ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಮುಡಿಪು: ಕ್ರೀಡೆಯು ಆರೋಗ್ಯ, ಮಾನಸಿಕ ನೆಮ್ಮದಿ ಹಾಗೂ ದೈಹಿಕ ದೃಢತೆಯೊಂದಿಗೆ ಸಮಾಜದಲ್ಲಿ ಸಾಮರಸ್ಯವನ್ನು ಮೂಡಿಸಲು ಸಹಕಾರಿಯಾಗಬಲ್ಲುದು ಎಂದು ಕೊಣಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಶೌಕತ್ ಆಲಿ ಅವರು ಹೇಳಿದರು.

ಅವರು ಕೊಣಾಜೆ ಗ್ರಾಮದ ಕುಂಟಾಲಗುಳಿಯಲ್ಲಿ ಶ್ರೀ ಮಹಾಕಾಳಿ ಮಿತ್ರಮಂಡಳಿಯ ವತಿಯಿಂದ ಭಾನುವಾರ ಕುಂಟಾಲಗುಳಿಯ ಮೈದಾನದಲ್ಲಿ ನಡೆದ ವಾಲಿಬಾಲ್ ಪಂದ್ಯಾಟದ ವಿಜೇತ ತಂಡಗಳಿಗೆ ಪ್ರಶಸ್ತಿಯನ್ನು ವಿತರಿಸಿ ಮಾತನಾಡಿದರು.
ಇಂದು ಕೇವಲ ಶಿಕ್ಷಣ ಮಾತ್ರ ನಮ್ಮನ್ನು ಪರಿಪೂರ್ಣವಾಗಿದು. ಶೈಕ್ಷಣಿಕ ಚಟುವಟಿಕೆಯೊಂದಿಗೆ ಕ್ರೀಡೆಯೂ ಕೂಡಾ ನಮ್ಮನ್ನು ಉತ್ತಮ ನಾಗರಿಕನನ್ನಾಗಿ ಸೃಷ್ಟಿಸಬಲ್ಲುದು. ಅಲ್ಲದೆ ಇಂದು ಗ್ರಾಮೀಣ ಪ್ರದೇಶದ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಎಷ್ಟೋ ಜನರು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿದ್ದಾರೆ ಎಂದು ಹೇಳಿದರು.
ದಸ್ತಾವೇಜು ಬರಹಗಾರರಾದ ಸದಾಶಿವಯ್ಯ ಶಾಸ್ತ್ರಿಯವರು ಮಾತನಾಡಿ, ಹಿಂದೆ ಕ್ರೀಡೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ಸಿಗುತ್ತಿರಲಿಲ್ಲ. ಆದರೆ ಇಂದು ಬಹಳಷ್ಟು ಪ್ರೋತ್ಸಾಹ ಸಿಗುತ್ತಿದ್ದು, ಗ್ರಾಮೀಣ ಯುವಕರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಪಂಚಾಯಿತಿ ಸದಸ್ಯ ನಝರ್ ಷಾ ಪಟ್ಟೋರಿ ಅವರು ಮಾತನಾಡಿ, ಸಮಾಜದಲ್ಲಿ ಸೌಹಾರ್ಧತೆಯ ವಾತವಾರಣವನ್ನು ಕ್ರೀಡೆಯಿಂದ ಕಂಡುಕೊಳ್ಳಲು ಸಾಧ್ಯವಿದೆ. ಆದ್ದರಿಂದ ಪ್ರತಿಯೊಬ್ಬರೂ ಇಂತಹ ಕ್ರೀಡಾಕೂಟಗಳಿಗೆ ಮಹತ್ವಕೊಡಬೇಕು ಎಂದು ಹೇಳಿದರು.
ವಾಲಿಬಾಲ್ ಪಂದ್ಯಾಟದ ಉದ್ಘಾಟನೆಯನ್ನು ಉದ್ಯಮಿ ಇಬ್ರಾಹಿಂ ಹಾಜಿ ನಡುಪದವು ಅವರು ನೆರವೇರಿಸಿದರು.
ಸಮಾರೋಪ ಕಾರ್ಯಕ್ರಮದಲ್ಲಿ ಪಂಚಾಯಿತಿ ಸದಸ್ಯ ಚಂದ್ರಹಾಸ, ಮಹಮ್ಮದ್ ಇಕ್ಬಾಲ್, ಮಂಗಳೂರು ವಿವಿಯ ರಾಜೇಂದ್ರನ್, ಸ್ಥಳೀಯ ಮುಖಂಡರಾದ ಸುದಾಕರ್. ಶಿವಪ್ರಕಾಶ್ ಭಟ್, ಅವಿನಾಶ್ ಮುಂತಾದವರು ಉಪಸ್ಥಿತರಿದ್ದರು. ಸತೀಶ್ ಕೊಣಾಜೆ ಸ್ವಾಗತಿಸಿ, ಶಿವಪ್ರಕಾಶ್ ಭಟ್ ದನ್ಯವಾದ ಸಲ್ಲಿಸಿದರು.