ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಕೊಲ್ಯ: ಕಾರ್ಮಿಕರಿಗಾಗಿ ಇರುವ ಸರಕಾರದ ಸವಲತ್ತುಗಳು , ಅದನ್ನು ಪಡೆದುಕೊಳ್ಳುವ ಕಾಳಜಿ ಹಾಗೂ ಜನಸಾಮಾನ್ಯರು ಯೋಜನೆಗಳನ್ನು ಅರಿತುಕೊಳ್ಳುವ ಹಿತದೃಷ್ಟಿಯಿಂದ ಆರಂಭವಾಗಿರುವ ಕಾರ್ಮಿಕ ಸಂಘಟನೆಗಳು ಹೋರಾಟಕ್ಕೆ ಮಾತ್ರ ಸೀಮಿತವಾಗಿರದೆ, ಕಾರ್ಮಿಕರ ಹಿತದೃಷ್ಟಿಯಿಂದ ಕಾರ್ಯ ನಿರ್ವಹಿಸಬೇಕಿದೆ ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸತೀಶ್ ಕುಂಪಲ ಹೇಳಿದ್ದಾರೆ.

ಅವರು ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ, ಮಜ್ದೂರ್ ಸಂಘ ಉಳ್ಳಾಲ ವಲಯ , ಭಾರತೀಯ ಮಜ್ದೂರ್ ಸಂಘಕ್ಕೆ ಸಂಯೋಜಿತ ಇದರ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಮತ್ತು ಇತರ ನಿರ್ಮಾಣ ಕಾರ್ಮಿಕರ ನೋಂದಣಿ ಹಾಗೂ ಮಂಡಳಿಯಿಂದ ಸಿಗುವ ಸವಲತ್ತುಗಳ ಬಗ್ಗೆ ಉದ್ಘಾಟನೆ, ಮಾಹಿತಿ ಹಾಗೂ ನೋಂದಣಿ ಕಾರ್ಯಕ್ರಮವನ್ನು ಕೊಲ್ಯ ಶಾರದ ಸಭಾಭವನದಲ್ಲಿ ಭಾನುವಾರ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಪಂಚಾಯಿತಿ ವತಿಯಿಂದ ಗ್ರಾಮಸ್ನೇಹಿ ಕಾರ್ಯಕ್ರಮಗಳ ಮೂಲಕ ಸರಕಾರದ ಸವಲತ್ತುಗಳನ್ನು ಜನರಿಗೆ ತಲುಪಿಸುವ ಕಾರ್ಯಕ್ರಮ ನಡೆಯುತ್ತಿದ್ದು, ಅದು ಯಶಸ್ವಿಯಾಗಿದೆ. ಕಾರ್ಮಿಕರು ಒಗ್ಗಟ್ಟಾಗಿ ಇದ್ದಾಗ ಸವಲತ್ತುಗಳನ್ನು ಗಳಿಸಲು ಸಾಧ್ಯ. ಸದ್ಯ ರಾಜ್ಯ ಸರಕಾರ ಕಾರ್ಮಿಕರ ಕಲ್ಯಾಣ ನಿಧಿಯನ್ನು ಸರಿಯಾಗಿ ವಿನಿಯೋಗ ಮಾಡುತ್ತಿಲ್ಲ. ಇದರಿಂದ ರಾಜ್ಯದಾದ್ಯಂತ ಕಾರ್ಮಿಕರಿಗೆ ವಂಚನೆಯಾಗಿದೆ. ಅದರ ಕುರಿತು ಬಿಎಂಎಸ್ ವತಿಯಿಂದ ಹೋರಾಟ ನಡೆಯಬೇಕಿದೆ ಎಂದ ಅವರು ಕಾರ್ಮಿಕರು ತಮ್ಮ ಕುಟುಂಬದ ಹಿತದೃಷ್ಟಿಯಿಂದ ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿಸಿಕೊಂಡಾಗ ಸವಲತ್ತುಗಳನ್ನು ಪಡೆಯಬಹುದು ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಹಿರಿಯ ಕಾರ್ಮಿಕ ನಿರೀಕ್ಷಕ ಗಣಪತಿ ಹೆಗ್ಡೆ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತೀಯ ಮಜ್ದೂರ್ ಸಂಘದ ರಾಜ್ಯಾಧ್ಯಕ್ಷ ಕೆ.ವಿಶ್ವನಾಥ ಶೆಟ್ಟಿ ವಹಿಸಿದ್ದರು. ಸಂಘದ ಸಂಘಟನಾ ಕಾರ್ಯದರ್ಶಿ ಸುಜೀರ್, ಬೆಂಗಳೂರಿನ ಕರ್ನಾಟಕ ಕೈಗಾರಿಕಾ ಸಮಿತಿ ಮಹಾಮಂಡಳಿಯ ಉಪಾಧ್ಯಕ್ಷ ಮಯೂರ್ ಉಳ್ಳಾಲ್, ಹಿರಿಯ ಸಾಮಾಜಿಕ ಕಾರ್ಯಕರ್ತ ಸೀತಾರಾಮ ಬಂಗೇರ, ಕೊಂಡಾಣ ಶ್ರೀ ಸಾಯಿ ಮಂದಿರದ ಟ್ರಸ್ಟಿ ಸುರೇಶ್.ಕೆ.ಪಿ, ಗುತ್ತಿಗೆದಾರರಾದ ಜಯಂತ್ ಕೊಂಡಾಣ, ಚಂದ್ರಹಾಸ್ ಪಂಡಿತ್ ಹೌಸ್ , ಲಕ್ಷ್ಮಣ್ ಮೇಸ್ತ್ರಿ, ಹರಿದಾಸ್ ಮಾಡೂರು, ಮಾಧವರಾವ್ ಕಿನ್ಯಾ, ಸಂಘದ ರಾಜ್ಯ ಕಾರ್ಯದರ್ಶಿ ಮಾಧವ, ಜಿಲ್ಲಾ ಪ್ರ.ಕಾ ಗೋಪಾಲಕೃಷ್ಣ ಮೊದಲಾದವರು ಉಪಸ್ಥಿತರಿದ್ದರು.
ಉಳ್ಳಾಲ ವಲಯದ ಅಧ್ಯಕ್ಷ ರಮೇಶ್ ಕೊಂಡಾಣ ಸ್ವಾಗತಿಸಿದರು. ಪ್ರವೀಣ್.ಎಸ್.ಕುಂಪಲ ಕಾರ್ಯಕ್ರಮ ನಿರ್ವಹಿಸಿದರು. ಜಯಪ್ರಕಾಶ್ ಬಬ್ಬುಕಟ್ಟೆ ವಂದಿಸಿದರು.