ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ಕಾರುಗಳನ್ನು ತಡೆದು ಗಾಜು ಪುಡಿಗೈದು, ಆರು ಜನರ ಮೇಲೆ ಹಲ್ಲೆ ನಡೆಸಿ ದರೋಡೆಗೈದ ಪ್ರಕರಣಕ್ಕೆ ಸಂಬಂಧಿಸಿ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಜೇಶ್ವರ ನಿವಾಸಿಗಳಾದ ಅಝರ್, ರಶೀದ್, ನಿಝಾಂ, ನಿಯಾಝ್, ಯಾಸೀರ್, ಅನೀದ್ ಹಲ್ಲೆಗೊಳಗಾದವರು. ಸ್ವಿಫ್ಟ್ ಕಾರಿನಲ್ಲಿ ಮಂಜೇಶ್ವರದಿಂದ ಮಂಗಳೂರಿನತ್ತ ತೆರಳುತ್ತಿದ್ದ ಇವರನ್ನು ಮಂಜೇಶ್ವರದಿಂದ ಬೆನ್ನಟ್ಟಿದ ಸ್ಕೂಟರ್ ಹಾಗೂ ಬೈಕ್ ಗಳಲ್ಲಿ ಬಂದಿದ್ದ 10 ಮಂದಿಯ ತಂಡ ತಲಪಾಡಿ ಸಮೀಪ ಕಾರನ್ನು ಅಡ್ಡಗಟ್ಟಿ ತಡೆಹಿಡಿದಿದ್ದರು. ಕಾರಿನಲ್ಲಿದ್ದವರು ಕಾರನ್ನು ಬಾಡಿಗೆಗೆ ಪಡೆದಿರುವ ವಿಚಾರವನ್ನು ತಿಳಿಸಿದಾಗ, ಕಾರಿನ ಮಾಲೀಕರನ್ನು ತಂಡ ಸ್ಥಳಕ್ಕೆ ಕರೆಸಿತ್ತು. ಅಲ್ಲಿಗೆ ಆಲ್ಟೋ ಕಾರಿನಲ್ಲಿ ಬಂದ ಕಾರಿನ ಮಾಲೀಕನನ್ನು ತಡೆದ ತಂಡ ಎರಡು ಕಾರುಗಳ ಗಾಜನ್ನು ಪುಡಿಗೈದು ಎರಡು ಕಾರಿನಲ್ಲಿದ್ದ ಆರು ಮಂದಿಗೆ ಕೈಯಿಂದ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಅವರ ಬಳಿಯಿದ್ದ ಮೊಬೈಲ್ ಹಾಗೂ ನಗದನ್ನು ಲೂಟಿಗೈದಿರುವ ಕುರಿತು ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತೀಚೆಗೆ ತಲಪಾಡಿಯ ಪಂಜಾಳ ಸಮೀಪ ಸರಣಿ ಕಳವು ನಡೆದ ಪ್ರಕರಣದಲ್ಲಿ ಒಂದು ಕಾರು ಭಾಗಿಯಾಗಿತ್ತು. ಅದರ ನೋಂದಣಿ ಸಂಖ್ಯೆಯನ್ನು ನೋಡಿದ್ದ ಸ್ಥಳೀಯರು ವಿಚಾರಣೆಗೆಂದು ತಲಪಾಡಿ ಸಮೀಪ ತಡೆಹಿಡಿದಿದ್ದರು. ಆದರೆ ಕಾರಿನಲ್ಲಿದ್ದವರು ತಾನು ವಿದೇಶದಿಂದ ಬಂದಿದ್ದು, ಕಾರನ್ನು ಬಾಡಿಗೆಗೆ ಪಡೆದು ಮಂಗಳೂರಿಗೆ ಗೆಳೆಯರೊಂದಿಗೆ ತೆರಳುತ್ತಿದ್ದೇನೆ ಅಂದಿದ್ದಾರೆ. ಅದಕ್ಕೆ ಕಾರಿನ ಮಾಲೀಕನನ್ನು ಸ್ಥಳಕ್ಕೆ ಕರೆಸಿದಾಗ ಮಾಲೀಕ ಉಡಾಫೆಯಿಂದ ವರ್ತಿಸಿದ್ದಲ್ಲದೆ, ಮಂಜೇಶ್ವರ ಪೊಲೀಸರೆಲ್ಲರೂ ತನ್ನ ಪರಿಚಯದವರು ಎಲ್ಲರನ್ನು ಒಳಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದನು. ಇದಕ್ಕೆ ಕೆರಳಿದ ತಂಡ ಎರಡು ಕಾರುಗಳ ಗಾಜನ್ನು ಪುಡಿಗೈದು ಹಲ್ಲೆ ನಡೆಸಿರುವ ವಿಚಾರ ತಿಳಿದುಬಂದಿದೆ.