UN NETWORKS
ಉಳ್ಳಾಲ: ಓಖಿ ಚಂಡಾಮಾರುತದ ಹಿನ್ನೆಲೆಯಲ್ಲಿ ಉಳ್ಳಾಲದಲ್ಲಿ ಕಂಡುಬಂದ ಸಮುದ್ರದ ಅಲೆಗಳ ನರ್ತನಕ್ಕೆ ಎರಡು ಮನೆಗಳು ಸಮುದ್ರ ಪಾಲಾದರೆ, ರೆಸಾರ್ಟಿಗೆ ನೀರು ನುಗ್ಗಿ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಮಂದಿ ದಿಕ್ಕು ಪಾಲಾಗಿ ಓಡಿ ಪಾರಾಗಿ , ಉಳ್ಳಾಲ, ಸೋಮೇಶ್ವರ, ಉಚ್ಚಿಲ ಭಾಗದಲ್ಲಿ ಹಲವು ಮನೆಗಳಿಗೆ ಅಲೆಗಳು ಅಪ್ಪಳಿಸಿ ಹಾನಿಗೀಡಾದ ಘಟನೆ ಶನಿವಾರ ತಡರಾತ್ರಿಯಿಂದ ಭಾನುವಾರ ಬೆಳಗ್ಗಿನವರೆಗೆ ಸಂಭವಿಸಿದೆ.
ಉಳ್ಳಾಲ ಒಂಭತ್ತುಕೆರೆಯ ಸೀಸೈಡ್ ನಿವಾಸಿ ಫಿಲೋಮಿನಾ ಫೆರ್ನಾಂಡಿಸ್ ಮತ್ತು ಎವರೆಸ್ಟ್ ಅಲ್ಫೋನ್ಸ್ ಎಂಬವರಿಗೆ ಸೇರಿದ 30 ವರ್ಷಗಳ ಹಳೇಯ ಮನೆ ಸಂಪೂರ್ಣವಾಗಿ ಸಮುದ್ರಪಾಲಾಗಿವೆ. ಉಳ್ಳಾಲದ ಮೊಗವೀರಪಟ್ನ ಸಮೀಪದ ಸಮ್ಮರ್ ಸ್ಯಾಂಡ್ ರೆಸಾರ್ಟ್ನಲ್ಲಿ ಶನಿವಾರ ತಡರಾತ್ರಿ ನಡೆಯುತ್ತಿದ್ದ ಸಮಾರಂಭಕ್ಕೆ ನೀರು ನುಗ್ಗಿ , ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಂದಿ ಆತಂಕಗೊಂಡು ದಿಕ್ಕುಪಾಲಾಗಿ ಓಡಿರುವ ಘಟನೆಯೂ ನಡೆದಿದೆ.
ಚರ್ಚಿನಿಂದ ಬರುವಷ್ಟರಲ್ಲಿ ಮನೆಯೇ ಇರಲಿಲ್ಲ :
ತೊಕ್ಕೊಟ್ಟು ಸಂತ ಸೆಬೆಸ್ತಿಯನ್ನರ ಚರ್ಚಿನಲ್ಲಿ ಮೂರು ದಿನಗಳಿಂದ ನಡೆಯುತ್ತಿರುವ ವಿಶೇಷ ಪೂಜೆಯ ನಿಮಿತ್ತ ಶನಿವಾರ ಸಂಜೆ ಎರಡು ಮನೆಗಳ ಉರ್ಬನ್ ಫೆರ್ನಾಂಡಿಸ್, ಫಿಲೋಮಿನಾ ಫೆರ್ನಾಂಡಿಸ್ ದಂಪತಿ ಹಾಗೂ ಪುತ್ರ ಮೆಲ್ವಿನ್ ಪೆರ್ನಾಂಡಿಸ್ ಹಾಗೂ ಇನ್ನೊಂದು ಮನೆಯಲ್ಲಿದ್ದ ಎವರೆಸ್ಟ್ ಅಲ್ಫೋನ್ಸ್ ಮತ್ತು ಐರಿನ್ ಅಲ್ಫೋನ್ಸ್ ದಂಪತಿ ಪೂಜೆಗೆಂದು ತೆರಳಿದ್ದರು. ತಡರಾತ್ರಿ 9 ಗಂಟೆಯ ಸುಮಾರಿಗೆ ಮನೆಗೆಂದು ಬರುವಾಗ ಎವರೆಸ್ಟ್ ಅಲ್ಫೋನ್ಸ್ ಅವರ ಮನೆ ಭಾಗಶ: ಸಮುದ್ರಪಾಲಾಗಿದ್ದರೆ, ಉರ್ಬನ್ ಮನೆ ಸಂಪೂರ್ಣ ಸಮುದ್ರಪಾಲಾಗಿತ್ತು. ಮನೆಯೊಳಗಿದ್ದ ಟಿ.