ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಮುಡಿಪು: ಪ್ರತಿಯೊಬ್ಬರು ಅಕ್ಷರ ಜ್ಞಾನಿಗಳಾದಾಗ ಮಾತ್ರ ಶೋಷಣೆಮುಕ್ತ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ. ಉದಾತ್ತ ಮಾನವತಾವಾದಿ ಅಂಬೇಡ್ಕರ್ ಅವರು ದೇಶಕ್ಕೆ ಭದ್ರವಾದ ಸಂವಿಧಾನವನ್ನು ಕಟ್ಟಿಕೊಡುವುದರೊಂದಿಗೆ ಸಮಾಜದಲ್ಲಿ ಏಕತೆಯೊಂದಿಗೆ ಶೋಷಣೆಮುಕ್ತ ಸಮಾಜವನ್ನು ಕಟ್ಟಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದರು. ಅಂಬೇಡ್ಕರ್ ಅವರ 125ನೇ ವರ್ಷಾಚರಣೆ ಕಾರ್ಯಕ್ರಮವು ಜನರಲ್ಲಿ ಜಾಗೃತಿಯ ಭಾವದೊಂದಿಗೆ ಸಮಾನತೆಯ ಬಲಿಷ್ಠ ಸಮಾಜ ನಿರ್ಮಾಣಕ್ಕೆ ಪ್ರೇರಣೆಯಾಗಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಅಭಿಪ್ರಾಯ ಪಟ್ಟರು.

ಅವರು ಮಂಗಳೂರು ವಿಶ್ವವಿದ್ಯಾನಿಲಯ ಅಂಬೇಡ್ಕರ್ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಮಂಗಳೂರು ವಿವಿಯ ಮಂಗಳಾ ಸಭಾಂಗಣದಲ್ಲಿ ಗುರುವಾರ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಅವರ 125 ನೇ ಅಂಬೇಡ್ಕರ್ ಜಯಂತಿ ಸಂಭ್ರಮ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ ಸಿಕ್ಕಿತ್ತು ಆದರೆ ಸಾಮಾಜಿಕ ಸ್ವಾತಂತ್ರ ಎಲ್ಲರಿಗೂ ಸಿಕ್ಕಿರಲಿಲ್ಲ. ಸಾಮಾಜಿಕ ಬದಲಾವಣೆ ತರುವಂತಹದ್ದು ಕೂಡಾ ಅಷ್ಟು ಸುಲಭದ ಕೆಲಸವಲ್ಲ. ಅಂದಿನ ಕಾಲದಲ್ಲಿ ದೇವರಾಜ ಅರಸು ಅವರು ಹಿಂದುಳಿದ ಪರ ಜನರ ಕಾಳಜಿಯಿಂದ ಹಲವಾರು ಸುಧಾರಣಾ ಯೋಜನೆಗಳನ್ನು ಜಾರಿಗೆ ತಂದರೂ ಸಮಾಜದ ಬಲಿಷ್ಟ ವರ್ಗವನ್ನು ಅವರು ಎದುರಿಸಬೇಕಾಗಿತ್ತು. ಆದ್ದರಿಂದ ಇಂದಿಗೂ ಅಸಮಾನತೆಯನ್ನು ಇಂದಿಗೂ ಹೋಗಲಾಡಿಸಲು ಸಾಧ್ಯವಾಗಲಿಲ್ಲ. ಇಂದು ಕೂಡಾ ಮೀಸಲಾತಿಗಾಗಿ ಹೋರಾಡುತ್ತಿರುವ ಉದಾಹರಣೆ ನೋಡಬಹುದು ಎಂದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಆರೋಗ್ಯ ಸಚಿವ ಯು.ಟಿ.ಖಾದರ್ ಅವರು, ಭಾರತ ದೇಶದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಅಲ್ಪಸಂಖ್ಯಾತರು, ಬಡವರು, ಹಿಂದುಳಿದವರು ನಿರ್ಭಿತಿಯಿಂದ ನಡೆಯಬೇಕಾದ ವಾತವಾರಣವನ್ನು ನಿರ್ಮಾಣ ಮಾಡಿದವರು ಡಾ.ಬಿ.ಆರ್ ಅಂಬೇಡ್ಕರ್‍ರವರು. ಭಾರತಕ್ಕೆ ಸ್ವಾತಂತ್ರ್ಯ ಮಾತ್ರವಲ್ಲ ದೇಶವನ್ನು ಆರ್ಥಿಕವಾಗಿ, ಶೈಕ್ಷಣಿಕವಾಗಿ ಬೆಳೆಸಬೇಕೆಂಬ ಆಶಯ ಅಂಬೇಡ್ಕರ್ ಅವರಿಗಿತ್ತು ಎಂದು ಹೇಳಿದರು.
