ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಉಚ್ಚಿಲ: ಉಚ್ಚಿಲ ಪ್ರದೇಶಕ್ಕೆ ಶಾಶ್ವತ ಬ್ರೇಕ್‍ವಾಟರ್ ಕಾಮಗಾರಿ ವಿಸ್ತರಣೆಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮುಂದಿನ ವರ್ಷದಲ್ಲಿ ಅಲ್ಲಿಯೂ ಕಾಮಗಾರಿಯನ್ನು ಆರಂಭಿಸಲಾಗುವುದು. ಹಾನಿಗೊಳಗಾದವರಿಗೆ ತಕ್ಷಣ ಪರಿಹಾರ ಒದಗಿಸಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದು ನಾಗರಿಕ ಮತ್ತು ಆಹಾರ ಪೂರೈಕೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಅವರು ಉಚ್ಚಿಲದ ನ್ಯೂಉಚ್ಚಿಲ ಹಾಗೂ ಉಳ್ಳಾಲದ ಕೋಟೆಪುರ, ಕೋಡಿ, ಮೊಗವೀರಪಟ್ನ. ಕೈಕೋ, ಹಿಲೇರಿಯಾನಗರ ಕಡಲ್ಕೊರೆತ ಪ್ರದೇಶಕ್ಕೆ ಗುರುವಾರ ಭೇಟಿ ನೀಡಿ ಮಾತನಾಡಿದರು.
1983 ರಿಂದ ಉಳ್ಳಾಲದ ಕೋಟೆಪುರ, ಕೈಕೋ, ಮೊಗವೀರಪಟ್ನದಲ್ಲಿ ಕಡಲ್ಕೊರೆತ ಸಂಭವಿಸುತ್ತಲೇ ಬಂದಿದೆ. ಅದಕ್ಕಾಗಿ ಗಾರ್ಬನ್ ಬಾಕ್ಸ್, ಬ್ಲಾಕ್ ಹಾಕುವುದು, ಮಣ್ಣು ಹಾಕುವುದು, ಗನೀ ಬ್ಯಾಗ್‍ನಂತಹ ತಾತ್ಕಾಲಿಕ ಪರಿಹಾರವನ್ನು ಸರಕಾರ ನಡೆಸುತ್ತಲೇ ಬಂದಿತ್ತು. ಆದರೆ ಇಲ್ಲಿನ ಸಮುದ್ರದ ಹೊಡೆತಕ್ಕೆ ಯಾವುದೇ ಪರಿಹಾರ ಫಲಕಾರಿಯಾಗಲಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೇ ಮಾದರಿಯಾದ ಎಡಿಬಿ ಯೋಜನೆಯಡಿ ಶಾಶ್ವತ ತಡೆಗೋಡೆ ಕಾಮಗಾರಿಯನ್ನು ಆರಂಭಿಸಲಾಗಿದೆ.
ಉಳ್ಳಾಲದಲ್ಲಿ ಮಾತ್ರ ಇದ್ದ ಕೊರೆತ ಸದ್ಯ ಸೋಮೇಶ್ವರದ ಉಚ್ಚಿಲದಲ್ಲಿಯೂ ಆರಂಭವಾಗಿದೆ. ಇಲ್ಲಿ ಬಿದ್ದಿರುವ, ಬೀಳುವ ಹಂತದಲ್ಲಿರುವ ಮನೆಗಳ ರಕ್ಷಣೆಗೆ ನಾಳೆಯಿಂದಲೇ ತಾತ್ಕಾಲಿಕ ಪರಿಹಾರ ಕಾಮಗಾರಿಯನ್ನು ಆರಂಭಿಸಲಾಗುವುದು. ನೆಲಸಮವಾಗಿರುವ ಮನೆಗಳಿಗೆ ಸೂಕ್ತ ಪರಿಹಾರ ಒದಗಿಸಲಾಗುವುದು.
ಕೇಂದ್ರಕ್ಕೆ ಪ್ರಸ್ತಾವನೆ: ಶಾಶ್ವತ ತಡೆಗೋಡೆ ಕಾಮಗಾರಿಯ ಯೋಜನೆಯನ್ನು ಸೋಮೇಶ್ವರ ಉಚ್ಚಿಲ ಪ್ರದೇಶಕ್ಕೆ ವಿಸ್ತರಿಸಲು ರೂ.16 ಕೋಟಿಯ ಪ್ರಸ್ತಾವನೆಯನ್ನು ರಾಜ್ಯದಿಂದ ಕೇಂದ್ರಕ್ಕೆ ಕಳುಹಿಸಲಾಗಿದೆ. ಸಿಪಿಡಬ್ಲ್ಯು ಸ್ಕೀಂ ನಡಿ ಯೋಜನೆಗೆ ಒಪ್ಪಿಗೆ ಸಿಕ್ಕ ತಕ್ಷಣ ಕಾಮಗಾರಿಯನ್ನು ವಿಸ್ತರಿಸಲಾಗುವುದು. ಮುಂದಿನ ವರ್ಷದಲ್ಲಿ ಒಪ್ಪಿಗೆ ಸಿಗುವ ವಿಶ್ವಾಸವಿದ್ದು, ಅಲ್ಲಿಯವರೆಗೆ ತಾತ್ಕಾಲಿಕ ಪರಿಹಾರವನ್ನು ಒದಗಿಸಲಾಗುವುದು. ಅಗತ್ಯ ಬಿದ್ದಲ್ಲಿ ನಗರಸಭೆ ಗುರುತಿಸಿ ಇಟ್ಟಿರುವಂತಹ ಪ್ರದೇಶದಲ್ಲಿ ಗಂಜಿ ಕೇಂದ್ರವನ್ನು ತೆರೆಯಲಾಗುವುದು.
