ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಉಳ್ಳಾಲ: `ಸಂಜೆ ಬಳಿಕ ಸಮುದ್ರದ ಅಲೆಗಳ ಅಬ್ಬರ ಜೋರಾಗಿರುವುದರಿಂದ ಸಮುದ್ರ ವೀಕ್ಷಣೆಗೆ ನಿಷೇಧ, ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ. ಸರ್ವ ರೀತಿಯ ಸಹಕಾರ ಇದೆ’ ಇದು ಉಳ್ಳಾಲ ಸಯ್ಯದ್ ಮದನಿ ದರ್ಗಾ ಉರೂಸ್ ಪ್ರಯುಕ್ತ ಭಾನುವಾರ ದರ್ಗಾ ಸಭಾಂಗಣದಲ್ಲಿ ನಡೆದ ಸರ್ವ ಧಮೀಯರು, ರಾಜಕೀಯ ಮುಖಂಡರ ಸಭೆಯಲ್ಲಿ ಕೇಳಿ ಬಂದ ಮಾತುಗಳು.

ಆರೋಗ್ಯ ಸಚಿವ ಯು.ಟಿ.ಖಾದರ್ ಮಾತನಾಡಿ, ರಸ್ತೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಉರೂಸ್ ಎಂದರೆ ಉಳ್ಳಾಲದ ಜನತೆಗೆ ಹೆಮ್ಮೆಯ ವಿಚಾರವಾಗಿದ್ದು ಈ ಕಾರ್ಯಕ್ರಮಕ್ಕೆ ಬರುವವರು ಎಲ್ಲರೂ ಒಳ್ಳೆಯವರು ಎಂದು ಹೇಳಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಹಾಗೂ ಜನರು ಹೆಚ್ಚಿನ ತಾಳ್ಮೆ ತೆಗೆದುಕೊಳ್ಳುವುದು ಅನಿವಾರ್ಯ. ರೈಲಿನಿಂದ ಬರುವವರ ಸುರಕ್ಷತೆ, ವಾಹನ ನಿಲುಗಡೆ ವ್ಯವಸ್ಥೆ, ರಿಕ್ಷಾ ಚಾಲಕರೂ ಎಲ್ಲರ ವಿಶ್ವಾಸ ಗಳಿಸುವ ಕೆಲಸ ಆಗಬೇಕು. ಅಗತ್ಯವಿರುವಲ್ಲಿ ಮಾಹಿತಿ ಕೇಂದ್ರ ಸ್ಥಾಪನೆ ಆಗಬೇಕು ಎಂದು ಹೇಳಿದರು.
ಉಳ್ಳಾಲದಲ್ಲಿ ಹಲವು ಇತಿಹಾಸ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಿದ್ದು ಉರೂಸ್ ಎಂಬುದು ಕೇವಲ ದರ್ಗಾಕ್ಕೆ ಮಾತ್ರ ಸೀಮಿತವಲ್ಲ. ಉಳ್ಳಾಲದ ಜನತೆಯ ಎಲ್ಲಾ ಜನತೆಯ ಗೌರವ, ಹೆಮ್ಮೆಯ ಸಂಕೇತ. ರಾಣಿ ಅಬ್ಬಕ್ಕ ತನ್ನ ಸೇನೆಯಲ್ಲಿ ಎಲ್ಲಾ ಧರ್ಮೀಯರನ್ನು ಸೇರಿಸಕೊಂಡು ಬ್ರಿಟೀಷರನ್ನು ಹಿಮ್ಮೆಟ್ಟಿಸುವ ಮೂಲಕ ಕ್ಷೇತ್ರಕ್ಕೆ ಹೆಸರು ತಂದಿದ್ದಾರೆ. ಈ ನಿಟ್ಟಿನಲ್ಲಿ ಉರೂಸ್ ಯಶಸ್ವಿಗೆ ಎಲ್ಲರ ಸಹಕಾರ ಅಗತ್ಯ ಎಂದು ಶ್ರೀ ಚೀರುಂಭ ಭಗವತೀ ತೀಯ ಸಮಾಜದ ಅಧ್ಯಕ್ಷ ಚಂದ್ರಹಾಸ ಉಳ್ಳಾಲ್ ಅಭಿಪ್ರಾಯಪಟ್ಟರು.
ಕಡಲ್ಕೊರೆತ ತಡೆ ಕಾಮಗಾರಿ ನಡೆಯುತ್ತಿದ್ದು ಸಾಕಷ್ಟು ಪ್ರವಾಸಿಗರು ಸಮುದ್ರ ವೀಕ್ಷಣೆಗೆ ತೆರಳುತ್ತಿದ್ದಾರೆ. ಸಂಜೆ ವೇಳೆ ಅಲೆಗಳ ಅಬ್ಬರ ಇರುವುದು ಅವರಿಗೆ ಗೊತ್ತಿಲ್ಲ. ಈ ನಿಟ್ಟಿನಲ್ಲಿ ಸಂಜೆ 7 ಗಂಟೆ ಬಳಿಕ ಸಮುದ್ರ ವೀಕ್ಷಣೆಗೆ ತಡೆ ಹೇರಬೇಕು ಎಂದು ಮಗವೀರ ಸಭಾ ಅಧ್ಯಕ್ಷ ಸದಾನಂದ ಬಂಗೇರ ಹೇಳಿದರು.
