ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಬೀರಿ : ರಾಷ್ಟ್ರೀಯ ಹೆದ್ದಾರಿ 66ರ ಕೋಟೆಕಾರು ಬೀರಿ ಬಳಿ ಲಾರಿ ಮತ್ತು ಬೈಕ್ ಅಪಘಾತದಲ್ಲಿ ಬೈಕ್ ಸವಾರ ಸಾವನ್ನಪ್ಪಿದ್ದು, ಸಹ ಸವಾರ ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ತಲಪಾಡಿ ಚೆಕ್‍ಪೋಸ್ಟ್ ಬಳಿ ನಿವಾಸಿ ಮಹಮ್ಮದ್ ಝಕಾರಿಯಾ (23 )ಮೃತಪಟ್ಟವನಾಗಿದ್ದು, ತಲಪಾಡಿ ಕೆ.ಸಿ.ನಗರ ನಿವಾಸಿ ಶಿಯಾಬ್(22) ಗಂಭೀರಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ.
ಮಹಮ್ಮದ್ ಝಕಾರಿಯಾ ಕ್ಯಾಂಟರಿಂಗ್ ಕೆಲಸ ಮುಗಿಸಿ ಮಂಗಳವಾರ ತಡರಾತ್ರಿ ತನ್ನ ಸ್ನೇಹಿತ ಶಿಯಾಬ್‍ನೊಂದಿಗೆ ತಲಪಾಡಿ ಕಡೆ ವಾಪಾಸ್ಸಾಗುತ್ತಿದ್ದಾಗ ಬೀರಿ ಬಳಿಯ ಮಾರಾಟ ತೆರಿಗೆ ಕೇಂದ್ರದ ಬಳಿ ನಿಲ್ಲಿಸಿದ್ದ ಲಾರಿಗೆ ಡಿಕ್ಕಿ ಹೊಡೆದು ಬೈಕ್ ಚಾಲನೆ ಮಾಡುತ್ತಿದ್ದ ಮಹಮ್ಮದ್ ಝಕಾರಿಯಾ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ದುಬಾೈಯಲ್ಲಿ ಸುಮಾರು ಒಂದು ವರ್ಷಗಳ ಕಾಲ ಉದ್ಯೋಗ ಮಾಡುತ್ತಿದ್ದ ಝಕಾರಿಯಾ ಊರಿಗೆ ಬಂದ ಬಳಿಕ ಸಣ್ಣಪುಟ್ಟ ಕೆಲಸ ಮಾಡುತ್ತಿದ್ದ . ಸೆ. 18ರಂದು ವಿದೇಶಕ್ಕೆ ತೆರಳಲು ಸಿದ್ಧತೆ ನಡೆಸಿದ್ದ ಎನ್ನಲಾಗಿದ್ದು, ತಂದೆ ತಾಯಿ 5 ಮಂದಿ ಸಹೋದರರು, ಓರ್ವ ಸಹೋದರಿಯನ್ನು ಅಗಲಿದ್ದಾನೆ.
ತುರವೇ ಪ್ರತಿಭಟನೆ : ರಾಷ್ಟ್ರೀಯ ಹೆದ್ದಾರಿಯ 66ರ ಬೀರಿ ಬಳಿಯಿರುವ ಮಾರಾಟ ತೆರಿಗೆ ತಪಾಸಣಾ ಕೇಂದ್ರದಿಂದ ಘನ ವಾಹನಗಳು ಹೆದ್ದಾರಿಯಲ್ಲೇ ನಿಲ್ಲಿಸಿ ಚಾಲಕರು ತಪಾಸಣೆ ಕೇಂದ್ರಕ್ಕೆ ತೆರಳುವುದರಿಂದ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ ತೊಂದರೆಯಾಗುತ್ತಿದ್ದು, ಇಲ್ಲಿ ಹಲವಾರು ಅಪಘಾತಗಳು ನಡೆಯುತ್ತಿದ್ದು, ಇಲ್ಲಿನ ಅಧಿಕಾರಿಗಳ ಬೇಜವಾಬ್ದಾರಿಯ ವರ್ತನೆ ಕಾರಣ ಎಂದು ಆರೋಪಿಸಿ ತುಳುನಾಡು ರಕ್ಷಣಾ ವೇದಿಕೆ ಕಾರ್ಯಕರ್ತರು ವಾಣಿಜ್ಯ ತೆರಿಗೆ ತಪಾಸಣಾ ಕೇಂದ್ರದ ಎದುರು ಪ್ರತಿಭಟನೆ ನಡೆಸಿದರು. ಈ ಹಿಂದೆಯೂ ಅಪಘಾತಗಳು ನಡೆದಿದ್ದು, ಈ ಕುರಿತು ಅನೇಕ ಬಾರಿ ಪ್ರತಿಭಟನೆ ನಡೆಸಿದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ನಿನ್ನೆ ರಾತ್ರಿ ನಡೆದ ಘಟನೆಗೂ ವಾಣಿಜ್ಯ ತೆರಿಗೆ ಇಲಾಖೆಯೇ ಕಾರಣ ಎಂದು ತು.ರ.ವೇ. ಕೇಂದ್ರ ಸಮಿತಿ ಅಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು ಆರೋಪಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ತಲಪಾಡಿ ಗ್ರಾಮ ಅಧ್ಯಕ್ಷ ಹಸೈನಾರ್ ಕೆ.ಸಿ.ರೋಡ್, ಸೋಮೇಶ್ವರ ಸಮಿತಿ ಅಧ್ಯಕ್ಷ ಅಹಮ್ಮದ್ ಪೆರಿಬೈಲ್, ಕೋಟೆಕಾರ್ ಸಮಿತಿ ಅಧ್ಯಕ್ಷ ರವಿ ಶೆಟ್ಟಿ, ಹಮೀದ್ ಹಸನ್ ಮಾಡೂರು ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಾಣಿಜ್ಯ ತೆರಿಗೆ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಉಳ್ಳಾಲ ಪೆÇಲೀಸ್, ತು.ರ.ವೇ. ನಾಯಕರೊಂದಿಗೆ ಚರ್ಚಿಸಿ ಹೆದ್ದಾರಿಯಲ್ಲಿ ಭದ್ರತೆಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ನಿಲ್ಲಿಸಿದರು.
ಉಳ್ಳಾಲ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.