ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕೋಟೆಕಾರು: ಕಾರ್ಮಿಕರನ್ನು ಗುಲಾಮರನ್ನಾಗಿ ನೋಡುತ್ತಿರುವ ಕೇಂದ್ರ ಸರಕಾರ ಬಂಡವಾಳಶಾಹಿಗಳ ಪೂರಕವಾಗಿ ಸರಕಾರ ನಡೆಯುತ್ತಿರುವುದು ನಾಚಿಕೆಗೇಡು ಎಂದು ಜಿಲ್ಲಾ ಬೀಡಿ ಫೆಡರೇಶನ್ನಿನ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಅಭಿಪ್ರಾಯಪಟ್ಟರು.
ಅವರು ಕೋಟೆಕಾರು ಸರ್ಕಲ್ ಬೀಡಿ ಲೇಬರ್ ಯೂನಿಯನ್ ಶುಕ್ರವಾರ ಕೋಟ್ಪಾ ಕಾಯ್ದೆ ಹಿಂಪಡೆಯುವಂತೆ ಆಗ್ರಹಿಸಿ ಕೋಟೆಕಾರು ಪಂಚಾಯಿತಿ ಎದುರು ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಕಾರ್ಮಿಕರಿಗಾಗಿ ಇರುವಂತಹ 40 ಕಾನೂನುಗಳನ್ನು ರದ್ದುಗೊಳಿಸಿ ಕೇವಲ ನಾಲ್ಕು ಕಾನೂನನ್ನು ಮಾತ್ರ ಜಾರಿಗೆ ತರುವ ಮೂಲಕ ಕಾರ್ಮಿಕರಿಗೆ ಅನ್ಯಾಯ ಎಸಗುತ್ತಿದೆ. ಬಂಡವಾಳಶಾಹಿಗಳ ಪೂರಕವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕೇಂದ್ರ ಸರಕಾರ ಕಾರ್ಮಿಕರ ಪಿಂಚಣಿಯನ್ನು ಕಡಿಮೆಗೊಳಿಸಿದೆ. 50 ವರ್ಷಕ್ಕೆ ಕೊಡಬೇಕಾದ ಪಿಂಚಣಿ ಯನ್ನು ರದ್ದುಗೊಳಿಸಿ 58 ಕ್ಕೆ ಹಣ ತೆಗೆಯುವಂತೆ ಮಾಡಿದೆ. ನಾಲ್ಕು ಅಥವಾ 10 ವರ್ಷಗಳ ಕಾಲ ಕೆಲಸ ಮಾಡಿ ಪಿಂಚಣಿ ಹಣ ತೆಗೆಯಲು ಹೋದಲ್ಲಿ, 58 ವರ್ಷಕ್ಕೆ ಮಾತ್ರ ಕೊಡುವುದಾಗಿ ಕಾನೂನು ಮಾತನಾಡುತ್ತಿದ್ದಾರೆ. ಇದರಿಂದ ಬೀಡಿ ಕಾರ್ಮಿಕರಲ್ಲದೆ ಎಲ್ಲಾ ಕಾರ್ಮಿಕರು ತೊಂದರೆ ಅನುಭವಿಸುವಂತಾಗಿದೆ ಎಂದರು.
ಈ ವೇಳೆ ಕೋಟೆಕಾರು ಸರ್ಕಲ್ ಬೀಡಿ ಯೂನಿನ್ನಿನ ಕಾರ್ಯದರ್ಶಿ ಜಯಂತ್ ನಾಯ್ಕ್, ಅಧ್ಯಕ್ಷೆ ಪದ್ಮಾವತಿ.ಯಸ್.ಶೆಟ್ಟಿ, ವಿಲಾಸಿನಿ ತೊಕ್ಕೊಟ್ಟು , ಸಿಐಟಿಯು ರಾಜ್ಯ ಸಮಿತಿ ಸದಸ್ಯ ಬಾಬು ಪಿಲಾರ್, ಸುಂದರ ಕುಂಪಲ, ನಳಿನಾಕ್ಷಿ ಉಳ್ಳಾಲಬೈಲು, ಜಯಂತಿ, ಜನಾರ್ದನ ಗಟ್ಟಿ, ಇಸ್ಮಾಯಿಲ್ ಮಾಡೂರು ಮೊದಲಾದವರು ಉಪಸ್ಥಿತರಿದ್ದರು.
ಗೊಂದಲದ ವಾತಾವರಣ:
ಪ್ರತಿಭಟನೆ ಬಳಿಕ ಕಾರ್ಮಿಕರ ಮನವಿ ಸಲ್ಲಿಸಲು ಮುಂದಾದಾಗ ಕೋಟೆಕಾರು ಪಂಚಾಯಿತಿಯಲ್ಲಿದ್ದ ಕಾರ್ಯನಿರ್ವಹಣಾಧಿಕಾರಿ ಮನವಿ ಪಡೆಯಲು ನಿರಾಕರಿಸಿದರು. ಮನವಿ ಸ್ವೀಕರಿಸಲು ಯಾವುದೇ ಸರಕಾರದ ಆದೇಶ ಇಲ್ಲ. ಮುಖ್ಯಾಧಿಕಾರಿಯೂ ಇಲ್ಲ, ಸಿಬ್ಬಂದಿ ಕೊರತೆಯೂ ಕೋಟೆಕಾರಿನಲ್ಲಿದೆ. ಜನಪ್ರತಿನಿಧಿ ಇಲ್ಲದ ಬಾಡಿ ಪಂಚಾಯಿತಿಯಲ್ಲಿರುವುದರಿಂದ ಮನವಿ ಸ್ವೀಕರಿಸಲು ಸಾಧ್ಯವಿಲ್ಲ ಎಂದ ಹಿನ್ನೆಲೆಯಲ್ಲಿ ಕೆರಳಿದ ಪ್ರತಿಭಟನಾಕಾರರು ಅರ್ಧ ಗಂಟೆಯ ಕಾಲ ಧಿಕ್ಕಾರ ಕೂಗಿ ಮೇಲಧಿಕಾರಿಗಳು ಬರುವವರೆಗೆ ಕದಲುವುದಿಲ್ಲ ಎಂದು ಹಠ ಹಿಡಿದರು. ಆ ಬಳಿಕ ಕಾರ್ಯ ನಿರ್ವಹಣಾಧಿಕಾರಿ ತಹಶೀಲ್ದಾರರಿಗೆ ಕರೆ ಮಾಡಿ ವಿಚಾರ ತಿಳಿಸಿದಾಗ ಅವರು ಮನವಿ ಸ್ವೀಕರಿಸಲು ಹೇಳಿದ್ದು, ಅದರಂತೆ ಮನವಿಯನ್ನು ಸ್ವೀಕರಿಸಿದ ಬಳಿಕ ಗೊಂದಲದ ವಾತಾವರಣ ತಿಳಿಯಾಯಿತು.





