ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ತೊಕ್ಕೊಟ್ಟು : ಬಿಜೆಪಿಯ ಐದು ವರ್ಷದ ಆಡಳಿತಕ್ಕೆ ಪರ್ಯಾಯವಾಗಿ ಕಾಂಗ್ರೆಸ್ ಪಕ್ಷ ಅದರಲ್ಲೂ ಸಿದ್ಧರಾಮಯ್ಯ ಅವರ ಸರಕಾರ ಆಡಳಿತಕ್ಕೆ ಬಂದರೆ ಕೋಮು ಸೌಹಾರ್ದ ಉಳಿಯಲು ಸಾಧ್ಯ ಎಂದು ಭಾವಿಸಿದ್ದ ಜನರಿಗೆ, ಸಿದ್ಧರಾಮಯ್ಯ ನೇತೃತ್ವದ ಸರಕಾರ ಆಡಳಿತಕ್ಕೆ ಬಂದ ಮರುದಿನದಿಂದಲೇ ಕೋಮು ಸಂಘರ್ಷ ಪ್ರಾರಂಭಗೊಂಡಿದ್ದು, ಇದರೊಂದಿಗೆ ಮೂಲಭೂತ ಸೌಕರ್ಯ ಸೇರಿದಂತೆ ಕಾರ್ಮಿಕರ ಸಮಸ್ಯೆಗೆ ರಾಜ್ಯದ ಕಾಂಗ್ರೆಸ್ ಸರಕಾರ ಸ್ಪಂದಿಸುತ್ತಿಲ್ಲ ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುನಿಲ್ ಕುಮಾರ್ ಬಜಾಲ್ ಅಭಿಪ್ರಾಯಪಟ್ಟರು.
ಅವರು ತೊಕ್ಕೊಟ್ಟು ಬಸ್ ನಿಲ್ದಾಣ ಬಳಿಯ ನಾಡಕಚೇರಿ ಎದುರು ಜಿಲ್ಲೆಯ ಅಬಿವೃದ್ಧಿ ಹಾಗೂ ಜನತೆಯ ಮೂಲಭೂತ ಸಮಸ್ಯೆಗಳ ಪರಿಹಾರಕ್ಕಾಗಿ ಒತ್ತಾಯಿಸಿ ಸಿಪಿಐಎಂನಿಂದ ನಡೆದ ಸಾಮೂಹಿಕ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ರಾಜ್ಯದಲ್ಲಿ ಆಡಳಿತದಲ್ಲಿದ್ದ ರೈತ ಕಾರ್ಮಿಕ ವಿರೋಧಿ ಬಿಜೆಪಿ ಸರಕಾರಕ್ಕೆ ಪರ್ಯಾಯವಾಗಿ ಜನರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದರು. ಅದರಲ್ಲೂ ಅಹಿಂದದ ಮೂಲಕ ರಾಜ್ಯದಾದ್ಯಂತ ಅಲ್ಪಸಂಖ್ಯಾತರ, ಹಿಂದುಳಿದ ವರ್ಗಗಳ ಹಿತ ಕಾಯುವ ಭರವಸೆ ನೀಡಿದ ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಬಂದರೆ ರಾಜ್ಯದಲ್ಲಿ ಕೋಮು ಸೌಹಾರ್ದ ಉಳಿಯಲು ಸಾಧ್ಯ ಎಂದು ಜನರು ಬೆಂಬಲಿಸಿದ್ದರು. ಆದರೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ದಿನದಿಂದಲೇ ರಾಜ್ಯದಲ್ಲಿ ಅದರಲ್ಲೂ ದ.ಕ.ಜಿಲ್ಲೆಯಲ್ಲಿ ಕೋಮು ಗಲಭೆಗಳು ಪ್ರಾರಂಭಗೊಂಡಿದ್ದು, ಮತೀಯ ವಿಚಾರದಲ್ಲಿ, ಗೋವಿನ ವಿಚಾರದಲ್ಲಿ ಅಲ್ಪಸಂಖ್ಯಾತರ ಮೇಲೆ ದಾಳಿಯಾಗುತ್ತಿದ್ದು, ರಾಜ್ಯದಲ್ಲಿ ಅದರಲ್ಲೂ ಜಿಲ್ಲೆಯ ಅಬಿವೃದ್ಧಿ ಕಾರ್ಯ ಕುಂಠಿತಗೊಂಡಿದೆ ಎಂದ ಅವರು ಮೂಲಭೂತ ಸೌಕರ್ಯ ಸೇರಿದಂತೆ ಕಾರ್ಮಿಕರ ಸಮಸ್ಯೆಗಳಿಗೆ ಸರಕಾರ ಗಮನ ನೀಡುತ್ತಿಲ್ಲ ಎಂದರು.
ಪ್ರತಿಭಟನೆಯಲ್ಲಿ ಸಿಪಿಐಎಂ ಉಳ್ಳಾಲ ವಲಯ ಕಾರ್ಯದರ್ಶಿ ಕೃಷ್ಣಪ್ಪ ಸಾಲಿಯಾನ್, ಉಳ್ಳಾಲ ವಲಯ ಸಿಐಟಿಯು ಕಾರ್ಯದರ್ಶಿ ಜಯಂತ ನಾಯ್ಕ, ಸಿಪಿಐಎಂ ಲೋಕಲ್ ಸಮಿತಿ ಕಾರ್ಯದರ್ಶಿ ಬಾಬು ಪಿಲಾರ್, ಕಟ್ಟಡ ಕಾರ್ಮಿಕರ ಸಂಘದ ಉಳ್ಳಾಲ ವಲಯಾಧ್ಯಕ್ಷ ಜನಾರ್ಧನ ಕುತ್ತಾರ್, ನಾರಾಯಣ ನಲಿಕೆ ಉಪಸ್ಥಿತರಿದ್ದರು.



