ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಕೊಣಾಜೆ : ತಾಂತ್ರಿಕ ಶಿಕ್ಷಣದಲ್ಲಿ ಪ್ರತಿಭೆಯೊಂದಿಗೆ ನಿರಂತರ ಕಲಿಕೆ, ಕೌಶಲ್ಯವೃದ್ಧಿಸಿಕೊಂಡರೆ ಮಾತ್ರ ಉನ್ನತ ಸಂಸ್ಥೆಗಳಲ್ಲಿ ಉದ್ಯೋಗವನ್ನು ಗಳಿಸಲು ಸಾಧ್ಯವಿದ್ದು, ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನದಲ್ಲಿ ಕೌಶಲ್ಯವನ್ನು ವೃದ್ಧಿಸಿಕೊಳ್ಳುವ ಕಾರ್ಯ ಮಾಡಬೇಕು ಎಂದು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದ ಉಪಕುಲಪತಿ ಡಾ. ಮಹೇಶಪ್ಪ ಅಭಿಪ್ರಾಯಪಟ್ಟರು.

ಅವರು ಕೊಣಾಜೆ ನಡುಪದವಿನ ಪಿ.ಎ.ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಪ್ರಾರಂಬೋತ್ಸವ `ಫ್ರೆಶರ್ಸ್ ಡೇ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ದಶಕಗಳ ಹಿಂದೆ ಶೈಕ್ಷಣಿಕವಾಗಿ ಬಹಳಷ್ಟು ಪ್ರತಿಭಾವಂತರಾಗಿದ್ದರೂ ಉದ್ಯೋಗ ಅರಸುತ್ತಾ ದೇಶ ವಿದೇಶಗಳೀಗೆ ಹೋಗುವ ಅನಿವಾರ್ಯತೆ ಇತ್ತು. ಆದರೆ ಬದಲಾದ ದಿನಗಳಲ್ಲಿ ಬೃಹತ್ ಸಂಸ್ಥೆಗಳು ಕಾಲೇಜಿನ ಕ್ಯಾಂಪಸ್‍ಗೆ ಬಂದು ಉದ್ಯೋಗವಕಾಶ ಕೊಡುತ್ತಿದೆ. ಆದರೆ ಪ್ರತಿಭಾವಂತರಾಗಿದ್ದರೆ ಮಾತ್ರ ತಕ್ಷಣವೇ ಉದ್ಯೋಗ ತಮ್ಮದಾಗಿಸಿಕೊಳ್ಳಲು ಸಾಧ್ಯ ಎಂದ ಅವರು ಪಿ.ಎ.ಯಂತಹ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ಉತ್ತಮ ಮೂಲಭೂತ ಸೌಕರ್ಯ, ಉನ್ನತ ಬೋಧಕ ಸಿಬ್ಬಂದಿಗಳ ಮಾರ್ಗದರ್ಶನದಲ್ಲಿ ಉನ್ನತ ಕೌಶಲ್ಯವನ್ನು ವೃದ್ಧಿಸಿಕೊಳ್ಳಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಪಿ.ಎ.ಇಂಜಿಯರಿಂಗ್ ಕಾಲೇಜು ಅಧ್ಯಕ್ಷ ಡಾ.ಪಿ.