ಉಳ್ಳಾಲ್ ನ್ಯೂಸ್ ಡೆಸ್ಕ್
ಉಳ್ಳಾಲ: ‘ಬೆನ್ನ ಹಿಂದೆ ಅಲೆದಾಡಿ ಪ್ರಶಸ್ತಿಯನ್ನು ಸ್ವೀಕರಿಸುವ ಗುಣ ತನ್ನದಲ್ಲ. ಸಾಹಿತ್ಯ ಕ್ಷೇತ್ರದಲ್ಲಿ ನಡೆಸಿರುವ ಸಾಧನೆಯನ್ನು ಗುರುತಿಸಿ ಸಂಘ-ಸಂಸ್ಥೆಗಳು ನೀಡಿರುವ ಪ್ರಶಸ್ತಿಯನ್ನು ಸಂತೋಷದಿಂದ ಸ್ವೀಕರಿಸಿದ್ದೇನೆ. ಆದರೆ ಕ್ಷೇತ್ರದಲ್ಲಿನ ಸಾಧನೆ ಪ್ರಶಸ್ತಿ ಸ್ವೀಕರಿಸುವಷ್ಟು ದೊಡ್ಡದಲ್ಲ, ಮುಂದೆಯೂ ಕ್ಷೇತ್ರದಲ್ಲಿ ಸಾಧನೆ ನಡೆಸಬೇಕಿತ್ತು ಎನ್ನುವ ಆಶಯ ತನ್ನಲ್ಲಿದೆ ಎಂದು ಹಿರಿಯ ಜಾನಪದ ವಿದ್ವಾಂಸ ಡಾ. ಅಮೃತ ಸೋಮೇಶ್ವರ ಹೇಳಿದ್ದಾರೆ.
ಅವರು ಸೋಮೇಶ್ವರ ಅವರ ನಿವಾಸ ಒಲುಮೆ’ಯಲ್ಲಿ ಬುಧವಾರ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಹಲಸಂಗಿ ಗೆಳೆಯರ ಪ್ರತಿಷ್ಟಾನ, ವಿಜಯಪುರ ಇದರ ಆಶ್ರಯದಲ್ಲಿ ಜರಗಿದ ಕನ್ನಡ ಸಾಹಿತ್ಯ ಪರಿಷತ್ತು ಶತಮಾನ ಪ್ರಶಸ್ತಿ ಮತ್ತು ಹಲಸಂಗಿ ಗೆಳೆಯರ ಪ್ರತಿಷ್ಠಾನ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದರು.
ಸಾಹಿತ್ಯ ಕ್ಷೇತ್ರದಲ್ಲಿ ಸಂಬಂಧಗಳಿಗೆ ಹೆಚ್ಚಿನ ಮಹತ್ವವಿದೆ. ಇಂತಹ ಸಂಬಂಧಗಳನ್ನು ಬೆಳೆಸುವ ಕಾರ್‍ಯ ಪ್ರಶಸ್ತಿ ಪ್ರಧಾನ ಸಮಾರಂಭದಿಂದ ನಡೆದಿದೆ. ಸಾಹಿತ್ಯ ಕ್ಷೇತ್ರದಲ್ಲಿ ಇನ್ನೂ ಸಾಧನೆ ಮಾಡಬೇಕಿತ್ತು. ಆದರೂ ಸಾಹಿತ್ಯವನ್ನು ದುಡಿಮೆಯಾಗಿ ತೆಗೆದುಕೊಂಡು ಬಾಳುವುದು ಜೀವನದ ಸಾಧನೆಯಾಗಿದೆ. ಕೃತಜ್ಞತೆ ಭಾವ ವಿಶಿಷ್ಟ ಮೌಲ್ಯವನ್ನು ಹೊಂದಿದೆ. ಅದನ್ನು ಸತ್ಕಾರಗಳ ಮೂಲಕ ಪಡೆಯುವ ಪ್ರಜ್ಞೆ ಎಲ್ಲರಲ್ಲಿರಬೇಕು. ಕೃತಿಗಳನ್ನು ಜಗತ್ತಿನಾದ್ಯಂತ ಬಾಷಾಂತರದ ಮೂಲಕ ಪಸರಿಸುವ ವಿಶ್ವಾಸ ಸಂತಸವನ್ನು ತಂದಿದೆ ಎಂದರು.
ಪ್ರಶಸ್ತಿ ಪ್ರಧಾನ ಕಾರ್ಯಕ್ರಮಕ್ಕೆ ನರ್ಮದಾ ಅಮೃತಾ ಸೋಮೇಶ್ವರ ಚಾಲನೆ ನೀಡಿದರು.
