ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಮುಡಿಪು: ಭಾರತೀಯ ಸಂಸ್ಕøತಿ, ಯೋಗ ಪದ್ದತಿಯು ಅಭೂತಪೂರ್ವವಾದದ್ದು ಇತ್ತೀಚೆಗೆ ವಿಶ್ವದೆಲ್ಲೆಡೆ ಮನ್ನಣೆ ಸಿಗುತ್ತಿದ್ದು ಹೆಮ್ಮೆಯ ವಿಚಾರವಾಗಿದೆ. ಹಲವಾರು ಶತಮಾನಗಳ ಹಿಂದೆಯೇ ಆರ್ಯುವೇದ ಹಾಗೂ ಇಲ್ಲಿಯ ಸಂಸ್ಕøತಿಯು ಶ್ರೀಮಂತವಾಗಿತ್ತು. ಆದರೆ ಬ್ರಿಟೀಷರ ಒಡೆದು ಆಳುವ ನೀತಿಯಿಂದಾಗಿ ಇದರ ಮಹತ್ವದ ಬಗ್ಗೆ ನಮಗೇ ಅರಿವಿರಲಿಲ್ಲ. ಆರ್ಯುವೇದ ಎಂದರೆ ಜೀವನ ಪದ್ದತಿ. ಯಾವುದರಿಂದ ಹಿತ, ಯಾವುದರಿಂದ ಅಹಿತವಾಗುತ್ತದೋ, ಯಾವುದರಿಂದ ಒಳ್ಳೆಯ ಜ್ಞಾನವನ್ನು ಪಡೆಯಬಹುದೋ ಅದೇ ಆರ್ಯರ್ವೇದವಾಗಿದೆ ಎಂದು ಪತಂಜಲಿ ಯೋಗ ಸಮಿತಿಯ ರಾಜ್ಯ ಪ್ರಭಾರಿ ಡಾ.ಜ್ಞಾನೇಶ್ವರ ನಾಯಕ್ ಅವರು ಅಭಿಪ್ರಾಯ ಪಟ್ಟರು.
ಅವರು ಶ್ರೀ ಮಹಾಕಾಳಿ ಮಿತ್ರಮಂಡಳಿ, ಮಾತೃ ಮಂಡಳಿ ಕುಂಟಾಳಗುಳಿ ಹಾಗೂ ಪತಂಜಲಿ ಯೋಗ ಸಮಿತಿ ಮುಡಿಪು ಇದರ ಆಶ್ರಯದಲ್ಲಿ ಕೊಣಾಜೆ ಗ್ರಾಮದ ಕುಂಟಾಲಗುಳಿ ವನಸಾನ್ನಿಧ್ಯದಲ್ಲಿ ಭಾನುವಾರ ನಡೆದ ಯೋಗ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ನಮ್ಮ ದೇಶದಿಂದ ಯಾರೂ ದಂಡೆತ್ತಿ ಹೋಗಿಲ್ಲ. ವಿಶ್ವದ ಅತ್ಯಂತ ಸಹಿಷ್ಣುವಾದ ದೇಶ ಎಂದರೆ ಅದು ಭಾರತ ಮಾತ್ರ. ನಮ್ಮ ಮೂಲ ಇರುವುದು ಸಹಿಷ್ಣುತೆಯಲ್ಲಿ. ಆದರೆ ಇಂದು ದೇಶದೆಲ್ಲೆಡೆ ಅಸಷ್ಣತೆಯ ಬಗ್ಗೆ ವಾದ ವಿವಾದಗಳು ನಡೆಯುತ್ತಿರುವುದು ನಿಜಕ್ಕೂ ದುರದೃಷ್ಟಕರ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಪತಂಜಲಿ ಯೋಗ ಸಮಿತಿಯ ರಾಜ್ಯ ಮಹಿಳಾ ಪ್ರಭಾರಿ ಸುಜಾತ ಮಾರ್ಲ ಯೋಗದಿಂದ ಋಣಾತ್ಮಕ ಚಿಂತನೆ ಕಡಿಮೆಯಾಗುತ್ತದೆ. ನಾವು ಪಡೆದುಕೊಂಡದ್ದನ್ನು ಎಲ್ಲರಿಗೂ ಹಂಚಬೇಕು. ಯೋಗದಿಂದಲೇ ಆರೋಗ್ಯಭಾಗ್ಯವನ್ನು ಪಡೆದುಕೊಳ್ಳಲು ಸಾದ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪತಂಜಲಿ ಸೇವಾ ಸಮಿತಿಯ ಜಿಲ್ಲಾ ಪ್ರಭಾರಿ ಜಗದೀಶ್ ಶೆಟ್ಟಿ, ಜಿಲ್ಲಾ ಕಾರ್ಯ ಪ್ರಭಾರಿ ಗೋವಿಂದ ಪ್ರಭು, ಕೇಶವ ಮಾರ್ಲ, ಯೋಗಗುರು ಪ್ರದೀಪ್ ಮುಡಿಪು, ಪ್ರಭಾಕರ ಆಚಾರ್ಯ, ಪ್ರಕಾಶ್ ನಾಯಕ್, ಸುಕೇಶ್ , ಪ್ರದೀಪ್, ಶ್ರೀ ಮಹಾಕಾಳಿ ಮಿತ್ರಮಂಡಳಿಯ ಅಧ್ಯಕ್ಷ ಯತೀಶ್ ಹಾಗೂ ಮಿತ್ರಮಂಡಳಿ, ಮಾತ್ರಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಹಾಕಾಳಿ ಮಿತ್ರಮಂಡಳಿಯ ಪ್ರವೀಣ್ ಕೆ.ಟಿ. ಸ್ವಾಗತಿಸಿ, ಶಿವಪ್ರಕಾಶ್ ವಂದಿಸಿದರು. ಸತೀಶ್ ಕೊಣಾಜೆ ಕಾರ್ಯಕ್ರಮ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ಯೋಗಶಿಬಿರದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿಲಾಯಿತು.



