UN networks


ದೇರಳಕಟ್ಟೆ: ಕ್ರೀಡೆ, ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಸಹಕಾರಿ. ವಿದ್ಯಾರ್ಥಿಗಳು ಹಾಗೂ ಯುವಜನತೆ ಕಲಿಕೆಯ ಜೊತೆಗೆ ಕ್ರೀಡೆಯಲ್ಲೂ ತೊಡಗಿಸಿಕೊಂಡಾಗ ವ್ಯಕ್ತಿತ್ವ ವಿಕಸನ ಸಾಧ್ಯ. ಆ ಮೂಲಕ ಆರೋಗ್ಯದಾಯಕ ಸಮಾಜ ನಿರ್ಮಿಸಬಹುದು ಎಂದು ನಿಟ್ಟೆ ಕ್ಷೇಮ ಆಸ್ಪತ್ರೆಯ ವೈದ್ಯಕೀಯ ಚಿತ್ರಣ ವಿಭಾಗದ ಮುಖ್ಯಸ್ಥ ಶಶಿಕುಮಾರ್ ಅವರು ಹೇಳಿದರು.
ಅವರು ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ನಡೆದ ನಂತೂರಿನ, ನಿಟ್ಟೆ ಡಾ| ಶಂಕರ ಅಡ್ಯಾಂತಾಯ ಪದವಿ ಪೂರ್ವ ಕಾಲೇಜಿನ ಹಳೆವಿದ್ಯಾರ್ಥಿ ಸಂಘದ ಕ್ರೀಡಾ ಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಹಳೆವಿದ್ಯಾರ್ಥಿಗಳನ್ನು ಒಗ್ಗೂಡಿಸಿಕೊಂಡು ಆಯೋಜಿಸುವಂತಹ ಈ ರೀತಿಯ ಚಟುವಟಿಕೆಗಳು ಸಂಸ್ಥೆಯ ಬೆಳವಣಿಗೆಗೆ ಪೂರಕ ಇದರಿಂದ ಹಳೆವಿದ್ಯಾರ್ಥಿಗಳು ಹಾಗೂ ಕಾಲೇಜಿನ ನಡುವಿನ ಬಾಂಧವ್ಯ ಇನ್ನಷ್ಟು ಗಟ್ಟಿಯಾಗಲು ಸಾಧ್ಯ. ಎಂದು ಅವರು ಹೇಳಿದರು.
ಸಂಸ್ಥೆಯ ಪ್ರಾಂಶುಪಾಲ ಡಾ| ನವೀನ್ ಶೆಟ್ಟಿ ಕೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪಠ್ಯ ಚಟುವಟಿಕೆಗಳ ಜೊತೆ ಅನೇಕ ಸಹಪಠ್ಯ ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದೆ. ಆದರೆ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಕಾಲೇಜು ಬಿಟ್ಟ ನಂತರವೂ ಸಂಸ್ಥೆಯ ಜೊತೆಗೆ ಉತ್ತಮ ಬಾಂಧವ್ಯ ಮುಂದುವರಿಸಬೇಕು. ಹಾಗೂ ಅವರು ಸಮಾಜ ಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡು ಉತ್ತಮ ನಾಗರಿಕರಾಗಿ ಬಾಳಬೇಕು ಎನ್ನುವ ಉದ್ದೇಶದೊಂದಿಗೆ ಈ ಅವಕಾಶಗಳನ್ನು ಹಳೆ ವಿದ್ಯಾರ್ಥಿಗಳಿಗೆ ಒದಗಿಸಲಾಗಿದೆ ಧನಾತ್ಮಕ ಭಾವದೊಂದಿಗೆ ಆಟದಲ್ಲಿ ಭಾಗವಹಿಸಿ ಸಂತೋಷವನ್ನು ಅನುಭವಿಸಿ ಎಂದು ಶುಭ ಹಾರೈಸಿದರು.
ಕಾಲೇಜಿನ ಕ್ರೀಡಾ ನಿರ್ದೇಶಕ ವಿದ್ಯಾಧರ್ ಠಾಕೂರ್ ರವರು ಸ್ಪರ್ಧಾಕೂಟದ ತೀರ್ಪುಗಾರರಾಗಿ ಕೆಲಸ ನಿರ್ವಹಿಸಿದರು. ಉಪಪ್ರಾಂಶುಪಾಲೆ ಅನ್ನಪೂರ್ಣ ನಾಯಕ್, ಕಾರ್ಯಕ್ರಮ ಸಂಯೋಜಕಿ ಸಂಗೀತಾ ಶೆಟ್ಟಿ, ವೀಣಾ ಉಳ್ಳಾಲ್, ವಿದ್ಯಾರಾಣಿ ಆಳ್ವ, ಗೀತಾ ಹಾಗೂ ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು. ಚಿನ್ಮಯಿ ಭಟ್ ಪ್ರಾರ್ಥಿಸಿದರು. ರಶ್ಮಿ ಕಾರ್ಯಕ್ರಮ ನಿರೂಪಿಸಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕಿರಣ್ ಸ್ವಾಗತಿಸಿದರು. ಮೈತ್ರಿ ವಂದಿಸಿದರು.