ವಿ, ರೆಫ್ರಿಜರೇಟರ್ ಇಲೆಕ್ಟ್ರಾನಿಕ್ ಸಾಮಗ್ರಿಗಳು ನಗ-ನಗದು ಹಾಗೂ ನೂತನ ಮನೆ ನಿರ್ಮಾಣಕ್ಕೆಂದು ಇರಿಸಲಾಗಿದ್ದ ರೂ. 60,000 ನಗದು ಸಂಪೂರ್ಣವಾಗಿ ಸಮುದ್ರಪಾಲಾಗಿದೆ. ಎವರೆಸ್ಟ್ ಅವರ ಮನೆಯಲ್ಲಿದ್ದ ಕೆಲ ಸಾಮಗ್ರಿಗಳು ಮಾತ್ರ ದೊರೆತಿದ್ದರೆ, ಲಕ್ಷಾಂತರ ರೂ ಬೆಲೆಬಾಳುವ ಮನೆ ಹಾಗೂ 50 ರಷ್ಟು ತೆಂಗಿನ ಮರಗಳು ಸಮುದ್ರಪಾಲಾಗಿವೆ. 30 ವರ್ಷಗಳ ಹಿಂದೆ ಮನೆ ನಿರ್ಮಾಣ ಸಂದರ್ಭ ಇದ್ದಂತಹ 50 ಎಕರೆಯಷ್ಟು ಸ್ಥಳದಲ್ಲಿ ಸದ್ಯ ಕೇವಲ 5 ಎಕರೆಯಷ್ಟು ಜಾಗ ಮಾತ್ರ ಉಳಿದಿವೆ ಎಂದು ಮನೆ ಕಳೆದುಕೊಂಡ ಮೆಲ್ವಿನ್ ಪ್ರತಿಕ್ರಿಯಿಸಿದ್ದಾರೆ.
ರೆಸಾರ್ಟಿನಿಂದ ಓಡಿದ ಜನ:
ಶನಿವಾರ ಸಂಜೆಯಿಂದ ಉಳ್ಳಾಲದ ಸಮ್ಮರ್ ಸ್ಯಾಂಡ್ ರೆಸಾರ್ಟಿನಲ್ಲಿ ಮದುವೆಯ 10 ನೇ ವರ್ಷದ ಸಮಾರಂಭವನ್ನು ಆಯೋಜಿಸಲಾಗಿತ್ತು. ರೆಸಾರ್ಟ್ ಹಿಂಭಾಗದಲ್ಲಿ ನಡೆಯುತ್ತಿದ್ದ ಪಾರ್ಟಿಯಲ್ಲಿ ಹಲವು ಮಂದಿ ಕುಣಿಯುತ್ತಿದ್ದರೆ, ಇನ್ನು ಹಲವರು ಊಟ ಮಾಡುತ್ತಿದ್ದರು. ತಡರಾತ್ರಿ 9.30 ಸುಮಾರಿಗೆ ಏಕಾಏಖಿ ಬೃಹತ್ ಗಾತ್ರದ ಅಲೆಯೊಂದು ರೆಸಾರ್ಟ್ಗೆ ಅಪ್ಪಳಿಸಿದ್ದು, ಸಮಾರಂಭದಲ್ಲಿ ಪಾಲ್ಗೊಂಡಿದ್ದ ಮಂದಿಗೆ ಅಲೆಗಳು ಬಡಿದ ಪರಿಣಾಮ ಗಾಬರಿಗೊಂಡ ಮಂದಿ ದಿಕ್ಕೂಪಾಲಾಗಿ ಓಡಿದ್ದಾರೆ. ಘಟನೆ ಕುರಿತ ದೃಶ್ಯ ರೆಸಾರ್ಟ್ನಲ್ಲಿ ಅಳವಡಿಸಲಾದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಜಿಲ್ಲಾಧಿಕಾರಿಗಳ ಆದೇಶದಂತೆ ಮುನ್ನೆಚ್ಚರಿಕೆ ಕ್ರಮವಾಗಿ ರೆಸಾರ್ಟ್ನಲ್ಲಿ ಆಯೋಜಿಸಿದ್ದ ಸಮಾರಂಭಕ್ಕೆ ಪೊಲೀಸರು ಎಚ್ಚರಿಸಿದ್ದರಾದರೂ, ಸಮಾರಂಭದಲ್ಲಿ ಪಾಲ್ಗೊಂಡಿದ್ದವರು ಅದನ್ನು ಪಾಲಿಸಿರಿಲಿಲ್ಲ ಅನ್ನುವುದು ಪೊಲೀಸರ ಅಭಿಪ್ರಾಯವಾಗಿದೆ.