ಭಾರತದಲ್ಲಿ ಕಾಣಲು ಸಿಗುವಂತಹ ಎಲ್ಲಾ ಧರ್ಮೀಯರ ಆಚರಣೆ, ಉತ್ಸವ ಅಮೆರಿಕಾದಲ್ಲಿ ಕಾಣಲು ಸಾಧ್ಯವಿಲ್ಲ. ಉಳ್ಳಾಲ ದರ್ಗಾ ಉರೂಸ್ ಶಾಂತಿಯುತವಾಗಿ ನಡೆಯುವಂತಾಗಲು ಸಮುದಾಯದಿಂದ ಬೇಕಾದ ಎಲ್ಲಾ ಸಹಕಾರ ನೀಡಲಾಗುವುದು ಎಂದು ಪೆರ್ಮನ್ನೂರು ಚರ್ಚ್ ಧರ್ಮಗುರುಗಳ ಸಹಾಯಕ ರೆ.ರಾಹುಲ್ ಡೆಕ್ಸ್ಟರ್ ಭರವಸೆ ನೀಡಿದರು.
ಬಿಜೆಪಿ ಕ್ಷೇತ್ರಾಧ್ಯಕ್ಷ ಚಂದ್ರಶೇಖರ್ ಉಚ್ಚಿಲ್, ಕಾಂಗ್ರೆಸ್ ಜಿಲ್ಲಾ ಹಿಂದುಳಿದ ವಿಭಾಗಗಳ ಅಧ್ಯಕ್ಷ ಸದಾಶಿವ ಉಳ್ಳಾಲ್, ದಿನಕರ್ ಉಳ್ಳಾಲ್, ದಿನೇಶ್ ರೈ, ರೋಹಿದಾಸ್, ರಾಜೀವ ಮೆಂಡನ್, ಬಾಬು ಬಂಗೇರ, ಡೆನ್ನಿಸ್ ಡಿಸೋಜ, ಶ್ರೀಕರ್ ಕಿಣಿ, ಸೀತಾರಾಮ ಬಂಗೇರ ಮಾತನಾಡಿದರು. ಎಸಿಪಿ ಸವಿತ್ರು ತೇಜ, ಎಸ್.ಐ.ಭಾರತಿ, ದರ್ಗಾ ಉಪಾಧ್ಯಕ್ಷ ಅಶ್ರಫ್ ಅಹ್ಮದ್ ರೈಟ್‍ವೇ, ಪದಾಧಿಕಾರಿಗಳು, ಬಿಜೆಪಿ ಕೇತ್ರ ಪ್ರಧಾನ ಕಾರ್ಯದರ್ಶಿ ಯಶವಂತ ಅಮೀನ್, ಯುವಮೋರ್ಚಾ ಅಧ್ಯಕ್ಷ ಜೀವನ್ ತೊಕ್ಕೊಟ್ಟು, ಕೌನ್ಸಿಲರ್ ಯು.ಎ.ಇಸ್ಮಾಯಿಲ್ ಮೊದಲಾದವರು ಉಪಸ್ಥಿತರಿದ್ದರು.
ದರ್ಗಾ ಅಧ್ಯಕ್ಷ ಯು.ಎಸ್.ಹಂಝ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಯು.ಟಿ.ಇಲ್ಯಾಸ್ ಕಾರ್ಯಕ್ರಮ ನಿರೂಪಿಸಿದರು.
ಯಾರೂ ಕೂಡಾ ಸುಳ್ಳು ಮಾಹಿತಿ ನೀಡದೆ, ಸಣ್ಣ ಘಟನೆ ನಡೆದರೂ ಅದರ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ. ಇಲಾಖೆ ಸಮಾಜದ ಒಂದು ಅಂಗ, ಪೊಲೀಸರ ಮೇಲೆ ಜನರು ನಂಬಿಕೆ ಕಳೆದುಕೊಂಡರೆ ಶಾಂತಿ, ಸುವ್ಯವಸ್ಥೆ ಅಸಾಧ್ಯ. ಇಲಾಖೆಯಿಂದ ಪ್ರಮುಖ ಸ್ಥಳಗಳಲ್ಲಿ ವೀಡಿಯೋ ಚಿತ್ರೀಕರಣ ವ್ಯವಸ್ಥೆ ಮಾಡಲಾಗಿದ್ದು, ದರ್ಗಾ ಖಾಸಗಿಯವರನ್ನು ನೇಮಿಸಲಿ. 200 ಸಿಸಿ ಕೆಮರಾ ಅಳವಡಿಕೆಗೆ ಕ್ರಮ ಕೈಗೊಳ್ಳಾಗಿದೆ’
ಮುರುಗನ್, ಮಂಗಳೂರು ಕಮೀಷನರ್
`ಉಳ್ಳಾಲ ಕ್ಷೇತ್ರದ ಶಾಸಕರು ಆರೋಗ್ಯ ಸಚಿವರು, ಕೇವಲ ಭಾಷಣ ಮಾಡಿದರೆ ಸಾಲದು, ಶುಚಿತ್ವಕ್ಕೆ ಆಧ್ಯತೆ ನೀಡಬೇಕು. ನಾವಾದರೂ ಊರವರಾಗಿದ್ದು ಸುಧಾರಿಸಿಕೊಂಡು ಹೋಗುತ್ತೇವೆ. ಆದರೆ ಉರೂಸ್‍ಗೆ ಹೊರ ರಾಜ್ಯದ ಜನರು ಬರುವುದರಿಂದ ಅವರ ಮುಂದೆ ಮರ್ಯಾದೆ ತೆಗೆಯಬೇಡಿ’
ಸೀತಾರಾಮ ಬಂಗೇರ, ಬಿಜೆಪಿ ಹಿರಿಯ ಮುಖಂಡ