ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕೊಣಾಜೆ: ಮನೆಮಂದಿಗೆ ಬೆದರಿಸಿ ಹಟ್ಟಿಯಲ್ಲಿದ್ದ ಮೂರು ದನಗಳ ಪೈಕಿ ಎರಡು ದನಗಳನ್ನು ಗೋಕಳ್ಳರು ಕಳವು ಗೈದಿರುವ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯ ನಡುಪದವು ಬಳಿ ನಿನ್ನೆ ತಡರಾತ್ರಿ ಸಂಭವಿಸಿದ್ದು, ಘಟನೆಯನ್ನು ಖಂಡಿಸಿ ಸ್ಥಳೀಯರು ಕೊಣಾಜೆ ಠಾಣೆಗೆ ಮುತ್ತಿಗೆ ಹಾಕಿರುವ ಘಟನೆ ಇಂದು ನಡೆದಿದೆ.
ನಡುಪದವು ನಿವಾಸಿ ಪುರುಷೋತ್ತಮ ಎಂಬವರಿಗೆ ಸೇರಿದ ಮನೆಯಿಂದ ಗೋಕಳವು ನಡೆದಿದ್ದು, ಮೂರು ಗೋಕಳ್ಳರ ತಂಡ ತಡರಾತ್ರಿ ಹಟ್ಟಿಗೆ ನುಗ್ಗಿ ದನಗಳನ್ನು ಕಳವುಗೈಯ್ಯಲು ಯತ್ನಿಸುತ್ತಿದ್ದ ಸಂದರ್ಭ ಮನೆಯ ನಾಯಿ ಬೊಗಳುವುದನ್ನು ಮನಗಂಡ ಮನೆಮಂದಿ ನಿದ್ರೆಯಿಂದ ಎಚ್ಚೆತ್ತು ಹೊರಬಂದು ಗೋಕಳ್ಳರನ್ನು ತಡೆಯಲು ಯತ್ನಿಸಿದಾಗ ದುಷ್ಕರ್ಮಿಗಳು ಕಲ್ಲುಗಳನ್ನು ಎತ್ತಿ ಸಾಯಿಸುವುದಾಗಿ ಬೆದರಿಸಿ ಎರಡು ದನಗಳನ್ನು ಕದ್ದು ಪರಾರಿಯಾಗಿದ್ದಾರೆ.
ವರ್ಷದ ಅವಧಿಯಲ್ಲಿ ೭ ದನಗಳ ಕಳವು:
ವೃತ್ತಿಯಲ್ಲಿ ಹೈನುಗಾರಿಕೆ ನಡೆಸುತ್ತಾ ಬಂದಿರುವ ಪುರುಷೋತ್ತಮ ಅವರ ಹಟ್ಟಿಯಿಂದ ವರ್ಷದ ಅವಧಿಯಲ್ಲಿ ೭ ದನಗಳನ್ನು ದುಷರ್ಮಿಗಳು ಕಳವು ಗೈದಿದ್ದಾರೆ ಆದರೆ ಕೊಣಾಜೆ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ವಿಫಲರಾಗಿದ್ದಾರೆ.
ಸ್ಥಳೀಯರಿಂದ ಠಾಣೆಗೆ ಮುತ್ತಿಗೆ:
ಪ್ರಕರಣವನ್ನು ಭೇಧಿಸುವಲ್ಲಿ ಕೊಣಾಜೆ ಪೊಲೀಸರು ವಿಫಲರಾಗಿದ್ದು, ಸಾಲು ಸಾಲು ದನಗಳ ಕಳವು ಪ್ರಕರಣ ನಡೆಯುತ್ತಿದ್ದು, ಪೊಲೀಸರು ಮಾತ್ರ ಯಾವುದೇ ಕ್ರಮಗಳನ್ನು ಕೈಗೊಳ್ಳದಿರುವುದು ಖಂಡನೀಯ. ೪೮ ಗಂಟೆಯ ಒಳಗೆ ಆರೋಪಿಗಳನ್ನು ಪತ್ತೆ ಹಚ್ಚದಿದ್ದಲ್ಲಿ ಜಿಲ್ಲೆಯಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಹಿಂದು ಮುಖಂಡ ಜಗದೀಶ ಶೇಣವ ಎಚ್ಚರಿಕೆ ನೀಡಿದ್ದಾರೆ. ಸಾಂಕೇತಿಕವಾಗಿ ನಡೆದ ಪ್ರತಿಭಟನೆಯಲ್ಲಿ ಪೊಲೀಸರಿಗೆ ಮನವಿಯನ್ನು ಸಲ್ಲಿಸಲಾಯಿತು.
ಗೋಪಾಲ್ ಕುತ್ತಾರು, ರವಿ ಅಸೈಗೋಳಿ, ಶಿವಪ್ರಕಾಶ್ ಭಟ್, ನಾಸೀರ್ ನಡುಪದವು, ಚಂದ್ರಹಾಸ್ ಮೊದಲಾದವರು ಉಪಸ್ಥಿತರಿದ್ದರು.


