ಉಳ್ಳಾಲ: ಕೃಷ್ಣಾಪುರದ ತ್ವಯಿಬಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಮದರಸಾದ ಅಧ್ಯಾಪಕರೊಬ್ಬರ ಮೇಲೆ ಅವರು ಊಟ ಮಾಡುತ್ತಿದ್ದ ವೇಳೆ ಮಸೀದಿಗೆ ನುಗ್ಗಿ ಹಲ್ಲೆ ನಡೆಸಿರುವ ಘಟನೆ ಖಂಡನೀಯವಾಗಿದ್ದು, ಇದು ಇಡೀ ಮುಸ್ಲಿಂ ಸಮುದಾಯದ ಮೇಲಿನ ದಾಳಿಯಂತೆಯೇ ಪರಿಗಣಿಸಬೇಕಾಗಿದೆ ಎಂದು ನುಸ್ರತುಲ್ ಅನಾಮ್ ಜಿಸಿಸಿ ಅಸೋಸಿಯೇಷನ್ ಬಾಳೆಪುಣಿ ಅಧ್ಯಕ್ಷ ಅಬ್ದುಲ್ ಅಝೀಝ್ ತೆಂಗಿನಡಿ ಹೇಳಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ವಿದ್ಯಾರ್ಥಿಯೊಬ್ಬನಿಗೆ ಶಿಸ್ತು ಕ್ರಮವಾಗಿ ದಂಡ ವಿಧಿಸಿದ್ದನ್ನು ನೆಪವನ್ನಾಗಿ ಮಾಡಿಕೊಂಡು ಮಸೀದಿಗೆ ನುಗ್ಗಿ ಅಧ್ಯಾಪಕರ ಮೇಲೆ ಹಲ್ಲೆ ನಡೆಸಿರುವುದು ಅಕ್ಷಮ್ಯ ಹಾಗೂ ತೀವ್ರ ಖಂಡನೀಯ ಕೃತ್ಯವಾಗಿದೆ. ಧಾರ್ಮಿಕ ಶಿಕ್ಷಣ ನೀಡುವ ಅಧ್ಯಾಪಕರ ಮೇಲೆ ಈ ರೀತಿಯ ಹಲ್ಲೆ ನಡೆಸಿರುವುದು ಸಮಾಜದಲ್ಲಿ ಆತಂಕ ಮೂಡಿಸುವ ಬೆಳವಣಿಗೆಯಾಗಿದೆ ಎಂದು ತಿಳಿಸಿದ್ದಾರೆ.
ಹಲ್ಲೆ ನಡೆಸಿದ ವ್ಯಕ್ತಿಯನ್ನು ಸಂಬಂಧಿಸಿದ ಜಮಾಅತ್ ಸಮಿತಿಯು ಕೂಡಲೇ ಜಮಾಅತ್ನಿಂದ ಬಹಿಷ್ಕರಿಸಿ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಬೇಕು. ಅಲ್ಲದೆ, ಪೊಲೀಸ್ ಇಲಾಖೆಯು ಯಾವುದೇ ಮುಲಾಜಿಲ್ಲದೆ ಹಲ್ಲೆ ನಡೆಸಿದ ವ್ಯಕ್ತಿಯ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಜರುಗಿಸಿ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

