ಭಾರತದ ಸಂವಿಧಾನದ ಪರಿಚ್ಛೇದ 21 ಪ್ರತಿಯೊಬ್ಬ ನಾಗರಿಕನಿಗೆ ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕನ್ನು ಖಾತರಿಪಡಿಸುತ್ತದೆ. ಈ ಹಕ್ಕಿನ ವ್ಯಾಪ್ತಿಯಲ್ಲಿ ತುರ್ತು ಆರೋಗ್ಯ ಸೇವೆ ಮತ್ತು ಜೀವ ರಕ್ಷಕ ಚಿಕಿತ್ಸೆಗೆ ಪ್ರವೇಶವೂ ಸೇರಿದೆ ಎಂದು ವಿವಿಧ ನ್ಯಾಯಾಂಗ ತೀರ್ಪುಗಳು ಸ್ಪಷ್ಟಪಡಿಸಿವೆ. ಸರ್ಕಾರದ ಅಧಿಕಾರಿಗಳು, ಅದರಲ್ಲೂ ಆರೋಗ್ಯ ಸಚಿವರು, ಇದೇ ಸಂವಿಧಾನದ ಮೇಲೆ ಪ್ರಮಾಣವಚನ ಸ್ವೀಕರಿಸಿ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಾರೆ.
ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪೆರ್ಮನ್ನೂರು ಕಲ್ಲಾಪು ನಿವಾಸಿ ದೀಕ್ಷಾ ಕುತ್ತಾರು (30) ಅವರ ಪರಿಸ್ಥಿತಿ ಗಂಭೀರ ಕಳವಳಕ್ಕೆ ಕಾರಣವಾಗಿದೆ. ಮೆದುಳಿನ ಜ್ವರದಿಂದ ಬಳಲುತ್ತಿರುವ ಅವರು ಮಂಗಳೂರಿನ ಕೆ.ಎಂ.ಸಿ. ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಟುಂಬದ ಮಾಹಿತಿ ಮತ್ತು ಆಸ್ಪತ್ರೆ ಮೂಲಗಳ ಪ್ರಕಾರ, ಮುಂದಿನ ಚಿಕಿತ್ಸೆಗೆ ಸುಮಾರು ₹20 ಲಕ್ಷ ವೆಚ್ಚವಾಗಬಹುದು ಎನ್ನಲಾಗಿದೆ. ಬಡ ಕುಟುಂಬಕ್ಕೆ ಈ ಮೊತ್ತವನ್ನು ಭರಿಸುವುದು ಅಸಾಧ್ಯವಾಗಿದೆ.
ಜೀವ ಉಳಿಸುವ ಚಿಕಿತ್ಸೆಯು ಕೇವಲ ಹಣವಂತರಿಗೆ ಮಾತ್ರ ಸೀಮಿತವಾಗಬಾರದು. ಆರ್ಥಿಕ ಸಂಕಷ್ಟದಿಂದ ಒಬ್ಬ ರೋಗಿ ಚಿಕಿತ್ಸೆ ವಂಚಿತರಾಗುವ ಪರಿಸ್ಥಿತಿ ಉಂಟಾದರೆ, ಸರ್ಕಾರದ ಆರೋಗ್ಯ ವ್ಯವಸ್ಥೆ, ಲಭ್ಯವಿರುವ ಆರೋಗ್ಯ ಯೋಜನೆಗಳು ಮತ್ತು ತುರ್ತು ನೆರವು ವ್ಯವಸ್ಥೆಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಆದ್ದರಿಂದ ರಾಜ್ಯ ಆರೋಗ್ಯ ಇಲಾಖೆ ಈ ಪ್ರಕರಣವನ್ನು ತುರ್ತಾಗಿ ಪರಿಶೀಲಿಸಿ, ಸರ್ಕಾರದ ಆರೋಗ್ಯ ಯೋಜನೆಗಳು, ಮುಖ್ಯಮಂತ್ರಿ ಪರಿಹಾರ ನಿಧಿ, ಲಭ್ಯವಿರುವ ವೈದ್ಯಕೀಯ ನೆರವು ಅಥವಾ ಇತರೆ ಕಾನೂನುಬದ್ಧ ಮಾರ್ಗಗಳ ಮೂಲಕ ದೀಕ್ಷಾ ಅವರಿಗೆ ಅಗತ್ಯ ಚಿಕಿತ್ಸೆ ದೊರಕುವಂತೆ ಕ್ರಮ ಕೈಗೊಳ್ಳುವ ಅಗತ್ಯವಿದೆ.
ಸಂವಿಧಾನವು ಪ್ರತಿಯೊಬ್ಬರ ಜೀವಕ್ಕೆ ಸಮಾನ ಮೌಲ್ಯ ನೀಡುತ್ತದೆ. ಹಣದ ಕೊರತೆಯಿಂದ ಜೀವ ಅಪಾಯಕ್ಕೆ ಸಿಲುಕಬಾರದು ಎಂಬ ತತ್ವವನ್ನು ಕಾರ್ಯರೂಪಕ್ಕೆ ತರುವುದು ಅರೋಗ್ಯ ಸಚಿವರ ನೈತಿಕ ಹಾಗೂ ಸಾಂವಿಧಾನಿಕ ಜವಾಬ್ದಾರಿಯಾಗಿದೆ. ಇದಕ್ಕೆ ಸ್ಪಂದನೆ ನೀಡುತ್ತಾರೆ ಎಂಬ ಅಶಾ ಭಾವನೆ ನಿಮ್ಮ ಕ್ಷೇತ್ರದ ಜನರಲ್ಲಿ ಇದೆ.