ಬೆಂಗರೆ ಬ್ರೇಕ್ ವಾಟರ್‍ನಿಂದ ಸಮಸ್ಯೆ:
ಮಂಗಳೂರಿನ ಬೆಂಗರೆಯಲ್ಲಿ ಬ್ರೇಕ್ ವಾಟರ್ ನಿರ್ಮಾಣವಾದ ಬಳಿಕ ಉಳ್ಳಾಲದಲ್ಲಿ ಕೊರೆತ ದ ಸಮಸ್ಯೆ ಉದ್ಭವಿಸಿದೆ. ಉಳ್ಳಾಲದಲ್ಲಿ ಶಾಶ್ವತ ತಡೆಗೋಡೆ ಕಾವiಗಾರಿ ಆರಂಭಿಸುವ ಮುನ್ನ ಉಳ್ಳಾಲ ಮತ್ತು ಬೆಂಗರೆ ಎರಡು ಕಡೆಗೆ ಹೊಯ್ಗೆ ಹೋಗುವಂತೆ ಮಾಡಿ ಕಾಮಗಾರಿಯನ್ನು ಆರಂಭಿಸಲಾಗಿದೆ. ಕಾಮಗಾರಿಗಳಲ್ಲಿ ಅವ್ಯವಹಾರ ಕಂಡುಬಂದಲ್ಲಿ ತನಿಖೆಗೆ ಆದೇಶಿಸಲಾಗುವುದು. ಪುಣೆ ಸೆಂಟರಿನ ತಜ್ಞರ ತಂಡದ ಆದೇಶದಂತೆ ಹಂತಹಂತವಾಗಿ ಕಾಮಗಾರಿ ನಡೆಯುತ್ತಿದೆ. ಕಾಮಗಾರಿಯಲ್ಲಿ ವಸ್ತುಗಳು ವ್ಯರ್ಥವಾದರೂ ಅದರಿಂದ ಕಂಪೆನಿಗೆ ನಷ್ಟವೇ ಹೊರತು ಸರಕಾರಕ್ಕೆ ನಷ್ಟವಿಲ್ಲ.
ಕಾರವಾರವರೆಗೂ ವಿಸ್ತರಣೆ: ಉಳ್ಳಾಲದಲ್ಲಿ ಶಾಶ್ವತ ಬ್ರೇಕ್ ವಾಟರ್ ಕಾಮಗಾರಿ ಯಶಸ್ವಿಗೊಂಡಲ್ಲಿ ಸುರತ್ಕಲ್, ಕಾಪು, ಕಾರವಾರದವರೆಗೂ ಕಾಮಗಾರಿಯನ್ನು ವಿಸ್ತರಿಸಲಾಗುವುದು.
ಏಷಿಯನ್ ಡೆವಲಪ್‍ಮೆಂಟ್ ಬ್ಯಾಂಕಿನ ಇಂಜಿನಿಯರ್ಸ್ ತಯಾರಿಸಿದ ರೂಪುರೇಷೆಯಂತೆ ರೂಪುರೇಷೆ ತಯಾರಿಸಲಾಗಿದೆ. ಅವರ ರೂಪುರೇಷೆಗೆ ಪುಣೆ ಸೆಂಟರಿನ ತಜ್ಞರ ಸಮಿತಿ ಪರಿಶೀಲನೆ ನಡೆಸಿ ಕೇಂದ್ರ ಸರಕಾರಕ್ಕೆ ವರದಿಯನ್ನು ಸಲ್ಲಿಸುತ್ತದೆ. ಅಲ್ಲಿ ಯೋಜನೆಗೆ ಒಪ್ಪಿಗೆ ಸಿಕ್ಕ ಬಳಿಕ ಕಾಮಗಾರಿ ಆರಂಭವಾಗುತ್ತದೆ. ಪುಣೆ ಸೆಂಟರಿನ ತಜ್ಞರು ಆದೇಶದಂತೆ ಕಾಮಗಾರಿ ನಡೆಸಲಾಗುತ್ತಿದೆ. ಉಳ್ಳಾಲದಲ್ಲಿ ಕಾಮಗಾರಿ ಯಶಸ್ವಿಗೊಂಡಲ್ಲಿ ಸುರತ್ಕಲ್, ಕಾಪು ಹಾಗೂ ಕಾರವಾರದವರೆಗೂ ಯೋಜನೆ ವಿಸ್ತರಣೆಯಾಗುತ್ತದೆ ಎಂದರು.
ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಮಾತನಾಡಿ ಪ್ರಾಕೃತಿಕ ವಿಕೋಪ ಪರಿಹಾರಕ್ಕಾಗಿ ಸರಕಾರಕ್ಕೆ 5 ಕೋಟಿ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಉಳ್ಳಾಲ ಮತ್ತು ಉಚ್ಚಿಲ ಭಾಗದಲ್ಲಿ ಪರಿಹಾರ ಕಾಮಗಾರಿ ಇಂದಿನಿಂದಲೇ ಆರಂಭವಾಗಲಿದೆ. ತುರ್ತು ಅವಶ್ಯಕತೆ ಇದ್ದಲ್ಲಿ ತಕ್ಷಣ ಅವರಿಗೆ ಬದಲಿ ವ್ಯವಸ್ಥೆಯನ್ನು ಮಾಡಲಾಗುವುದು. ಹಿಂದಿನ ವರ್ಷ ನಡೆಸಿದ ಗಂಜಿ ಕೇಂದ್ರ ಯಾವುದೇ ಉಪಯೋಗಕ್ಕೆ ಬಂದಿರಲಿಲ್ಲ ಎಂದರು.
ಈ ಸಂದರ್ಭ ಉಳ್ಳಾಲ ನಗರಸಭೆ ಅಧ್ಯಕ್ಷ ಹುಸೈನ್ ಕುಂಞÂಮೋನು, ತಾಲೂಕು ಪಂಚಾಯಿತಿ ಸದಸ್ಯ ರವಿಶಂಕರ್, ನಗರಸಭೆ ಪೌರಾಯುಕ್ತೆ ರೂಪ.ಟಿ.ಶೆಟ್ಟಿ, ಬಂದರು ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಮೂರೇ ದಿನದಲ್ಲಿ ರೇಷನ್ ಕಾರ್ಡು
ಸದ್ಯ ರೇಷನ್ ಕಾರ್ಡು ವಿತರಣೆಯಲ್ಲಿ ಜನ ಗೊಂದಲವಾಗಿದ್ದಾರೆ. ಕರೆಂಟ್ ಬಿಲ್, ಆರ್.ಆರ್ ನಂಬರ್ ಸಹಿತ ಹಲವು ದಾಖಲೆಗಳು ನೀಡಿ ಅರ್ಜಿ ಕೊಟ್ಟರೂ ಕಾಯುವ ಸ್ಥಿತಿಯಿತ್ತು. ಆದರೆ ಮುಂದಿನ ಮೂರು ತಿಂಗಳಲ್ಲಿ ಮೂರೇ ದಿನದಲ್ಲಿ ಪಡಿತರ ಚೀಟಿ ಸಿಗುವಂತಹ ಯೋಜನೆ ರೂಪಿಸಲಾಗುವುದು. ಕೇವಲ ಆಧಾರ್ ಕಾರ್ಡಿನ ಲಿಂಕ್‍ನಡಿ ಮೂರು ದಿನಗಳಲ್ಲಿ ಅರ್ಜಿ ನೀಡಿ ಸಿಗುವಂತಹ ವ್ಯವಸ್ಥೆ ಕಲ್ಪಿಸಲಾಗುವುದು. ಎಪಿಎಲ್ ಕಾರ್ಡು ಪಡೆಯುವವರು ಖುದ್ದು ಅವರೇ ಆನ್ ಲೈನ್ ಮೂಲಕ ಪಡೆಯುವ ವ್ಯವಸ್ಥೆ ಹಾಗೂ ಬಿಪಿಎಲ್ ಕಾರ್ಡುದಾರರಿಗೆ ಆರ್ಥಿಕತೆಯನ್ನು ಪರಿಶೀಲಿಸಿ ಕಾರ್ಡನ್ನು ವಿತರಿಸಲಾಗುವುದು. ಬೋಗಸ್ ಕಾರ್ಡುಗಳನ್ನು ಹಾಗೂ ಪಡಿತರದಲ್ಲಿ ನಡೆಯುವ ಅವ್ಯವಹಾರಗಳನ್ನು ನಿಲ್ಲಿಸಲು ಜನಸಾಮಾನ್ಯರು ಕೈಜೋಡಿಸಬೇಕಿದೆ. ಕಿಡ್ನಿ ಹಾಗೂ ಕ್ಯಾನ್ಸರ್ ರೋಗಿಗಳಿಗೆ ಬಿಪಿಎಲ್ ಕಾರ್ಡಿನ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಖಾತೆ ಬದಲಾಯಿಸಿಕೊಂಡು ಸ್ವಕ್ಷೇತ್ರಕ್ಕೆ ಪ್ರಥಮ ಬಾರಿ ಭೇಟಿ ನೀಡಿದ ಸಚಿವ ಖಾದರ್ ರಾಜ್ಯಕ್ಕೆ ಭರವಸೆ ನೀಡಿದರು.