ಪ್ರಶಸ್ತಿ ಪ್ರಧಾನ ನಡೆಸಿದ ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ.ಕೆ.ಭೈರಪ್ಪ ಮಾತನಾಡಿ ಆಧುನಿಕ ತಾಂತ್ರಿಕ ಯುಗದಲ್ಲಿ ಯುವಪೀಳಿಗೆಗಳು ಕಲೆ, ಸಾಹಿತ್ಯ, ಸಂಸ್ಕೃತಿಗೆ ಹೆಚ್ಚಿನ ಒಲವು ನೀಡುತ್ತಿಲ್ಲ. ಹಿರಿಯ ವಿದ್ವಾಂಸರ ಆದರ್ಶಗಳನ್ನು ಇಂದಿನ ಪೀಳಿಗೆಗೆ ಗುರುತಿಸಿ, ಹೆಚ್ಚಿನ ಆಸಕ್ತಿ ವಹಿಸುವಂತೆ ಮಾಡುವ ಕೆಲಸ ಆಗಬೇಕಿದೆ. ಅಮೃತ ಸೋಮೇಶ್ವರ ಅವರ ಕೃತಿಗಳು ಕನ್ನಡ ಮತ್ತು ತುಳು ಭಾಷೆಯಲ್ಲಿ ಉಳಿಯಬಾರದು. ಕೃತಿಗಳನ್ನು ಇತರೆ ಭಾಷೆಗಳಿಗೆ ಭಾಷಾಂತರ ಮಾಡುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಬೇಕಿದೆ. ಅಮೃತ ಸೋಮೇಶ್ವರ ಅವರ ಕೃತಿಗಳ ಶಾಶ್ವತವಾಗಿ ಉಳಿಯಬೇಕಾದರೆ, ಅಭಿಮಾನಿಗಳು ಸೇರಿಕೊಂಡು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ವರ್ಷಕ್ಕೊಮ್ಮೆ ಉಪನ್ಯಾಸ ಸರಮಾಲೆ ಯನ್ನು ನಡೆಸಲು ಸಮ್ಮತಿ ಮತ್ತು ಅದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ವಿ.ವಿ ಮಾಡುತ್ತದೆ ಎಂದ ಅವರು ಅಧ್ಯಯನ ಪೀಠ ಸ್ಥಾಪನೆಗೊಂಡಲ್ಲಿ ಕೃತಿಗಳು ಎಲ್ಲರನ್ನು ಮುಟ್ಟಲು ಸಾಧ್ಯವಾಗುತ್ತದೆ ಎಂದರು.
ಗೂಡಂಗಡಿ ವ್ಯಾಪಾರದಲ್ಲಿ ರಖಂ ಪ್ರಶಸ್ತಿಗೆ ಪಾತ್ರರಾದವರು : ಮಾತಿಗೆ ಸಿಗುವ ಮಹತ್ವದ ಸಂಪನ್ಮೂಲ ವ್ಯಕ್ತಿಯಾಗಿರುವ ಅಮೃತ ಸೋಮೇಶ್ವರ ಅವರು ಸಾಹಿತ್ಯದಲ್ಲಿ ತನ್ನದು ಗೂಡಂಗಡಿ ವ್ಯಾಪಾರ, ರಖಂ ವ್ಯಾಪಾರಿ ಅಲ್ಲ ಎಂದು ಹೇಳಿದ್ದರು. ಇಂದು ಗೂಡಂಗಡಿ ವ್ಯಾಪಾರ ನಡೆಸಿದ ಅಮೃತರು ರಖಂ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಆದರೆ ರಖಂ ಆಗಿ ಸಾಹಿತ್ಯ ಕ್ಷೇತ್ರದಲ್ಲಿರುವವರು ಗೂಡಂಗಡಿ ಪ್ರಶಸ್ತಿಗಳನ್ನು ಪಡೆದುಕೊಳ್ಳುತ್ತಿದ್ದಾರೆ. ತುಳು ಜಾನಪದ ಜಗತ್ತಿನ ಸಮೃದ್ಧಿ ಶಕ್ತಿಯನ್ನು ಯಾವುದೇ ಉಪಕರಣಗಳಿಲ್ಲದೆ ರಚಿಸಿ ಇನ್ನೂ ೧೦೦ ವರ್ಷಗಳವರೆಗೂ ಜಾಗತಿಕ ಮಾನ್ಯತೆಯನ್ನು ಒದಗಿಸಿದವರು ಅಮೃತಸೋಮೇಶ್ವರ ಅವರು ಮಾತ್ರ ಎಂದು ಅಭಿನಂದನಾ ಭಾಷಣ ಮಾಡಿದ ಮಂಗಳೂರು ವಿ.ವಿ ಕನ್ನಡ ಪ್ರಾಧ್ಯಾಪಕ ಡಾ. ಕೆ. ಚಿನ್ನಪ್ಪ ಗೌಡ ಹೇಳಿದರು.
ಮುಖ್ಯ ಅತಿಥಿಗಳಾಗಿ ಸಂಶೋಧಕ ಪ್ರೊ. ಎ.ವಿ. ನಾವಡ, ದ.ಕ. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಸತೀಶ್ ಕುಂಪಲ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರೊನಾಲ್ಡ್ ಎಸ್. ಕ್ಯಾಸ್ಟಲಿನೊ, ಹಲಸಂಗಿ ಗೆಳೆಯರ ಪ್ರತಿಷ್ಠಾನ ,ವಿಜಯಪುರ ಇದರ ಸಂಚಾಲಕ ಡಾ.ಎಸ್.ಕೆ. ಕೊಪ್ಪಾ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ಎ. ಮೊಹಮ್ಮದ್ ಹನೀಫ್, ರಿಜಿಸ್ಟ್ರಾರ್ ಉಮ್ಮರಬ್ಬ, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಗೌರವ ಕಾರ್ಯದರ್ಶಿ ಬಿ. ಐತ್ತಪ್ಪ ನಾಯ್ಕ್ ಉಪಸ್ಥಿತರಿದ್ದರು.
ಎಸ್. ಪ್ರದೀಪ್ ಕುಮಾರ ಕಲ್ಕೂರ ಸ್ವಾಗತಿಸಿ ಪ್ರಸ್ತಾವನೆಗೈದರು. ಹಲಸಂಗಿ ಗೆಳೆಯರ ಪ್ರತಿಷ್ಠಾನ ,ವಿಜಯಪುರ ಇದರ ಸದಸ್ಯ ಕಾರ್ಯದರ್ಶಿ ಡಾ. ಸೋಮಶೇಖರ ವಾಲಿ ಮತ್ತು ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ವರದರಾಜ ಚಂದ್ರಗಿರಿ ಸನ್ಮಾನ ಪತ್ರ ವಾಚಿಸಿದರು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.