ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕೊಣಾಜೆ: ಗಾರೆ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕ ಕೆಳಗೆ ಬಿದ್ದು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾದವರು ಶುಕ್ರವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಘಟನೆಗೆ ಗುತ್ತಿಗೆದಾರನ ನಿರ್ಲಕ್ಷ್ಯವೇ ಕಾರಣ ಎಂದು ಕೊಣಾಜೆ ಠಾಣೆಯಲ್ಲಿ ದೂರು ದಾಖಲಾಗಿದೆ.
ಲಿಪು ನಾಯ್ಕ್ (24) ಮೃತ ಕಾರ್ಮಿಕ. ಜ.11 ರಂದು ಮುಡಿಪುವಿನ ಶೋಭಾ ಡೆವಲಪ್ಪರ್ಸ್ ಸಂಸ್ಥೆಯಲ್ಲಿ ಸಿಮೆಂಟ್ ಗಾರೆಗೆ ನೀರು ಹಾಯಿಸುತ್ತಿದ್ದ ಸಂದರ್ಭ ಕಾಲು ಜಾರಿ ಇಮ್ಮುಖವಾಗಿ ನೆಲಕ್ಕೆ ಬಿದ್ದು ತಲೆಗೆ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಶುಕ್ರವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಅವರ ಸಂಬಂಧಿಕರು ಲಿಪು ನಾಯ್ಕ್ ಸಾವಿಗೆ ಗುತ್ತಿಗೆದಾರನ ನಿರ್ಲಕ್ಷ್ಯವೇ ಕಾರಣ, ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ಆಗ್ರಹಿಸಿ ಕೊಣಾಜೆ ಠಾಣೆಗೆ ಮೃತರ ಸಂಬಂಧಿಕರು ದೂರು ನೀಡಿದ್ದಾರೆ.


