ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ತೊಕ್ಕೊಟ್ಟು: ತೊಕ್ಕೊಟ್ಟು ಹೈಟೆಕ್ ಬಸ್ಸು ನಿಲ್ದಾಣದ ನೀಲಿನಕಾಶೆ ಸಿದ್ಧವಾಗಿದ್ದು, ಎರಡು ಬಾರಿ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸಿ ಅಧಿಕೃತವಾಗಿ ಅನುದಾನ ಬಿಡುಗಡೆ ಮಾಡುವಂತೆ ಮಾಡಿ ಜಿಲ್ಲೆಯಲ್ಲಿ ಮಾದರಿ ಬಸ್ ನಿಲ್ದಾಣವನ್ನು ರೂಪಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತೇನೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಅವರು ವಿಶೇಷ ಅನುದಾನದಲ್ಲಿ ಹಮ್ಮಿಕೊಳ್ಳಲಾದ ತೊಕ್ಕೊಟ್ಟು ಬಸ್ ನಿಲ್ದಾಣದ ಕಾಂಕ್ರೀಟಿಕರಣ ಕಾಮಗಾರಿಗೆ ಶನಿವಾರ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಉಳ್ಳಾಲ ನಗರಸಭೆ ಮೇಲ್ದರ್ಜೆಗೆ ಏರಿಸಿದ ಬಳಿಕ ಹಂತಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ತೊಕ್ಕೊಟ್ಟು ಜಂಕ್ಷನ್ನಿನಿಂದ ಅಬ್ಬಕ್ಕ ಸರ್ಕಲ್ ವರೆಗಿನ ರಸ್ತೆ ಕಾಂಕ್ರೀಟಿಕರಣದ ಕಾಮಗಾರಿ ರೂ.10 ಕೋಟಿ ಅನುದಾನದಲ್ಲಿ ನಡೆಸಲಾಗಿದ್ದು, ಈಗಾಗಲೇ ಭಾಗಶ: ಪೂರ್ಣಗೊಂಡಿದೆ. ದೇಶದಲ್ಲೇ ಪ್ರಥಮ ಬಾರಿ ನಡೆಸಲಾಗುತ್ತಿರುವ ಉಳ್ಳಾಲದ ಕಡಲ್ಕೊರೆತ ಕಾಮಗಾರಿಗೆ ರೂ.235 ಕೋಟಿ ಅನುದಾನ ಮಂಜೂರಾಗಿದ್ದು, ಅದರಲ್ಲಿ 35 ಕೋಟಿಯ ಕಾಮಗಾರಿ ನಡೆಸಲಾಗಿದೆ. ಮಾದರಿ ಆಸ್ಪತ್ರೆ, ಹೈಟೆಕ್ ಮೀನು ಮಾರುಕಟ್ಟೆ, ಮೀನುಗಾರರಿಗೆ ಜಟ್ಟಿ ನಿರ್ಮಾಣಕ್ಕಾಗಿ ನಗರೋತ್ಥಾನ ಯೋಜನೆಯಡಿ ಈಗಾಗಲೇ ಚರ್ಚಿಸಲಾಗಿದೆ. ಕೆಳ ಅಂತಸ್ತಿನಲ್ಲಿ ಬಸ್ ನಿಲ್ದಾಣ, ಮೇಲಿನ ಅಂತಸ್ತಿನಲ್ಲಿ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಿ ಸುಸಜ್ಜಿತ ಬಸ್ಸು ನಿಲ್ದಾಣದ ನೀಲಿ ನಕಾಶೆಯನ್ನು ತಯಾರಿಸಲಾಗಿದೆ. ಅಧಿಕೃತ ಅನುದಾನ ಬಿಡುಗಡೆಗಾಗಿ ಎರಡು ಸಭೆಗಳ ಮೂಲಕ ಚರ್ಚಿಸಿದ ನಂತರದ ದಿನಗಳಲ್ಲಿ ಜಿಲ್ಲೆಗೆ ಮಾದರಿಯಾಗುವ ಹೈಟೆಕ್ ಬಸ್ ನಿಲ್ದಾಣವನ್ನು ನಿರ್ಮಿಸಲಾಗುವುದು ಎಂದರು .
ಈ ಸಂದರ್ಭ ಉಳ್ಳಾಲ ನಗರಸಭೆ ಅಧ್ಯಕ್ಷೆ ಎಂ.ಗಿರಿಜಾ ಬಾೈ, ಉಪಾಧ್ಯಕ್ಷೆ ರಝಿಯಾ ಇಬ್ರಾಹಿಂ, ಮಾಜಿ ಅಧ್ಯಕ್ಷರುಗಳಾದ ಬಾಝಿಲ್ ಡಿಸೋಜಾ, ಯು.ಎ.ಇಸ್ಮಾಯಿಲ್, ಸ್ಥಾಯಿ ಸಮಿತಿ ಅಧ್ಯಕ್ಷ ಮಹಮ್ಮದ್ ಮುಕ್ಕಚ್ಚೇರಿ, ಮುಖ್ಯಾಧಿಕಾರಿ ರೂಪಾ.ಟಿ.ಶೆಟ್ಟಿ, ನಗರಸಭೆ ಸದಸ್ಯರಾದ ಉಸ್ಮಾನ್ ಕಲ್ಲಾಪು, ಸುಕುಮಾರ್, ಕುಂಞÂಮೋನು, ಕಾಂಗ್ರೆಸ್ ಮುಖಂಡರಾದ ರಹಿಮಾನ್ ಕೋಡಿಜಾಲ್, ಸಿರಾಜ್ ಕಿನ್ಯಾ, ಹಮೀದ್ ಕಿನ್ಯಾ, ಪದ್ಮನಾಭ ನರಿಂಗಾನ, ಜಬ್ಬಾರ್ ಬೋಳಿಯಾರ್ , ಅಹಮ್ಮದ್ ಬಾವಾ ಕೊಟ್ಟಾರ, ನರಿಂಗಾನ ಪಂ. ಸದಸ್ಯ ಮುರಳೀಧರ್ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು.