ಹಿಂದುಗಳಿಗೆ ಭಗವದ್ಗೀತೆ, ಮುಸ್ಲಿಮರಿಗೆ ಕುರಾನ್, ಕ್ರಿಶ್ಚಿಯನ್ನರಿಗೆ ಬೈಬಲ್ ಎಷ್ಟು ಶ್ರೇಷ್ಠವೋ ಎಲ್ಲಾ ಭಾರತೀಯರಿಗೂ ಸಂವಿಧಾನ ಶ್ರೇಷ್ಠವಾದುದು. ಆದ್ದರಿಂದ ಅಂಬೇಡ್ಕರ್ ಅವರ ಜಾತ್ಯಾತೀತ ತತ್ವವನ್ನು ನಾವು ಅರ್ಥಮಾಡಿಕೊಂಡು ಜೀವನ ನಡೆಸಬೇಕಾಗಿದ್ದು ಇದಕ್ಕೆ ಇಂತಹ ಕಾರ್ಯಕ್ರಮಗಳು ಪೂರಕವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡುತ್ತಾ ಮಾತನಾಡಿದ ಕರ್ನಾಟಕ ಸರಕಾರದ ಎಡ್ವಕೇಟ್ ಜನರಲ್ ಪ್ರೊ.ರವಿವರ್ಮ ಅವರು, ಇಂದು ಹಲವಾರು ಶಿಕ್ಷಣ ಸಂಸ್ಥೆಗಳು, ಕಾಲೇಜುಗಳು, ಡೀಮ್ಡ್ ವಿಶ್ವವಿದ್ಯಾನಿಲಯಗಳು ಬೇರೆ ಪ್ರಭಾವಿ ಜಾತಿಗಳ ಪ್ರಮುಖರ ಮಾಲಕತ್ವದಲ್ಲಿ ನಡೆಯುತ್ತಿದೆ. ಆದರೆ ಜಿಲ್ಲೆಯಲ್ಲಿ ಶಿಕ್ಷಣ ಸಂಸ್ಥೆಗಳು ಬಹಳಷ್ಟು ಇವೆ ಆದರೆ ಒಂದೇ ಒಂದು ಶಿಕ್ಷಣ ಸಂಸ್ಥೆ ದಲಿತ ಸಮುದಾಯದ ವ್ಯಕ್ತಿಗಳ ನೇತೃತದಲ್ಲಿ ಇಲ್ಲದಿರುವುದು ವಿಷಾದಕರ ಎಂದು ಹೇಳಿದರು.
ಒಂದು ಬಲಿಷ್ಠ ಭಾರತವನ್ನು ಕಟ್ಟುವುದಕ್ಕೊಸ್ಕರ ಅಂಬೇಡ್ಕರ್ ಅವರು ಕೊಟ್ಟಿರುವಂತಹ ಒಂದು ಮಂತ್ರದ ಮೂಲಕ ದೇವರಾಜ್ ಅರಸ್ ಅವರ ತಂತ್ರಗಾರಿಕೆಯಿಂದ ರಾಜ್ಯದಲ್ಲಿ ಭೂ ಸುದಾರಣೆಯ ಕ್ರಾಂತಿ ಕಿಚ್ಚು ಬಹಳಷ್ಟು ಪರಿಣಾಮವನ್ನು ಬೀರಿದೆ. ಅದರಲ್ಲೂ ದ.ಕ.ಜಿಲ್ಲೆಯಲ್ಲಿ ಭೂ ಸುಧಾರಣೆಯ ತೀವ್ರತೆ, ಪ್ರತಿರೋಧ ಅಂದಿನಕಾಲದಲ್ಲಿ ಬಹಳಷ್ಟು ಇತ್ತು. ಭೂ ಸುಧಾರಣೆಯ ಕಾಲದಲ್ಲಿ ಕರ್ನಾಟಕದಲ್ಲಿ ಒಟ್ಟು 10 ಲಕ್ಷ ಜನರು ಆ ಕಾನೂನಿಂದಾಗಿ ಭೂ ಮಾಲಿಕರಾಗಿದ್ದರು ಎಂದರು.
ಅಂಬೇಡ್ಕರ್ ಅವರ ಜೀವನ ಚರಿತ್ರೆಯನ್ನು ನೋಡುವಾಗ ಅವರ ಮೂರು ಅಂಶಗಳು ನಮಗೆ ಪ್ರಮುಖವಾಗಿ ಗುರುತಿಸಲ್ಪಡುತ್ತದೆ. ಅವರ ಚಾರಿತ್ರ್ಯ ಅಥವಾ ಪ್ರಭುದ್ದತೆ, ಪಾಂಡಿತ್ಯ ಮತ್ತು ಅವರ ದೇಶಕ್ಕಾಗಿ ಹೊಂದಿದ್ದ ಬದ್ಧತೆಯಿಂದಾಗಿ ಅವರು ಪ್ರತಿಯೊಬ್ಬರಿಗೂ ಆದರ್ಶವಾಗಿದ್ದಾರೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಕೆ.ಭೈರಪ್ಪ ಅವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ನಿವೃತ್ತ ಐಪಿಎಸ್ ಅಧಿಕಾರಿ ಆರ್ಕೇಶ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ.ಪಿ.ಎಸ್.ಯಡಪಡಿತ್ತಾಯ ಉಪಸ್ಥಿತರಿದ್ದರು. ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ವಿಶ್ವನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು.
ಜಾತಿಯ ವಿಶೇಷತೆ ಎಂದರೆ ನಾವು ಸಭೆಯಲ್ಲಿ ಕೂತ ಹಾಗೆ ಒಂದರ ಪಕ್ಕ ಜಾತಿ ಕುಳಿತುಕೊಳ್ಳುವುದಿಲ್ಲ. ಅದು ಒಂದರ ತಲೆಯ ಮೇಲೆ ಒಂದರಂತೆ ಕುಳಿತುಕೊಳ್ಳುತ್ತದೆ. ಆದರೆ ಕೆಲವು ಕಾಲಬುಡದಲ್ಲಿಯೇ ಇರುತ್ತದೆ.
-ಪ್ರೊ.ರವಿವರ್ಮ
ಅಡ್ವಕೇಟ್ ಜನರಲ್, ಕರ್ನಾಟಕ ಸರಕಾರ