ಲ. ಅದರಂತೆ ನಡೆದರೆ ನಮ್ಮಲ್ಲಿ ರಾಕ್ಷಸ ಗುಣ ದೂರವಾಗಿ ಸಾತ್ವಿಕ ಗುಣ ಮೇಳೈಸುವುದರಲ್ಲಿ ಸಂಶಯವಿಲ್ಲ ಎಂದರು.
ತ್ರೇತಾಯುಗ, ದ್ವಾಪರದಲ್ಲಿ ರಾಕ್ಷಸರು ತಮ್ಮದೇ ಆದ ಸಾಮ್ರಾಜ್ಯ ಕಟ್ಟಿಕೊಂಡು, ತಮ್ಮದೇ ಆದ ಸಮುದಾಯದಲ್ಲಿ , ವಸತಿ ಮಾಡಿಕೊಂಡು ತಮ್ಮದೇ ರೀತಿಯ ಬದುಕನ್ನು ಕಟ್ಟಿಕೊಂಡಿದ್ದರು. ಹಾಗಾಗಿ ರಾಮ ದುಷ್ಟರನ್ನು ಶಿಕ್ಷಿಸಲು ಸ್ವರ್ಣಲಂಕೆಗೆ ಹೋಗಬೇಕಾಯಿತು. ಆದರೆ ಪ್ರಸ್ತುತ ಕಾಲಘಟ್ಟದಲ್ಲಿ ರಾಕ್ಷಸ ಪ್ರವೃತ್ತಿಯವರು ನಮ್ಮ ನಡುವೆಯೇ ಇರುವುದರಿಂದ ರಾಕ್ಷಸತ್ವದ ಕೊನೆ ಹೇಗೆ ಎಂಬ ಪ್ರಶ್ನೆ ಜ್ವಲಂತ ಸಮಸ್ಯೆಯಾಗಿ ಉಳಿದಿದೆ ಎಂದರು.
ಅಧರ್ಮದಲ್ಲಿ ಬದುಕು ಕಟ್ಟಿಕೊಂಡವರ ಏಳಿಗೆಯನ್ನು ಕಂಡಾಗ ಅಧರ್ಮದಲ್ಲಿ ಬದುಕಲು ಕೆಲವರಿಗೆ ಪ್ರೇರಣೆ ಸಿಕ್ಕರೂ ಅಧರ್ಮದಲ್ಲಿ ನಡೆದರೆ ವಿಜಯ ಮಾತ್ರ ಸಿಗಬಹುದು ಅದು ಕೂಡಾ ತಾತ್ಕಾಲಿಕ, ಆದರೆ ಧರ್ಮ ಮಾರ್ಗದಲ್ಲಿ ನಡೆದರೆ ಶಾಶ್ವತವಾದ ಜಯ ಮಾತ್ರವಲ್ಲ ಭಗವಂತನೇ ಸಿಗುತ್ತಾನೆ ಎಂಬ ನಂಬಿಕೆ ನಮ್ಮದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಮಾತನಾನಂದಮಯಿ ಆಶೀರ್ವಚನಗೈದರು.
ಕೈರಂಗಳ ಹಿರಿಯ ಪ್ರಾಥಮಿಕ ಶಾಲಾ ನಿವೃತ್ತ ಶಿಕ್ಷಕ ಲಾಡ ನಾರಾಯಣ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸತೀಶ್ ಕುಂಪಲ, ಜಿಲ್ಲಾ ಪಂಚಾಯಿತಿ ಸದಸ್ಯ ಸಂತೋಷ್ ಕುಮಾರ್ ರೈ ಬೋಳಿಯಾರು, ದೇರಳಕಟ್ಟೆಯ ವಿದ್ಯಾರತ್ನ ಆಂಗ್ಲಮಾಧ್ಯಮ ಶಾಲೆಯ ಆಡಳಿತ ನಿರ್ದೇಶಕ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ಹರೇಕಳ, ಕೈರಂಗಳ ವ್ಯವಸಾಯ ಸೇವಾ ಸಹಕಾರಿ ಸಂಘದ ಆಧ್ಯಕ್ಷ ಮಹೇಶ್ ಚೌಟ, ಹರೇಕಳ ನೇತ್ರಾವತಿ ಆಂಜನೇಯ ವ್ಯಾಯಾಮ ಶಾಲಾ ಗೌರವಾಧ್ಯಕ್ಷ ಸತ್ಯಪಾಲ್ ರೈ ಕಡೆಂಜ, ಯುವ ಉದ್ಯಮಿ ವಿಜೇಶ್ ನಾಕ್ ಮುಡಿಪು, ತಾಲೀಮು ಉಸ್ತಾದ್ ಮಾಧವ ಮಾಸ್ಟರ್ ಬಡಾಜೆ, ಮಂದಿರದ ಅಧ್ಯಕ್ಷ ರಮೇಶ್ ಬೆದ್ರೊಳಿಕೆ, ಸಂಚಾಲಕ ದಾಮೋದರ್ ಬೆದ್ರೊಳಿಕೆ ಹಾಗೂ ವಿಜಯ್ ಶಾಂತನಗರ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ಮಾರುತಿ ಕಲ್ಪೋಕ್ತ ಪೂಜೆ, ಸ್ಥಳೀಯ ಮಕ್ಕಳಿಂದ ಸಾಂಸ್ಕ ತಿಕ ಮನರಂಜನೆ, ಟಿ.ಜಿ.ರಾಜಾರಾಮ ಭಟ್ ಅವರ ಪ್ರಾಯೋಜಕತ್ವದಲ್ಲಿ ಹೊಸನಗರ ಮೇಳದವರಿಂದ ‘ಪಾದ ಪ್ರತೀಕ್ಷಾ’ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಿತು.
ಶಿಕ್ಷಕಿ ಪ್ರೀತಿಕಾ ಸ್ವಾಗತಿಸಿದರು. ಸತೀಶ್ ಶಾಂತನಗರ ವರದಿ ವಾಚಿಸಿದರು. ವಿನೋದ ವಂದಿಸಿದರು. ಪತ್ರಕರ್ತ ಸತೀಶ್ ಕುಮಾರ್ ಪುಂಡಿಕಾ ಕಾರ್ಯಕ್ರಮ ನಿರೂಪಿಸಿದರು.