ಅಬ್ದುಲ್ಲಾ ಇಬ್ರಾಹಿಂ ಮಾತನಾಡಿ, ಕಾಲೇಜಿನಲ್ಲಿ ಕಲಿಕೆಗೆ ಬೇಕಾದ ಎಲ್ಲಾ ಸೌಕರ್ಯಗಳನ್ನು ಕಲ್ಪಿಸಲಾಗಿದ್ದು ವಿದ್ಯಾರ್ಥಿಗಳು ದೊಡ್ಡ ಕನಸಿನೊಂದಿಗೆ, ಉನ್ನತ ಸ್ಥಾನಕ್ಕೇರುವ ನಿಟ್ಟಿನಲ್ಲಿ ಸಿಕ್ಕಿದ ಅವಕಾಶ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ದೇರಳಕಟ್ಟೆಯ ಯೇನೆಪೋಯ ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ. ಕೆ.ಪಿ.ಜಯರಾಜನ್ ಮಾತನಾಡಿ, ವಿದ್ಯಾರ್ಥಿಗಳು ಕನಸು ಕಂಡರೆ ಸಾಲದು. ಅದನ್ನು ಈಡೇರಿಸಲು ಪ್ರಯತ್ನಿಸಬೇಕು. ಶಿಕ್ಷಣವನ್ನು ಮೂಲ ಧ್ಯೇಯವನ್ನಾಗಿಸಿಕೊಳ್ಳಬೇಕು. ಅಡೆತಡೆಗಳು ಬರುವುದು ಸಾಮಾನ್ಯ. ಆದರೆ ಅದಕ್ಕೆ ಪರ್ಯಾಯ ಮಾರ್ಗ ಕಂಡುಕೊಳ್ಳುವುದು ಮುಖ್ಯ. ಹಾಗಿದ್ದರೆ ನಮ್ಮ ಉದ್ದೆಶಿತ ಗುರಿಯೆಡೆಗೆ ಮುಟ್ಟಲು ಸಾಧ್ಯ ಎಂದರು.
ಮಂಗಳೂರಿನ ಎ.ಜೆ. ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡಾ. ರವೀಶ್ ತುಂಗ ಎ, ಉಪ ಪ್ರಾಂಶುಪಾಲ ಡಾ. ರಮೀಝ್ ಎಂ.ಕೆ., ಅಕಾಡೆಮಿಕ್ ಡೈರೆಕ್ಟರ್ ಪ್ರೊ. ಸರ್ಫರಾಜ್ ಹಾಸಿಂ ಜೆ, ಆಡಳಿತಾ„ಕಾರಿ ಡಾ.ಆರ್. ಜಿ.ಡಿ.ಸೋಜ, ಕೆ.ಎಂ.ಹನೀಫ್, ಪಿ.ಎ.ಲತೀಫ್, ಎಂಬಿಎ ವಿಭಾಗದ ಡಾ.ಬೀರನ್ ಮೊಯ್ದೀನ್ ಉಪಸ್ಥಿತರಿದ್ದರು.
ಪ್ರೊ. ಎ.ಕೆ.ಕುಲಕರ್ಣಿ, ಬಯೋಟೆಕ್ನಾಲಜಿ ವಿಭಾಗದ ಡಾ. ಕೃಷ್ಣ ಪ್ರಸಾದ್, ಸಿವಿಲ್ ಎಂಜಿನಿಯರಿಂಗ್ ವಿಭಾಗದ ಡಾ. ರಾಜೇಶ್ ಜಿ. ಡಿಸೋಜ, ಸಿಎಸ್/ಐಎಸ್ ವಿಭಾಗದ ಡಾ.ಶರ್ಮಿಳಾ ಕುಮಾರಿ, ಇಸಿ/ಟಿಇ ವಿಭಾಗದ ಪ್ರೊ .ಅಬ್ದುಲ್ಲಾ ಗುಬ್ಬಿ ಮಾಹಿತಿ ನೀಡಿದರು.
ಪಿ.ಎ.ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಅಬ್ದುಲ್ ಶರೀಫ್ ಸ್ವಾಗತಿಸಿದರು. ಮಸೀದಿ ಇಮಾಮ್ ಇಝಾಝುದ್ದೀನ್ ಕೌಸರಿ ಕಿರಾಅತ್ ಓದಿದರು. ಡಾ.ಶಾಂತಕುಮಾರಿ ವಂದಿಸಿದರು. ವಿದ್ಯಾರ್ಥಿಗಳಾದ ಅಬ್ದುಲ್ ಅಹದ್ ಶೇಖ್ ಹಾಗೂ ಹಫ್ಸಾ ಯಾಕೂಬ್ ಕಾರ್ಯಕ್ರಮ ನಿರೂಪಿಸಿದರು.