ತಾತ್ಕಾಲಿಕ ವಸತಿ : ಸಮುದ್ರ ಪ್ರಕ್ಷುಬ್ದಗೊಳ್ಳುತ್ತಿದ್ದಂತೆ ಅಪಾಯವನ್ನರಿತ ಮೀನು ತೈಲ ಸಂಸ್ಕರಣಾ ಘಟಕದ ಕಾರ್ಮಿಕರು , ಕೈಕೋ, ಖಿಲಿರಿಯಾನಗರ ನಿವಾಸಿಗಳು ಮನೆಯಿಂದ ಹೊರ ಬಂದು ಸಮುದ್ರ ಕಿನಾರೆಯಲ್ಲಿ ಜಮಾಯಿಸಿದ್ದರು, ಮನೆಗಳು ಹೋಗುವ ಭೀತಿಯಿಂದ ಹಲವರು ಮನೆಯೊಳಗಿದ್ದ ಸೊತ್ತುಗಳನ್ನು ಸಂಬಂಧಿಕರ ಮನೆಗೆ ರಾತ್ರೋರಾತ್ರಿ ಸ್ಥಳಾಂತರಿಸಿದರು. ಸುಮಾರು 100 ಕ್ಕೂ ಅಧಿಕ ಕಾರ್ಮಿಕರಿಗೆ ಉಳ್ಳಾಲ ಮೊಗವೀರ ಸಂಘದ ಮೊಗವೀರಪಟ್ನದಲ್ಲಿರುವ ಗೋಡೌನನ್ನು ಆಶ್ರಯವಾಗಿ ಕಲ್ಪಿಸಿದ್ದಾರೆ. ಉಳ್ಳಾಲ ದರ್ಗಾ ವಠಾರದಲ್ಲಿಯೂ ನಿರಾಶ್ರಿತರಿಗೆ ಆಶ್ರಯವನ್ನು ಕಲ್ಪಿಸಲಾಗಿದ್ದು, ಅವರಿಗೆ ವಸತಿ ಸಹಿತ ಊಟವನ್ನು ದರ್ಗಾ ವತಿಯಿಂದಲೇ ನೀಡಲಾಗಿತ್ತು.
ಸಚಿವ ಖಾದರ್ ಭೇಟಿ : ಅಪಾಯದಂಚಿನಲ್ಲಿರುವ ಮನೆಗಳ ಸಂರಕ್ಷಣೆಗೆ ತಾತ್ಕಾಲಿಕ ಕಾಮಗಾರಿ ಶೀಘ್ರವೇ ನಡೆಸಲಾಗುವುದು ಎಂದು ಸಚಿವ ಖಾದರ್ ಹೇಳಿದ್ದಾರೆ.
ಉಳ್ಳಾಲ ಕೈಕೋ, ಕಿಲಿರಿಯಾನಗರ ಹಾಗೂ ಉಚ್ಚಿಲ ಸಮುದ್ರದ ಅಲೆಗಳಿಂದ ಹಾನಿಗೀಡಾದ ಪ್ರದೇಶಗಳಿಗೆ ಭಾನುವಾರ ಭೇಟಿ ನೀಡಿ ಮಾತನಾಡಿದರು.
