ಉಳ್ಳಾಲ: ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಜಾರಿಯಾಗದೆ ಸಂಪೂರ್ಣವಾಗಿ ನೆನೆಗುದಿಗೆ ಬಿದ್ದಿವೆ. ಯೋಜನೆಗಳಿಗೆ ಹಣ ಹೊಂದಿಸುವಲ್ಲಿ ವಿಫಲವಾಗಿರುವ ಸರ್ಕಾರ, ಇದೀಗ ಜನರ ಜೇಬಿನಿಂದಲೇ ಹಣ ವಸೂಲಿ ಮಾಡಿ ಆಡಳಿತ ನಡೆಸುತ್ತಿದೆ. ಇದು ಆಲಿಬಾಬ ಔರ್ ಚಾಲೀಸ್ ಚೋರ್ ಸರಕಾರ ಎಂದು ಬಿಜೆಪಿ ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ ವ್ಯಂಗ್ಯವಾಡಿದರು.

ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯ ಹಾಗೂ ಜನವಿರೋಧಿ ನೀತಿಗಳನ್ನು ಖಂಡಿಸಿ, ಸ್ಥಳೀಯಾಡಳಿತ ಸಂಸ್ಥೆಗಳಿಗೆ ತಕ್ಷಣ ಚುನಾವಣೆ ನಡೆಸಬೇಕೆಂದು ಒತ್ತಾಯಿಸಿ ಬಿಜೆಪಿ ಮುನ್ನೂರು ಮಹಾಶಕ್ತಿ ಕೇಂದ್ರದ ವತಿಯಿಂದ ಗುರುವಾರ ಮುನ್ನೂರು ಗ್ರಾಮ ಪಂಚಾಯತ್ ಕಚೇರಿ ಮುಂಭಾಗದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಆರಂಭದಲ್ಲಿ ಸ್ವಾಗತಿಸಿದ್ದ ಬಿಜೆಪಿ, ಅವುಗಳಿಗೆ ಅಗತ್ಯವಿರುವ ಹಣವನ್ನು ಯಾವ ಮೂಲದಿಂದ ಭರಿಸಲಾಗುತ್ತದೆ ಎಂಬ ಪ್ರಶ್ನೆಯನ್ನು ಮುಂದಿಟ್ಟಿತ್ತು. ಆದರೆ ಇದೀಗ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನವೇ ಹದಗೆಟ್ಟಿದ್ದು, ಸರ್ಕಾರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ಆಡಳಿತಾವಧಿಯಲ್ಲಿ ಸುಮಾರು 250 ಕೋಟಿ ರೂ. ಮೂಲಧನ ಮೀಸಲಿಟ್ಟು ಭಾಗ್ಯಲಕ್ಷ್ಮಿಯಂತಹ ಜನಪ್ರಿಯ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದರು. ಆದರೆ ಪ್ರಸ್ತುತ ಸರ್ಕಾರದ ಗ್ಯಾರಂಟಿ ಯೋಜನೆಗಳು ನಿರೀಕ್ಷಿತ ರೀತಿಯಲ್ಲಿ ಅನುಷ್ಠಾನಗೊಳ್ಳದೆ ಜನರಿಗೆ ಸಮರ್ಪಕವಾಗಿ ತಲುಪುತ್ತಿಲ್ಲ ಎಂದು ಟೀಕಿಸಿದರು.
ಸರ್ಕಾರ ತನ್ನ ಮುಂದಿನ ಒಂದೂವರೆ ವರ್ಷದ ಅಧಿಕಾರಾವಧಿಯನ್ನು ಹೇಗಾದರೂ ಪೂರ್ಣಗೊಳಿಸುವ ಪ್ರಯತ್ನದಲ್ಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಡುವಿನ ಅಧಿಕಾರದ ರಾಜಕೀಯದಿಂದ ಆಡಳಿತದ ಮೇಲೂ ಪರಿಣಾಮ ಬೀರುತ್ತಿದೆ. ಅಧಿಕಾರ ಉಳಿಸಿಕೊಳ್ಳುವ ಉದ್ದೇಶದಿಂದ ಸ್ಟಿಂಗ್ ಆಪರೇಷನ್ ಸೇರಿದಂತೆ ಕೆಳಮಟ್ಟದ ರಾಜಕೀಯ ತಂತ್ರಗಳನ್ನು ಬಳಸಲಾಗುತ್ತಿದೆ ಎಂದು ಆರೋಪಿಸಿದರು.
ಪ್ರತಿಭಟನೆಗೂ ಮುನ್ನ ಸುಭಾಷ್ ನಗರ ಸಮುದಾಯ ಭವನದಿಂದ ಮುನ್ನೂರು ಗ್ರಾಮ ಪಂಚಾಯತ್ ಆಡಳಿತ ಕಚೇರಿವರೆಗೆ ಬಿಜೆಪಿ ಕಾರ್ಯಕರ್ತರು ‘ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ’ ಎಂಬ ಘೋಷಣೆಯೊಂದಿಗೆ ಪಾದಯಾತ್ರೆ ನಡೆಸಿದರು.
ಬಿಜೆಪಿ ಮುನ್ನೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸತೀಶ್ ಪೂಜಾರಿ ಪ್ರತಿಭಟನೆಯ ಅಧ್ಯಕ್ಷತೆ ವಹಿಸಿದ್ದರು. ಮಂಡಲ ಕಾರ್ಯದರ್ಶಿ ಕಿಶೋರ್ ಕುತ್ತಾರ್, ಶಕ್ತಿ ಕೇಂದ್ರದ ಪ್ರಮುಖ್ ಕಿಶೋರ್ ಸಂತೋಷ್ ನಗರ, ಬೂತ್ ಅಧ್ಯಕ್ಷರಾದ ಪ್ರೇಮ್ ಸಂತೋಷ್ ನಗರ, ಶಿವಾನಂದ ನಾಯಕ್, ಶಿವಾನಂದ ಸುಭಾಷ್ ನಗರ, ಪ್ರಮುಖರಾದ ಗೀತಾ ಕುಂದರ್, ಪ್ರದೀಪ್ ಶೆಟ್ಟಿ ಬೆರಿಕೆ, ರಾಜೇಶ್ ಶೆಟ್ಟಿ, ಪ್ರಕಾಶ್ ಶೆಟ್ಟಿ, ಮಾಜಿ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಪಕ್ಷದ ಮುಖಂಡರು ಉಪಸ್ಥಿತರಿದ್ದರು.
ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ದಯಾನಂದ ತೊಕ್ಕೊಟ್ಟು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಕಾರ್ಯದರ್ಶಿ ಧನಲಕ್ಷ್ಮಿ ಗಟ್ಟಿ ಪ್ರಸ್ತಾವನೆಗೈದರು. ಮಂಡಲ ಕಾರ್ಯದರ್ಶಿ ಸುರೇಖಾ ರಾಣಿಪುರ ವಂದಿಸಿದರು.

