ಉಳ್ಳಾಲ್‌ನ್ಯೂಸ್ ನೆಟ್‌ವರ್ಕ್
ತಲಪಾಡಿ: ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಅಂಗಡಿಯೊಂದು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿ ರೂ. ೪೦ ಲಕ್ಷ ನಷ್ಟ ಸಂಭವಿಸಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕೊಂಡಾಣ ಬಳಿ ಸಂಭವಿಸಿದೆ.
ಭರತ್ ಎಂಬವರಿಗೆ ಸೇರಿದ ‘ಸಾಯಿರಾಂ’ ಫ್ಯಾನ್ಸಿ ಮತ್ತು ಮೊಬೈಲ್ ಅಂಗಡಿ ಸಂಪೂರ್ಣ ಭಸ್ಮವಾಗಿದ್ದು, ಒಳಗಿದ್ದ ಫ್ಯಾನ್ಸಿ ಸೊತ್ತು, ಮಾರಾಟಕ್ಕೆ ಇರಿಸಲಾಗಿದ್ದ ಹೊಸ ಮೊಬೈಲ್ ಸೆಟ್ ಗಳು ಮತ್ತು ರಿಪೇರಿಗೆಂದು ಬಂದ ಮೊಬೈಲ್ ಸೆಟ್ ಗಳು ಸುಟ್ಟು ಕರಕಲಾಗಿವೆ. ಶನಿವಾರ ತಡರಾತ್ರಿ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದನ್ನು ಗಮನಿಸಿದ ಸ್ಥಳೀಯರು ಕೂಡಲೇ ಅಂಗಡಿ ಮಾಲೀಕರಿಗೆ ವಿಷಯ ಮುಟ್ಟಿಸಿದರು. ಅವರು ಸ್ಥಳಕ್ಕಾಗಮಿಸಿ ಅಗ್ನಿ ಶಾಮಕ ದಳದವರಿಗೆ ಮಾಹಿತಿ ನೀಡಿದ್ದು, ಅವರು ಸ್ಥಳಕ್ಕಾಗಮಿಸುವಷ್ಟರಲ್ಲಿ ಅಂಗಡಿಯೊಳಗಿನ ಸೊತ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿತ್ತು.
ಕಳೆದ ಐದು ವರ್ಷಗಳಿಂದ ಬಾಡಿಗೆ ಕಟ್ಟಡದಲ್ಲಿ ಭರತ್ ಅವರು ಅಂಗಡಿ ನಡೆಸುತ್ತಿದ್ದರು. ಬ್ಯಾಂಕ್‌ನಲ್ಲಿ ಸಾಲ ಪಡೆದು ಅಂಗಡಿಯನ್ನು ನಡೆಸುತ್ತಿದ್ದರು. ಸ್ಥಳಕ್ಕೆ ಉಳ್ಳಾಲ ಪೊಲೀಸರು, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸತೀಶ್ ಕುಂಪಲ, ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಚಂದ್ರಶೇಖರ್ ಉಚ್ಚಿಲ್, ಮೆಸ್ಕಾಂನ ಅಧಿಕಾರಿಗಳು ಭೇಟಿ ನೀಡಿದ್ದಾರೆ.