ತಮಿಳುನಾಡು, ಕೇರಳ ಭಾಗ ಸೇರಿದಂತೆ ಕರಾವಳಿ ಭಾಗದಲ್ಲಿ ಓಖಿ ಚಂಡಾಮಾರುತದ ಪರಿಣಾಮ ಉಳ್ಳಾಲ ವ್ಯಾಪ್ತಿಯಲ್ಲಿಯೂ ಹಲವು ಮನೆಗಳಿಗೆ ಹಾಗೂ ಸೊತ್ತುಗಳಿಗೆ ಹಾಣಿಯಾಗಿದೆ. ದೇವರ ದಯೆಯಿಂದ ಕಡಿಮೆ ಪ್ರಮಾಣದಲ್ಲಿ ಆಗಿದೆ. ಫೋರ್ ಕಾಸ್ಟ್ ಮಾಹಿತಿ ಪ್ರಕಾರ ಚಂಡಾಮಾರುತದ ಪ್ರಭಾವ ಇನ್ನಷ್ಟು ಕಡಿಮೆಯಾಗಲಿದೆ ಅನ್ನುವ ಮಾಹಿತಿ ದೊರೆತಿದೆ.
ಉಳ್ಳಾಲ ಭಾಗದಲ್ಲಿ ಆತಂಕಿತರಾದ ಜನತೆಗೆ ಜಿಲ್ಲಾಡಳಿತ ನಿನ್ನೆ ರಾತ್ರಿಯಿಂದ ಧೈರ್ಯ ತುಂಬಿಸುವ ಕೆಲಸ ಮಾಡುತ್ತಿದೆ. ಅಲ್ಲದೆ ಸ್ಥಳಾಂತರಕ್ಕೆ ಎಲ್ಲಾ ರೀತಿಯ ಕ್ರಮವನ್ನು ಕೈಗೊಳ್ಳಲಾಗಿದೆ. ತಾತ್ಕಾಲಿಕ ಸ್ಥಳಾಂತರ ಹಾಗೂ ಮನೆ ಕಳೆದುಕೊಂಡಿರುವವರಿಗೆ ಪರಿಹಾರ ನೀಡುವ ಚಿಂತನೆಯನ್ನು ಶೀಘ್ರವೇ ನಡೆಸಲಾಗುವುದು. ಶಾಶ್ವತ ತಡೆಗೋಡೆ ಕಾಮಗಾರಿಯಿಂದಾಗಿ ಉಳ್ಳಾಲ ಭಾಗದಲ್ಲಿನ ಬಹುತೇಕ ಮನೆಗಳು ಉಳಿದಿದೆ ಎಂದರು.
ಈ ಸಂದರ್ಭ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್, ಸಹಾಯಕ ಆಯುಕ್ತ ಕುಮಾರನ್, ತಹಶೀಲ್ದಾರ್ ಗುರುಪ್ರಸಾದ್, ಉಳ್ಳಾಲ ನಗರಸಭೆ ಪೌರಾಯುಕ್ತೆ ವಾಣಿ ಆಳ್ವ, ಸ್ಥಳೀಯ ಜನಪ್ರತಿನಿದಿಗಳು ಹಾಗೂ ನಗರಸಭೆ ಸದಸ್ಯರು ಉಪಸ್ಥಿತರಿದ್ದರು.
ಗಾಬರಿ ಪಡುವ ಅವಶ್ಯಕತೆಯಿಲ್ಲ: ಜಿಲ್ಲಾಧಿಕಾರಿ
ಭಾನುವಾರ ಸಂಜೆಯೊಳಗೆ ಸಮುದ್ರ ಶಾಂತ ಸ್ಥಿತಿಗೆ ತಲುಪುವುದು. ಜನ ಆತಂಕಗೊಳ್ಳಬಹುದಾದ ಅವಶ್ಯಕತೆಯಿಲ್ಲ. ಸಮುದ್ರ ತೀರದ ಜನರನ್ನು ಸ್ಥಳಾಂತರಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.
