Site icon Ullalavani

ಸಾವಿರ ವರ್ಷ ಕಳೆದರೂ ಕೊರೋನಾ ವೈರಸ್ ಇರುತ್ತೆ- ಭಯ ಬೇಡ ಎಚ್ಚರವಿರಲಿ: ಆರೋಗ್ಯ ಸಚಿವ ಯು.ಟಿ. ಖಾದರ್

ಬೆಂಗಳೂರು, ಜು.22: ದೇಶಾದ್ಯಂತ ಮತ್ತೆ ಕೊರೋನಾ, ಡೆಂಗ್ಯೂ ಹಾಗೂ H1N1 ನಂತಹ ವೈರಲ್ ರೋಗಗಳ ಭೀತಿ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಯಾವುದೇ ಕಾರಣಕ್ಕೂ ಆತಂಕ ಪಡಬೇಕಾದ ಅಗತ್ಯವಿಲ್ಲ, ಭಯಕ್ಕಿಂತ ಎಚ್ಚರಿಕೆ ವಹಿಸುವುದು ಮುಖ್ಯ ಎಂದು ಆರೋಗ್ಯ ಸಚಿವ ಯು.ಟಿ ಖಾದರ್ ಅಭಯ ನೀಡಿದ್ದಾರೆ.

ಸಾಂಕ್ರಾಮಿಕ ರೋಗಗಳ ನಿಯಂತ್ರಣ, ಲಸಿಕೆ ಹಾಗೂ ಸಾರ್ವಜನಿಕ ಆರೋಗ್ಯದ ಕುರಿತು ಮಹತ್ವದ ಮಾಹಿತಿಗಳನ್ನು ಹಂಚಿಕೊಂಡರು. ಕೋವಿಡ್ ಪ್ರಕರಣಗಳ ಕುರಿತು ಮಾತನಾಡಿದ ಸಚಿವರು, “ಸಾವಿರ ವರ್ಷ ಕಳೆದರೂ ಈ ವೈರಸ್ ಇದ್ದೇ ಇರುತ್ತದೆ. ಕೆಲವೊಂದು ವೈರಸ್‌ಗಳು ಗಾಳಿಯಲ್ಲಿ ನಿರಂತರವಾಗಿ ಇರುತ್ತವೆ. ನಾವು ಟೆಸ್ಟಿಂಗ್ ಹೆಚ್ಚಿಸಿದಾಗ ಕೆಲವೊಂದು ಪ್ರಕರಣಗಳು ಪಾಸಿಟಿವ್ ಬಂದೇ ಬರುತ್ತವೆ. ಇದಕ್ಕಾಗಿ ಯಾರೂ ಭಯಪಡುವ ಅಗತ್ಯವಿಲ್ಲ” ಎಂದರು.

ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ರೋಗ ಬೇಗ ತಗುಲುತ್ತದೆ. ವೈರಸ್‌ಗಿಂತ ನಾವು ಗಟ್ಟಿಯಾಗಬೇಕು ಮತ್ತು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಉತ್ತಮ ಆಹಾರ ಪದ್ಧತಿ, ಆರೋಗ್ಯಕರ ಜೀವನಶೈಲಿ ಹಾಗೂ ನೈರ್ಮಲ್ಯ ಮತ್ತು ಸ್ವಚ್ಛತೆಯನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸೊಳ್ಳೆಗಳ ಉತ್ಪತ್ತಿ ತಡೆಗೆ ಕರೆ, ಜ್ವರ ಬಂದ ತಕ್ಷಣ ಟೆಸ್ಟ್ ಮಾಡಿಸಿ:

ಇದು ಸಾಂಕ್ರಾಮಿಕ ರೋಗಗಳ ಹಾಗೂ ವೈರಲ್ ಫೀವರ್ ಸೀಸನ್ ಆಗಿರುವುದರಿಂದ ಸೊಳ್ಳೆಗಳ ಉತ್ಪತ್ತಿಯಿಂದ ರೋಗಗಳು ಹೆಚ್ಚಾಗುತ್ತಿವೆ. ವಿಮಾನ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್, ಟೆಸ್ಟಿಂಗ್ ಸೇರಿ ಡೆಂಗ್ಯೂ, H1N1 ಮತ್ತು ಕೋವಿಡ್ ಎದುರಿಸಲು ಸರ್ಕಾರ ಸಂಪೂರ್ಣ ಸಜ್ಜಾಗಿದೆ. ಆದರೆ ಇದಕ್ಕೆ ಜನಸಾಮಾನ್ಯರು ಹಾಗೂ ಸಂಘ-ಸಂಸ್ಥೆಗಳ ಸಹಕಾರ ಅತ್ಯಗತ್ಯ” ಎಂದರು.

