ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಮುಡಿಪು: ಬಂಟ್ವಾಳ ತಾಲೂಕಿನ ಬಾಳೆಪುಣಿ ಗ್ರಾಮದ ಮೂಳೂರು ಬಂಗಾರುಗುಡ್ಡೆ ನಿವಾಸಿಗಳು ದಲಿತ ಕಾಲನಿಗೆ ಹೋಗುವ ರಸ್ತೆ ದುರಸ್ತಿಗೆ ಆಗ್ರಹಿಸಿ ಸೋಮವಾರ ಪ್ರತಿಭಟನೆ ನಡೆಸಿದರು.

5 ದಶಕಗಳ ಹಳೆಯದಾದ ದಲಿತ ಕಾಲನಿ ರಸ್ತೆ ತೀವ್ರವಾಗಿ ಕಡೆಗಣಿಸಲಾಗಿದೆ. ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ನಾಗರಿಕರ, ದಲಿತರ ಕೂಗು, ಜೀವಕ್ಕೆ ಬೆಲೆ ಇಲ್ಲದಂತಾಗಿದೆ. ದಲಿತ ಕಾಲನಿಯಲ್ಲಿ ವೃದ್ದರು, ಬುದ್ಧಿಮಾಂದ್ಯರು, ಅಂಗವಿಕಲ ಮಕ್ಕಳಿದ್ದಾರೆ. ಕಿಡ್ನಿ ಸಂಬಂಧಿ ತೊಂದರೆಗೊಳಪಟ್ಟ ರೋಗಿಗಳಿದ್ದಾರೆ. ಇವರನ್ನು ಆಸ್ಪತ್ರೆಗೆ ಶುಶ್ರೂಷೆಗೆ ಕೊಂಡೊಯ್ಯಲು ಒಂದೇ ರಸ್ತೆ ಇದೆ. ಅದೂ ತೀರಾ ನಾದುರಸ್ತಿಯಲ್ಲಿರುವುದರಿಂದ ರಿಕ್ಷಾ ಚಾಲಕರು ಬರಲು ಹಿಂಜರಿಯುತ್ತಿದ್ದಾರೆ. ಒಂದು ವೇಳೆ ಬಂದರೂ ದುಬಾರಿ ದ್ವಿಗುಣ ಬಾಡಿಗೆಯನ್ನು ಪಡೆದುಕೊಳ್ಳುತ್ತಿದ್ದಾರೆ.
ಈ ನಡುವೆ ಇರಾ ಗ್ರಾಮದ ಸಣ್ಣರಬೈಲು ಪ್ರದೇಶಕ್ಕೆ ಬಂಗಾರುಗುಡ್ಡೆ ನಾಮಫಲಕವನ್ನು ಅಳವಡಿಸಿ, ವಾಸ್ತವ ಬಂಗಾರುಗುಡ್ಡೆಗೆ ಮಂಜೂರಾದ ಅನುದಾನದಲ್ಲಿ ರಸ್ತೆ ಡಾಮರೀಕರಣವನ್ನು ನಡೆಸಿ ದಲಿತರಿಗೆ ವಂಚಿಸಲಾಗಿದೆ. ಅದನ್ನು ಶೀಘ್ರವೇ ತೆರವುಗೊಳಿಸಬೇಕು . ಮೂಳೂರು -ಬಂಗಾರುಗುಡ್ಡೆ ರಸ್ತೆ 47 ವರ್ಷಗಳ ಹಿಂದೆ ನಿರ್ಮಾಣವಾಗಿತ್ತು. ಆದರೆ ತದನಂತರ ಈವರೆಗೂ ಡಾಮರೀಕರಣವಾಗದೆ ಸಂಚಾರಕ್ಕೆ ಯೋಗ್ಯವಾಗಿಲ್ಲ. ಅಲ್ಲದೆ ಐದು ವರ್ಷಗಳಿಂದ ಹಳೆಯದಾದ ಮೂಳೂರು- ಆಂಗಾರುಗುಡ್ಡೆ ದಲಿತ ಕಾಲನಿ ರಸ್ತೆಯನ್ನು ಕಡೆಗಣಿಸಲಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕ್ರಮ ಕೈಗೊಳ್ಳದೇ ಇದ್ದಲ್ಲಿ ಗ್ರಾಮ ಪಂಚಾಯಿತಿ, ಜಿಲ್ಲಾಧಿಕಾರಿ ಕಚೇರಿ ಎದುರು ಉಗ್ರವಾಗಿ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಪ್ರತಿಭಟನಾಕಾರರು ನೀಡಿದರು.
ಈ ಸಂದರ್ಭ ಶಿವಪ್ರಸಾದ್ ಆಳ್ವ ನರಿಗುತ್ತು, ಜಲ್ಲಿ ಅಬೂಬಕರ್, ರಾಮ ಬಂಗಾರುಗುಡ್ಡೆ, ದಿವ್ಯರಾಜ್ ಆರಂತಾಡಿ, ಬಾಳೆಪುಣಿ ಪಂಚಾಯಿತಿ ಸದಸ್ಯ ಅಬ್ಬಾಸ್, ಸತೀಶ್ ನಡಿಗುತ್ತು, ಅಂಗನವಾಡಿ ಕಾರ್ಯಕರ್ತೆ ಉಷಾ, ಅಂಗಾರ ಭಟ್ರಕೋಡಿ, ಜಾನಕಿ ಬಂಗಾರುಗುಡ್ಡೆ ಮೊದಲಾದವರು ಉಪಸ್ಥಿತರಿದ್ದರು.