ಸಮುದ್ರ ತೀರದ ಮಂದಿಗೆ ಸ್ಥಳಾಂತರಕ್ಕೆ ವಿನಂತಿ : ತಹಶೀಲ್ದಾರ್
ಉಳ್ಳಾಲ, ಸೋಮೇಶ್ವರ, ಉಚ್ಚಿಲ, ಮೊಗವೀರಪಟ್ನ, ಖಿಲಿರಿಯಾನಗರದಲ್ಲಿ ರಾತ್ರಿ 9 ರಿಂದ ತಡರಾತ್ರಿ 3 ಗಂಟೆಯವರೆಗೆ ಅಲೆಗಳ ಅಬ್ಬರ ಹೆಚ್ಚಾಗಿತ್ತು. ತಲಪಾಡಿಯಿಂದ ಉಳ್ಳಾಲದವರೆಗೆ ಸುಮಾರು 80 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಸೋಮೇಶ್ವರ ಭಾಗದಲ್ಲಿ ಸಾಮಾನ್ಯವಾಗಿ ಮಳೆ ಸಂದರ್ಭ ಇರುವ ಕಡಲ್ಕೊರೆತದ ಪ್ರಭಾವ ಪ್ರಕೋಪದಲ್ಲಿದೆ. ಶೀಘ್ರವೇ ಕಲ್ಲುಗಳನ್ನು ಹಾಕುವ ತಾತ್ಕಾಲಿಕ ತಡೆ ಕಾಮಗಾರಿಯನ್ನು ನಡೆಸಲಾಗುವುದು. ವಿಕೋಪದ ಪ್ರಭಾವ ಇಂದು ರಾತ್ರಿ 12 ರವರೆಗೆ ಇರುವುದರಿಂದ ಸಮುದ್ರ ತೀರದವರು ಸ್ಥಳಾಂತರವಾಗಬೇಕಿದೆ ಎಂದು ಎಚ್ಚರಿಸಲಾಗಿದೆ ಎಂದು ತಹಸೀಲ್ದಾರ್ ಗುರುಪ್ರಸಾದ್ ತಿಳಿಸಿದ್ದಾರೆ.
ತುರ್ತು ವಿಪತ್ತು ಘಟಕಕ್ಕೆ ಒತ್ತಾಯ:
ಸಮುದ್ರ ತೀರದಲ್ಲಿರುವ ಉಳ್ಳಾಲ ನಗರಸಭೆ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣಾ ಘಟಕಗಳು ಇಲ್ಲದೆ ಇರುವ ಕುರಿತು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶನಿವಾರ ತಡರಾತ್ರಿ ಸಮುದ್ರದ ಅಲೆಗಳು ಮನೆಗಳಿಗೆ ಬಡಿಯಲು ಆರಂಭಿಸುತ್ತಿದ್ದಂತೆ, ಸ್ತಳೀಯರು ಉಳ್ಳಾಲ ನಗರಸಭೆಗೆ ಸಹಾಯಕ್ಕೆ ಮೊರೆ ಹೋದರೂ ನಗರಸಭೆಯಲ್ಲಿ ತುರ್ತು ನಿರ್ವಹಣೆಯ ಘಟಕವಿಲ್ಲದೆ ನಗರಸಭೆ ಅಧಿಕಾರಿಗಳು ಪರದಾಡಬೇಕಾಯಿತು. ನಗರಸಭೆ ಅಧಿಕಾರಿಗಳು ಮಂಗಳೂರಿಗೆ ಅಗ್ನಿ ಶಾಮಕ ದಳದವರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಎರಡು ಅಗ್ನಿ ಶಾಮಕ ದಳದ ವಾಹನ ಸ್ತಳದಲ್ಲಿ ಬೀಡುಬಿಟ್ಟಿತ್ತು. ಆದರೆ ಖಾಸಗಿ ಸಂಸ್ಥೆಯವರು ಸೇರಿಕೊಂಡು ಹಲವು ಮನೆಮಂದಿಯನ್ನು ಸ್ಥಳಾಂತರಿಸುವಲ್ಲಿ ಸಹಕರಿಸಿದರು. ಆದರೆ ಸಮುದ್ರ ತೀರದಲ್ಲಿ ವಿಪತ್ತು ನಿರ್ವಹಣಾ ಘಟಕದ ಅವಶ್ಯಕವಾಗಿ ಬೇಕಿದ್ದು, ಇದು ಕಡಲ್ಕೊರೆತ ಸೇರಿದಂತೆ ವಿವಿಧ ವಿಪತ್ತು ಸಂದರ್ಭ ಕಾರ್ಯಾಚರಿಸಬೇಕಿದೆ ಅನ್ನುವ ಒತ್ತಾಯ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.