ಸಾರ್ವಜನಿಕರಿಗೆ ನೀಡಿದ ಪ್ರಮುಖ ಸೂಚನೆಗಳು:

ನಿರ್ಮಾಣ ಹಂತದ ಕಟ್ಟಡಗಳು ಹಾಗೂ ಮನೆ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು.

ಜ್ವರ ಅಥವಾ ಯಾವುದೇ ರೋಗಲಕ್ಷಣ ಕಂಡುಬಂದ ತಕ್ಷಣ ಟೆಸ್ಟ್ ಮಾಡಿಸಿಕೊಳ್ಳಬೇಕು.

ಕುಡಿಯಲು ಕಾಯಿಸಿ ಆರಿಸಿದ ಬಿಸಿ ನೀರನ್ನೇ ಬಳಸಬೇಕು.

ಡೆಂಗ್ಯೂ ಲಸಿಕೆ ಸಂಶೋಧನೆ ಬಗ್ಗೆ ಚರ್ಚೆ:

ಡೆಂಗ್ಯೂ ರೋಗಕ್ಕೆ ಲಸಿಕೆ ಸಂಶೋಧನೆ ನಡೆಯುತ್ತಿರುವ ಕುರಿತು ಪ್ರತಿಕ್ರಿಯಿಸಿದ ಸಚಿವರು, “ಈ ಬಗ್ಗೆ ಈಗಾಗಲೇ ಮಾಹಿತಿ ಬಂದಿದ್ದು, ನಿನ್ನೆಯಷ್ಟೇ ಉನ್ನತ ಮಟ್ಟದ ಸಭೆ ನಡೆಸಿದ್ದೇನೆ. ನಮ್ಮ ರಾಜ್ಯಕ್ಕೆ ಈ ಲಸಿಕೆ ಸೂಕ್ತವೇ ಅಥವಾ ಇಲ್ಲವೇ ಹಾಗೂ ಆರೋಗ್ಯದ ಮೇಲೆ ಇದು ಬೀರುವ ಪರಿಣಾಮಗಳ ಕುರಿತು ತಜ್ಞರೊಂದಿಗೆ ಸುದೀರ್ಘ ಚರ್ಚೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.

ಬಾಲಕಿಯರಿಗೆ ಕ್ಯಾನ್ಸರ್ ನಿರೋಧಕ (HPV) ಲಸಿಕೆ:

ಗರ್ಭಕಂಠದ ಕ್ಯಾನ್ಸರ್ ತಡೆಯಲು ನೀಡಲಾಗುವ ಹೆಚ್‌ಪಿವಿ ಲಸಿಕೆ ಕುರಿತು ಮಾತನಾಡಿದ ಅವರು, “ದೇಶಾದ್ಯಂತ ಬಹುದೊಡ್ಡ ಜನಸಂಖ್ಯೆಗೆ ಈ ಕ್ಯಾನ್ಸರ್ ಬಾಧಿಸುತ್ತಿದೆ. ಭವಿಷ್ಯದಲ್ಲಿ ಹೆಣ್ಣುಮಕ್ಕಳನ್ನು ಈ ಮಾರಕ ರೋಗದಿಂದ ಪಾರು ಮಾಡಲು ಹೆಚ್‌ಪಿವಿ ಲಸಿಕೆ ಸಹಕಾರಿಯಾಗಿದೆ. ಆದರೆ ಇದನ್ನು ಶೇಕಡಾ 100 ರಷ್ಟು ಕಡ್ಡಾಯ ಮಾಡುವುದಿಲ್ಲ. ಜನರಲ್ಲಿ ವ್ಯಾಪಕ ಜಾಗೃತಿ ಮೂಡಿಸುವ ಮೂಲಕ ಲಸಿಕೆ ನೀಡುವ ಕಾರ್ಯಕ್ರಮ ರೂಪಿಸಲಾಗುವುದು” ಎಂದರು.

Exit mobile version