ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕುತ್ತಾರು: ತೊಕ್ಕೊಟ್ಟು ಸಮೀಪದ ಕುತ್ತಾರುಗುತ್ತುವಿನ ಮಾಜಿ ಶಾಸಕ ಕೆ. ಜಯರಾಮಶೆಟ್ಟಿ ಅವರ ಮನೆ ಪರಿಸರದಲ್ಲಿ ಚಿರತೆಯೊಂದು ಕಾಣಿಸಿಕೊಂಡಿದ್ದು ಸುತ್ತಮುತ್ತಲಿನ ಜನರಲ್ಲಿ ಆತಂಕ ಮೂಡಿಸಿದೆ.
ಕುತ್ತಾರುಗುತ್ತುವಿನ ಗದ್ದೆಯೊಂದರಲ್ಲಿ ಸ್ಥಳೀಯ ಆನಂದ ಬೆಳ್ಚಾಡ ಎಂಬವರು ಕೆಲಸ ಮಾಡುತ್ತಿದ್ದ ಸಂದರ್ಭ ಮಧ್ಯಮ ಗಾತ್ರದ ಚಿರತೆಯೊಂದು ಗುಡ್ಡೆ ಪ್ರದೇಶದಿಂದ ಶರವೇಗದಲ್ಲಿ ಓಡಿ ಹತ್ತಿರದಲ್ಲೇ ಇರುವ ದೈವಸ್ಥಾನದ ಹಾದಿಯಲ್ಲಿ ಮರೆಯಾಗಿದೆ. ಈ ಬಗ್ಗೆ ಅವರು ಸ್ಥಳೀಯರಲ್ಲಿ ತಿಳಿಸಿದಾಗ ಅದಾಗಲೇ ಕೆಲವರು ಚಿರತೆಯನ್ನು ಕಂಡ ಬಗ್ಗೆ ತಮ್ಮ ಅನುಭವ ತಿಳಿಸಿದ್ದಾರೆ.
ಮಾಜಿ ಶಾಸಕ ಜಯರಾಮಶೆಟ್ಟಿ ಅವರ ಮಗನಿಗೂ ಚಿರತೆ ಕಾಣಸಿಕ್ಕಿತ್ತೆನ್ನಲಾಗಿದ್ದು ಅವರು ಈ ವಿಷಯವನ್ನು ಲಘುವಾಗಿ ಪರಿಗಣಿಸಿದ್ದರು. ಪರಿಸರದ ಅನೇಕ ಮಂದಿ ಇದೀಗ ಚಿರತೆಯನ್ನು ಕಂಡಿದ್ದು ಆತಂಕದಲ್ಲಿ ದಿನಕಳೆಯುವಂತಾಗಿದೆ.
-ಕುತ್ತಾರುಗುತ್ತು ಪರಿಸರದಲ್ಲಿ ಹಚ್ಚಹಸಿರು, ದಟ್ಟ ಪೆÇದೆಗಳು ವಿಶಾಲವಾದ ಕೃಷಿಭೂಮಿ ಹೊಂದಿದ್ದು ಜಾನುವಾರುಗಳನ್ನು ಸಾಕಲಾಗುತ್ತಿದ್ದು, ಚಿರತೆಯು ಅವುಗಳ ಮೇಲೆಯೂ ದಾಳಿಯೂ ನಡೆಸುವ ಸಂಭವ ಹೆಚ್ಚಿದೆ.
ಕೃಷ್ಣ ಶೆಟ್ಟಿ
ಕುತ್ತಾರುಗುತ್ತು ನಿವಾಸಿ
-ಚಿರತೆ ಪ್ರತ್ಯಕ್ಷವಾದ ಬಗ್ಗೆ ಜಿಲ್ಲಾಧಿಕಾರಿಯವರಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖಾ ಸಿಬ್ಬಂದಿಗಳು ಭೇಟಿ ನೀಡಿ ತಪಾಸಣೆ ನಡೆಸಿದ್ದು ಚಿರತೆಯ ಸುಳಿವು ಸಿಕ್ಕಿಲ್ಲ. ಕುತ್ತಾರುಗುತ್ತಿನಲ್ಲಿ ನೂರಾರು ಎಕರೆ ಗುಡ್ಡ ಪ್ರದೇಶಗಳಿದ್ದು ಅಲ್ಲಿನ ಬೃಹತ್ ಮರಗಳಲ್ಲಿ ಅಥವಾ ಗುಹೆಗಳಲ್ಲಿ ಚಿರತೆ ಅಡಗಿರುವ ಸಾಧ್ಯತೆಯೂ ಇದೆ. ಅರಣ್ಯ ಇಲಾಖೆ ಚಿರತೆಯನ್ನು ಪತ್ತೆಹಚ್ಚಿದರೆ ಮಾತ್ರ ಸ್ಥಳೀಯರು ಜೀವಭಯದಿಂದ ಹೊರಬರಲು ಸಾಧ್ಯ.
ಕೆ. ಜಯರಾಮ ಶೆಟ್ಟಿ
ಮಾಜಿ ಶಾಸಕರು
-ಮಂಗಳೂರು ಹೊರವಲಯ ಗುರುಪುರ, ಜಪ್ಪಿನಮೊಗರು ಮೊದಲಾದ ಪ್ರದೇಶಗಳಲ್ಲಿ ಚಿರತೆ ಕಾಣಸಿಕ್ಕಿದ ನಿದರ್ಶನಗಳಿದೆ. ಅರಣ್ಯ ಪ್ರದೇಶದಿಂದ ನದಿ ದಾಟಿ ಚಿರತೆಯು ಕುತ್ತಾರು ಪ್ರದೇಶಕ್ಕೆ ಬಂದಿರುವ ಸಾಧ್ಯತೆ ಇದೆ. ಅರಣ್ಯ ಇಲಾಳೆಯ ಸಿಬ್ಬಂದಿಗಳು ಬುಧವಾರ ಬೆಳಗ್ಗೆ ಕುತ್ತಾರುಗುತ್ತು ಪರಿಸರದಲ್ಲಿ ಚಿರತೆ ನಡೆದಾಡಿದ ಹೆಜ್ಜೆಯ ಗುರುತು ಪತ್ತೆಹಚ್ಚುವ ಪ್ರಯತ್ನ ನಡೆಸಿದ್ದಾರೆ. ಶೀಘ್ರವೇ ಪತ್ತೆ ಹಚ್ಚುವ ಕಾರ್ಯ ನಡೆಸುತ್ತೇವೆ. ಹಾಗಿದ್ದು ಚಿರತೆ ಇರುವುದು ಖಾತ್ರಿಯಾದರೆ ಮೂರು ಬೋನುಗಳ ಸಹಾಯದಿಂದ ಬಂಧಿಸುವ ಕಾರ್ಯ ನಡೆಸುತ್ತೇವೆ.
ಶ್ರೀಧರ್
ವಲಯ ಅರಣ್ಯ ಸಂರಕ್ಷಣಾಧಿಕಾರಿ



